ಒಡಿಶಾದ ರೌರ್ಕೆಲಾ ಮತ್ತು ಭುವನೇಶ್ವರ ನಡುವೆ ಸಂಚರಿಸುತ್ತಿದ್ದ ‘ಇಂಡಿಯಾ ಒನ್ ಏರ್’ (IndiaOne Air) ಸಂಸ್ಥೆಗೆ ಸೇರಿದ 9 ಆಸನಗಳ ಕಿರು ವಿಮಾನವೊಂದು ತಾಂತ್ರಿಕ ದೋಷದಿಂದ ಶನಿವಾರ (ಜ.10) ತುರ್ತು ಭೂಸ್ಪರ್ಶ ಮಾಡಿದೆ. ಪೈಲಟ್ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದ್ದು, ವಿಮಾನದಲ್ಲಿದ್ದ ಸಿಬ್ಬಂದಿ ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆಯಾದ ‘ಉಡಾನ್’ (UDAN) ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಈ ವಿಮಾನವು ಭುವನೇಶ್ವರದಿಂದ ರೌರ್ಕೆಲಾಕ್ಕೆ ತೆರಳುತ್ತಿತ್ತು. ರೌರ್ಕೆಲಾದಿಂದ ಸುಮಾರು 15–20 ಕಿ.ಮೀ ದೂರದಲ್ಲಿರುವ ಕನ್ಸೋರ್ ಬಳಿಯ ತೆರೆದ ಪ್ರದೇಶದಲ್ಲಿ ಮಧ್ಯಾಹ್ನ 1.20ರ ಸುಮಾರಿಗೆ ವಿಮಾನವನ್ನು ಬಲವಂತವಾಗಿ ಇಳಿಸಲಾಗಿದೆ.
ಘಟನೆಯ ವಿವರ
ವಿಮಾನ ಹಾರಾಟ ಆರಂಭಿಸಿದ ಸುಮಾರು 50 ನಿಮಿಷಗಳ ಬಳಿಕ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಪೈಲಟ್, ನಿಯಮಾನುಸಾರ ‘ಮೇಡೇ’ (Mayday – ಅಪಾಯದ ಕರೆ) ಸಂದೇಶ ರವಾನಿಸಿದ್ದಾರೆ. ಬಳಿಕ ವೃತ್ತಿಪರತೆ ಮೆರೆದ ಪೈಲಟ್‌ಗಳು, ಜನವಸತಿ ಇಲ್ಲದ ತೆರೆದ ಪ್ರದೇಶವನ್ನು ಗುರುತಿಸಿ ಸುರಕ್ಷಿತವಾಗಿ ವಿಮಾನವನ್ನು ಇಳಿಸುವಲ್ಲಿ ಯಶಸ್ವಿಯಾದರು ಎಂದು ‘ಇಂಡಿಯಾ ಒನ್ ಏರ್’ ಪ್ರಕಟಣೆ ತಿಳಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್; ಸರ್ಕಾರದ ಹೆಂಗರುಳಿನ ಯೋಜನೆಗೆ ಬೇಕಿದೆ ಅಧಿಕಾರಿಗಳ ಬದ್ಧತೆ
ಗೊಂದಲ ಮತ್ತು ಸ್ಪಷ್ಟನೆ
ಆರಂಭದಲ್ಲಿ ವಿಮಾನವು ಪತನಗೊಂಡಿದೆ ಹಾಗೂ ಪೈಲಟ್ ಸೇರಿದಂತೆ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿತ್ತು. ಆದರೆ, ನಂತರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ ವಿಮಾನಯಾನ ಸಂಸ್ಥೆ, “ವಿಮಾನದಲ್ಲಿ ಇಬ್ಬರು ಸಿಬ್ಬಂದಿ ಮತ್ತು ನಾಲ್ವರು ಪ್ರಯಾಣಿಕರು ಸೇರಿದಂತೆ ಒಟ್ಟು 6 ಜನರಿದ್ದರು. ಯಾರಿಗೂ ಗಂಭೀರ ಸ್ವರೂಪದ ಗಾಯಗಳಾಗಿಲ್ಲ, ಎಲ್ಲರೂ ಸುರಕ್ಷಿತವಾಗಿದ್ದಾರೆ,” ಎಂದು ಸ್ಪಷ್ಟಪಡಿಸಿದೆ.
ಘಟನೆ ನಡೆದ ತಕ್ಷಣ ರಕ್ಷಣಾ ತಂಡಗಳು ಹಾಗೂ ಸ್ಥಳೀಯಾಡಳಿತ ಸ್ಥಳಕ್ಕೆ ಧಾವಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ತನಿಖೆಗೆ ಆದೇಶ
ಸೆಸ್ನಾ ಗ್ರಾಂಡ್ ಕ್ಯಾರವಾನ್ ಮಾದರಿಯ ಈ ವಿಮಾನವು ಯಾವ ಕಾರಣಕ್ಕಾಗಿ ತಾಂತ್ರಿಕ ದೋಷ ಎದುರಿಸಿತು ಎಂಬುದರ ಬಗ್ಗೆ ತನಿಖೆ ಆರಂಭಿಸಲಾಗಿದೆ. ತನಿಖಾ ವರದಿ ಬಂದ ಬಳಿಕವೇ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





