9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಬಾಲಕಿಯ ಮೃತದೇಹ ಶಾಲಾ ಕೊಠಡಿಯಲ್ಲಿ ಪತ್ತೆಯಾಗಿರುವ ಘಟನೆ ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆಕೆಗೆ ಕಿರುಕುಳ ಮತ್ತು ದೈಹಿಕ ಹಿಂಸೆ ನೀಡಿದ ಆರೋಪದ ಮೇಲೆ ಖಾಸಗಿ ಶಾಲೆಯ ಪ್ರಾಂಶುಪಾಲನನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯು ಬರೆದಿಟ್ಟಿದ್ದ ಡೆತ್‌ನೋಟ್ ಪತ್ತೆಯಾಗಿದೆ. ಅದರಲ್ಲಿ, ಪ್ರಾಂಶುಪಾಲನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪ್ರಾಂಶುಪಾಲನ ತನ್ನನ್ನು ಕೆಟ್ಟದಾಗಿ ಸ್ಪರ್ಶಿಸುತ್ತಿದ್ದರು. ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು ಎಂದು ಡೆತ್‌ನೋಟ್‌ನಲ್ಲಿ ಬಾಲಕಿ ಆರೋಪಿಸಿದ್ದಾರೆ.
ಪ್ರಾಂಶುಪಾಲನ ನಿರಂತರ ಕಿರುಕುಳದಿಂದಲೇ ಬಾಲಕಿ ಸಾವಿನಂತಹ ದೃಢ ನಿರ್ಧಾರ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಶಾಹಿ ಮೋಹನ್ ಸಿಂಗ್ ಹೇಳಿದ್ದಾರೆ.
“ವಿದ್ಯಾರ್ಥಿನಿಯು ಶಾಲಾ ಪ್ರಾಂಶುಪಾಲನ ವಿರುದ್ಧ ಕಿರುಕುಳ ಮತ್ತು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ನಡೆಸಲಾಗುತ್ತಿದೆ” ಎಂದು ಎಸ್‌ಎಸ್‌ಪಿ ಸಿಂಗ್ ಹೇಳಿದ್ದಾರೆ.




