ಬೆಟ್ಟಿಂಗ್ ಆ್ಯಪ್ ಹಗರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳನ್ನು ಸಿಐಡಿ ತನಿಖೆ ನಡೆಸುತ್ತಿದೆ. ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡಿದ್ದ ಹಲವು ನಟ-ನಟಿಯನ್ನೂ ವಿಚಾರಣೆಗೆ ಒಳಪಡಿಸಿದೆ. ಅಂತೆಯೇ, ನಟ ಪ್ರಕಾಶ್ ರಾಜ್ ಅವರಿಗೂ ಸಿಐಡಿ ಸಮನ್ಸ್ ನೀಡಿತ್ತು. ಸಿಐಡಿ ಎದುರು ವಿಚಾರಣೆಗೆ ಹಾಜರಾಗಿದ್ದ ಪ್ರಕಾಶ್ ರಾಜ್, ವಿಚಾರಣೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ‘ನಾನು ಗೊತ್ತಿದ್ದೋ, ಗೊತ್ತಿಲ್ಲದೆಯೋ ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡಿದ್ದೇನೆ. ಅದು ತಪ್ಪು. ಅದಕ್ಕಾಗಿ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ.
ಪ್ರಕಾಶ್ ರಾಜ್ ಅವರು ಹೈದರಾಬಾದ್‌ನಲ್ಲಿ ಸಿಐಡಿ ಎದುರು ವಿಚಾರಣೆಗೆ ಹಾಜರಾಗಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “2016ರಲ್ಲಿ ನಾನು ಒಂದು ಗೇಮಿಂಗ್ ಆ್ಯಪ್‌ಅನ್ನು ಪ್ರಚಾರ ಮಾಡಿದ್ದೆ. ಆದರೆ, ಅದು 2017ರಲ್ಲಿ ಬೆಟ್ಟಿಂಗ್ ಆ್ಯಪ್ ಆಗಿ ಮಾರ್ಪಟ್ಟಿತು. ಆಗಲೇ, ನನ್ನ ಒಪ್ಪಂದವೂ ರದ್ದಾಯಿತು. ಆದರೂ, ನಾನು ಗೊತ್ತಿದ್ದು ಮಾಡಿದ್ದರೂ ಗೊತ್ತಿಲ್ಲದೇ ಮಾಡಿದ್ದರೂ ಪ್ರಚಾರ ಮಾಡಿದ್ದು ತಪ್ಪು. ಮುಂದೆದೂ ಇಂತಹ ತಪ್ಪು ಮಾಡುವುದಿಲ್ಲ” ಎಂದು ಹೇಳಿದ್ದಾರೆ.
“ನಾನು ಬ್ಯಾಂಕ್ ಮಾಹಿತಿ ಮತ್ತು ಸಂಬಂಧಿಸಿದ ಎಲ್ಲ ವಿವರಗಳ ದಾಖಲೆಗಳನ್ನು ತನಿಖಾ ತಂಡಕ್ಕೆ ನೀಡಿದ್ದೇನೆ. ಯುವ ಜನರು ಬೆಟ್ಟಿಂಗ್ ಜಾಲಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಹಣ ಕಳೆದುಕೊಳ್ಳುತ್ತಿದ್ದಾರೆ. ಕಷ್ಟಪಟ್ಟು ದುಡಿದರೆ ಮಾತ್ರವೇ ಹಣ ಮತ್ತು ಯಶಸ್ಸು ಸಿಗುತ್ತದೆ” ಎಂದಿದ್ದಾರೆ.




