ಅಪರಿಚಿತರೊಂದಿಗೆ ಮಾತನಾಡಲು ನಿರಾಕರಿಸಿದ್ದಕ್ಕಾಗಿ 14 ವರ್ಷದ ಬಾಲಕಿ ಮೇಲೆ ಛಾಯಾಗ್ರಾಹಕನೊಬ್ಬ ಆ್ಯಸಿಡ್ ದಾಳಿ ನಡೆಸಿರುವ ಆಘಾತಕಾರಿ ಘಟನೆ ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ನಡೆದಿದೆ. ಆ್ಯಸಿಡ್ ಬಾಲಕಿಯ ಕೈಬೆರಳುಗಳು ಮತ್ತು ಬಟ್ಟೆ ಮೇಲೆ ಬಿದ್ದಿದ್ದು, ಸಂಭವಿಸಬಹುದಾದ ದೊಡ್ಡ ದುರಂತದಿಂದ ಬಾಲಕಿ ಪಾರಾಗಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಯನ್ನು ಓಂಪ್ರಕಾಶ್ ಅಲಿಯಾಸ್ ಜಾನಿ ಎಂದು ಗುರುತಿಸಲಾಗಿದೆ. ಆತ, ಮದುವೆ ಸಮಾರಂಭವೊಂದರಲ್ಲಿ ನೋಡಿದ್ದಾಗಿಯೂ, ಆಕೆಯ ಮೇಲೆ ಪ್ರೀತಿಯಾಗಿರುವುದಾಗಿಯೂ ತನ್ನ ತಂದೆ ಚಂದ್ರರಾಮ್ ಮೇಘವಾಲ್ ಬಳಿ ಹೇಳಿಕೊಂಡಿದ್ದಾನೆ. ನಂತರ, ತಂದೆ ಚಂದ್ರರಾಮ್ ಬಾಲಕಿಯನ್ನು ಸಂಪರ್ಕಿಸಿದ್ದಾರೆ. ಈ ವೇಳೆ, ಆತನೊಂದಿಗೆ ಮಾತನಾಡಲು ಬಾಲಕಿ ನಿರಾಕರಿಸಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿರುವುದಾಗಿ ವರದಿಯಾಗಿದೆ.
ಬಳಿಕ, ಓಂಪ್ರಕಾಶ್ ಕೂಡ ಆಕೆಯೊಂದಿಗೆ ಮಾತನಾಡಲು ಯತ್ನಿಸಿದ್ದಾನೆ. ಆತನ ವರ್ತನೆಯನ್ನು ಬಾಲಕಿ ಖಂಡಿಸಿದ್ದಾರೆ. ಆಕೆಯ ನಿರಾಕರಣೆಯಿಂದ ಕುಪಿತಗೊಂಡ ಆರೋಪಿ ಓಂಪ್ರಕಾಶ್ ಸೇಡು ತೀರಿಸಿಕೊಳ್ಳಲು ನಿರ್ಧಿರಿಸಿದ್ದನೆಂದು ವರದಿಯಾಗಿದೆ.
ಬಾಲಕಿ ತನ್ನ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಆಕೆಯ ಮೇಲೆ ಓಂಪ್ರಕಾಶ್ ಆ್ಯಸಿಡ್ ಬಾಟಲಿಯನ್ನು ಎಸೆದಿದ್ದಾನೆ. ದಾಳಿಯಲ್ಲಿ ಬಾಲಕಿಯ ಬಟ್ಟೆ ಮತ್ತು ಬೆರಳು ಸುಟ್ಟಿವೆ.
ದಾಳಿ ನಡೆಸಿ ಆರೋಪಿ ಪರಾರಿಯಾಗಿದ್ದ. ಆತನ ಕುರಿತು ಮಾಹಿತಿ ನೀಡಿದವರಿಗೆ 25,000 ರೂ. ಬಹುಮಾನ ನೀಡುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಮೃತಾ ದುಹಾನ್ ಘೋಷಿಸಿದ್ದರು. ಇದೀಗ, ಆರೋಪಿಯನ್ನು ಬಂಧಿಸಿದ್ದಾರೆ. ಮಾರುಕಟ್ಟೆಯಲ್ಲಿ ಆತನನ್ನು ಮೆರವಣಿಗೆ ಮಾಡಿದ್ದು, ಬೇರಾರು ಇಂತಹ ಕೃತ್ಯಗಳಿಗೆ ಮುಂದಾಗಬಾರದು ಎಂದು ಎಚ್ಚರಿಕೆ ಮತ್ತು ಜಾಗೃತಿ ಮೂಡಿಸಿದ್ದಾರೆ.




