ಬಿಹಾರದಲ್ಲಿ ಚುನಾವಣಾ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿ, 93 ಮಾಜಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನೊಳಗೊಂಡ ಕಾನ್ಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್ (ಸಿಸಿಜಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ವೇದಿಕೆ ಯಾವುದೇ ರಾಜಕೀಯ ಸಂಬಂಧ ಹೊಂದಿಲ್ಲವಾದರೂ, ಭಾರತದ ಸಂವಿಧಾನದ ತತ್ವಗಳಾದ ನಿಷ್ಪಕ್ಷಪಾತ, ತಟಸ್ಥತೆ ಮತ್ತು ಬದ್ಧತೆಗೆ ನಿಷ್ಠರಾಗಿರುವುದಾಗಿ ಹೇಳಿಕೊಂಡಿದೆ.
ಸಿಸಿಜಿ ತನ್ನ ಮುಕ್ತ ಪತ್ರದಲ್ಲಿ, ಎಸ್‌ಐಆರ್ ಪ್ರಕ್ರಿಯೆಯು ಬಡವರನ್ನು, ಶೋಷಿತ ಸಮುದಾಯವನ್ನು ಮತದಾನದಿಂದ ವಂಚಿತಗೊಳಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದೆ. ಈ ಪ್ರಕ್ರಿಯೆಯು ದಾಖಲೆಗಳು ಹೊಂದಿರದವ ದುರ್ಬಲ ವರ್ಗಗಳನ್ನು ಗುರಿಯಾಗಿಸುತ್ತದೆ ಎಂದು ಆರೋಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯು 2003ರ ಚುನಾವಣಾ ಪಟ್ಟಿಯನ್ನು ಆಧರಿಸಿದ್ದು, ಇದರಿಂದಾಗಿ ಕಳೆದ ಎರಡು ದಶಕಗಳಲ್ಲಿ ದಾಖಲಾದ ಮತದಾರರನ್ನು ಅನಗತ್ಯವಾಗಿ ಕಡಿತಗೊಳಿಸುವ ಭೀತಿ ಇದೆ ಎಂದು ವೇದಿಕೆ ಆತಂಕ ವ್ಯಕ್ತಪಡಿಸಿದೆ.
ಈ ಪ್ರಕ್ರಿಯೆಯು ಚುನಾವಣಾ ಆಯೋಗದ (ಇಸಿಐ) ಸಾಂವಿಧಾನಿಕ ಜವಾಬ್ದಾರಿಯ ಭಾಗವೆಂದು ಹೇಳಲಾಗಿದ್ದರೂ, ಇದು ಪೌರತ್ವವನ್ನು ಸಾಬೀತುಪಡಿಸುವ ಜವಾಬ್ದಾರಿಯನ್ನು ಮತದಾರರ ಮೇಲೆ ಹೇರಲಾಗುತ್ತಿದೆ ಎಂದು ಸಿಸಿಜಿ ಟೀಕಿಸಿದೆ. ಇದು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ಪರೋಕ್ಷವಾಗಿ ಜಾರಿಗೊಳಿಸುವಂತಿದೆ ಎಂದು ಆರೋಪಿಸಲಾಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಳಸಿದ ಮತದಾರರ ಪಟ್ಟಿಯನ್ನು ಅಮಾನ್ಯಗೊಳಿಸಿ, ಹೊಸ ಪಟ್ಟಿಯನ್ನು ಸೃಷ್ಟಿಸುವ ಪ್ರಯತ್ನವಾಗಿದೆ ಎಂದು ಸಿಸಿಜಿ ತನ್ನ ಪತ್ರದಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರೈತರು ಮಣ್ಣು ತಿನ್ನುವುದು, ಮನುಷ್ಯರು ವಿಷ ಉಣ್ಣುವುದು ನಿಲ್ಲುವುದೆಂದು?
ಪ್ರಕ್ರಿಯೆಯ ತೀವ್ರ ವೇಗ, ಬೂತ್ ಮಟ್ಟದ ಅಧಿಕಾರಿಗಳಿಗೆ ನೀಡಲಾದ ಕಡಿಮೆ ಸಮಯಾವಕಾಶ ಮತ್ತು ಡಿಜಿಟಲ್ ಮಾಹಿತಿ ಸಂಗ್ರಹಕ್ಕೆ ಅಗತ್ಯ ಮೂಲಸೌಕರ್ಯದ ಕೊರತೆಯನ್ನು ಎತ್ತಿ ತೋರಿಸಲಾಗಿದೆ. ಪತ್ರಕರ್ತ ಅಜಿತ್ ಅಂಜುಂ ಅವರ ಯೂಟ್ಯೂಬ್ ವರದಿಗಳನ್ನು ಉಲ್ಲೇಖಿಸಿ, ಮತದಾರರ ಅರ್ಜಿಗಳನ್ನು ಅಧಿಕಾರಿಗಳೇ ಭರ್ತಿಮಾಡಿ, ಸಹಿಗಳನ್ನು ನಕಲಿ ಮಾಡಿ ತುಂಬಿರುವ ಆರೋಪವಿದೆ. ಪಟ್ನಾದಲ್ಲಿ ಜೂನ್ 21, 2025ರಂದು ನಡೆದ ಜನಸುನ್ವಾಯಿಯಲ್ಲಿ, 14 ಗ್ರಾಮಗಳ 25 ಮಂದಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ಎಸ್‌ಐಆರ್ ಪ್ರಕ್ರಿಯೆಯ ಮೋಸದ ಸ್ವರೂಪವನ್ನು ಬಯಲಿಗೆಳೆದಿರುವುದನ್ನು ಸಿಸಿಜಿ ವೇದಿಕೆ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ. ಚುನಾವಣಾ ಆಯೋಗ ಕೈಗೊಂಡಿರುವ ಈ ಕೃತ್ಯ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಅಪಾಯವೆಂದು ಆತಂಕ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ, ಸಿಸಿಜಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಇಸಿಐ ಮೇಲೆ ಒತ್ತಡ ಹೇರಲು ಕರೆ ನೀಡಿದ್ದು, ಸುಪ್ರೀಂ ಕೋರ್ಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದೆ.
ಎಸ್‌ಐಆರ್ ಪ್ರಕ್ರಿಯೆಯು ಭಾರತದ ಪ್ರಜಾಪ್ರಭುತ್ವದ ಮೂಲಾಧಾರವಾದ ಸಾರ್ವತ್ರಿಕ ವಯಸ್ಕರ ಮತದಾನದ ಹಕ್ಕನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಲಾಗಿದೆ. ಸಿಸಿಜಿ ವೇದಿಕೆಯಲ್ಲಿ ಅನಿತಾ ಅಗ್ನಿಹೋತ್ರಿ, ಶರದ್ ಬೆಹರ್, ಅನುಪ್ ಮುಖರ್ಜಿ, ಎಂ.ಜಿ. ದೇವಸಹಾಯಂ ಮತ್ತು ರಾಮೇಶ್ ನಾರಾಯಣಸ್ವಾಮಿ ಸೇರಿದಂತೆ ಹಲವು ಪ್ರಮುಖ ಮಾಜಿ ಐಎಎಸ್ ಅಧಿಕಾರಿಗಳು ಸಹಿ ಹಾಕಿದ್ದಾರೆ.





