ದೇಶದಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಮತ್ತು ‘ಎಲ್ಲರಿಗೂ ಶಿಕ್ಷಣ’ ಎಂಬ ಘೋಷಣೆಗಳ ನಡುವೆಯೇ, ಕಳೆದ ಹತ್ತು ವರ್ಷಗಳಲ್ಲಿ ಬರೋಬ್ಬರಿ 93 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಿವೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಪೈಕಿ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳದ್ದೇ ಸಿಂಹಪಾಲಾಗಿದೆ.
ರಾಜಸ್ಥಾನದ ಸೀಕರ್ ಲೋಕಸಭಾ ಕ್ಷೇತ್ರದ ಸಿಪಿಐಎಂ ಸಂಸದ ಅಮರಾ ರಾಮ್ ಅವರು ಕೇಳಿದ ಪ್ರಶ್ನೆಗೆ, ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ ಅವರು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಈ ಅಂಕಿ-ಅಂಶಗಳು ಬಹಿರಂಗಗೊಂಡಿವೆ.
ಒದಗಿಸಲಾದ ಮಾಹಿತಿಯ ಪ್ರಕಾರ, 2014-15 ರಿಂದ 2024-25ರ ನಡುವಿನ ದಶಕದಲ್ಲಿ ದೇಶಾದ್ಯಂತ ಒಟ್ಟು 93,000 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಈ ಪೈಕಿ ಮೊದಲ ಆರು ವರ್ಷಗಳಲ್ಲಿಯೇ (2014-15 ರಿಂದ 2019-20) ಅತಿ ಹೆಚ್ಚು, ಅಂದರೆ ಸುಮಾರು 70,000 ಶಾಲೆಗಳು ಸ್ಥಗಿತಗೊಂಡಿವೆ. ಈ ಅವಧಿಯಲ್ಲಿ ಉತ್ತರ ಪ್ರದೇಶವೊಂದರಲ್ಲೇ ದಾಖಲೆಯ 24,590 ಶಾಲೆಗಳು ಮುಚ್ಚಲ್ಪಟ್ಟರೆ, ಮಧ್ಯಪ್ರದೇಶದಲ್ಲಿ 22,438 ಶಾಲೆಗಳಿಗೆ ಬೀಗ ಜಡಿಯಲಾಗಿದೆ. ಈ ಎರಡು ರಾಜ್ಯಗಳೇ ಒಟ್ಟು ಮುಚ್ಚಲ್ಪಟ್ಟ ಶಾಲೆಗಳಲ್ಲಿ ಅರ್ಧದಷ್ಟು ಪಾಲನ್ನು ಹೊಂದಿವೆ. ಉಳಿದಂತೆ ಜಾರ್ಖಂಡ್, ಒಡಿಶಾ ಮತ್ತು ಮಹಾರಾಷ್ಟ್ರದಲ್ಲಿಯೂ ಸಾವಿರಾರು ಶಾಲೆಗಳು ಮುಚ್ಚಲ್ಪಟ್ಟಿವೆ.
ಇದನ್ನು ಒದಿದ್ದೀರಾ? ಈ ದಿನ ಸಂಪಾದಕೀಯ | ಜನಪ್ರತಿನಿಧಿಗಳ ಘನತೆ ಇಲ್ಲದ ಮಾತಿಗೆ ಲಗಾಮು ಬೀಳಬೇಕು
2020-21 ರಿಂದ 2024-25ರ ಅವಧಿಯಲ್ಲಿಯೂ ಈ ಪ್ರವೃತ್ತಿ ಮುಂದುವರಿದಿದ್ದು, ದೇಶಾದ್ಯಂತ ಮತ್ತೆ 18,727 ಶಾಲೆಗಳನ್ನು ಮುಚ್ಚಲಾಗಿದೆ. ಈ ಐದು ವರ್ಷಗಳ ಅವಧಿಯಲ್ಲಿಯೂ ಮಧ್ಯಪ್ರದೇಶವೇ ಅಗ್ರಸ್ಥಾನದಲ್ಲಿದ್ದು (6,972 ಶಾಲೆಗಳು), ನಂತರದ ಸ್ಥಾನಗಳಲ್ಲಿ ಜಮ್ಮು-ಕಾಶ್ಮೀರ ಮತ್ತು ಒಡಿಶಾ ರಾಜ್ಯಗಳಿವೆ.
ಕಡಿಮೆ ದಾಖಲಾತಿ ಮತ್ತು ಸಂಪನ್ಮೂಲಗಳ ಕ್ರೋಢೀಕರಣದ ನೆಪದಲ್ಲಿ ಶಾಲೆಗಳನ್ನು ಹತ್ತಿರದ ದೊಡ್ಡ ಶಾಲೆಗಳೊಂದಿಗೆ ‘ವಿಲೀನ’ ಗೊಳಿಸಿರುವುದೇ ಈ ಬೃಹತ್ ಸಂಖ್ಯೆಯ ಶಾಲೆಗಳ ಮುಚ್ಚುವಿಕೆಗೆ ಪ್ರಮುಖ ಕಾರಣ ಎಂದು ಸರ್ಕಾರ ಸಮಜಾಯಿಷಿ ನೀಡಿದೆ. ಶಿಕ್ಷಣವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿರುವುದರಿಂದ, ಶಾಲೆಗಳನ್ನು ತೆರೆಯುವ ಅಥವಾ ಮುಚ್ಚುವ ನಿರ್ಧಾರ ಆಯಾ ರಾಜ್ಯ ಸರ್ಕಾರಗಳಿಗೆ ಸೇರಿದ್ದು ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ.
ಆದರೆ, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಹತ್ತಿರದ ಶಾಲೆಯೇ ಆಸರೆಯಾಗಿದ್ದು, ವಿಲೀನದ ಹೆಸರಿನಲ್ಲಿ ಶಾಲೆಗಳು ದೂರವಾದರೆ ಮಕ್ಕಳ ಶಿಕ್ಷಣದ ಹಕ್ಕಿಗೆ ಧಕ್ಕೆಯಾಗಲಿದೆ ಎಂಬ ಕಳವಳವನ್ನು ಶಿಕ್ಷಣ ತಜ್ಞರು ವ್ಯಕ್ತಪಡಿಸಿದ್ದಾರೆ. ಹತ್ತು ವರ್ಷಗಳಲ್ಲಿ ಸುಮಾರು ಒಂದು ಲಕ್ಷದಷ್ಟು ಸರ್ಕಾರಿ ಶಾಲೆಗಳು ಕಣ್ಮರೆಯಾಗಿರುವುದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಭವಿಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.





