ಹಿರಿಯ ನಟ ಸುನೀಲ್ ಶೆಟ್ಟಿ ಅವರು ತಮ್ಮ ಫೋಟೋ ದುರ್ಬಳಕೆ ವಿರುದ್ಧವಾಗಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವ್ಯಕ್ತಿತ್ವ ಹಕ್ಕುಗಳ ರಕ್ಷಣೆ ಕೋರಿ ನಟ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಹಲವು ಸಾಮಾಜಿಕ ಮಾಧ್ಯಮಗಳು ಮತ್ತು ವೆಬ್‌ಸೈಟ್‌ಗಳು ಯಾವುದೇ ಅನುಮತಿಯಿಲ್ಲದೆ ತಮ್ಮ ವ್ಯವಹಾರವನ್ನು ಪ್ರಚಾರ ಮಾಡಲು ತಮ್ಮ ಫೋಟೋವನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ನಟ ಸುನೀಲ್ ಶೆಟ್ಟಿ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಪತ್ನಿ ಮಾಡಿದ ಅಡುಗೆ, ತೊಟ್ಟ ಬಟ್ಟೆಯ ಬಗ್ಗೆ ಟೀಕೆ ಕ್ರೌರ್ಯವಲ್ಲ: ಬಾಂಬೆ ಹೈಕೋರ್ಟ್
ಶುಕ್ರವಾರ ನ್ಯಾಯಮೂರ್ತಿ ಆರಿಫ್ ಡಾಕ್ಟರ್ ಅವರು ಈ ಅರ್ಜಿ ವಿಚಾರಣೆಯನ್ನು ನಡೆಸಿದ್ದಾರೆ. ಶೆಟ್ಟಿ ಅವರ ವಕೀಲ ಡಾ. ಬೀರೇಂದ್ರ ಸರಾಫ್ ಅವರ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು ತಮ್ಮ ಆದೇಶವನ್ನು ಕಾಯ್ದಿರಿಸಿದ್ದಾರೆ. ರಿಯಲ್ ಎಸ್ಟೇಟ್ ಏಜೆನ್ಸಿ ಮತ್ತು ಜೂಜಾಟದ ಸೈಟ್‌ಗಳಲ್ಲಿ ನಟನ ಚಿತ್ರವನ್ನು ಬಳಸಲಾಗಿದೆ. ಆದರೆ ಈ ವೆಬ್‌ಸೈಟ್‌ಗಳೊಂದಿಗೆ ಯಾವುದೇ ಸಂಬಂಧವನ್ನು ನಾವು ಹೊಂದಿಲ್ಲ ಎಂದು ಡಾ. ಸರಾಫ್ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದ್ದಾರೆ.
“ಶೆಟ್ಟಿಗೆ ಅವರ ವ್ಯಕ್ತಿತ್ವ ಮತ್ತು ಫೋಟೋಗಳ ಮೇಲೆ ಹಕ್ಕಿದೆ. ಅಧಿಕಾರವಿಲ್ಲದೆ ಅವುಗಳನ್ನು ಬಳಸುವುದು ಅವರ ಖ್ಯಾತಿಗೆ ಹಾನಿ ಮಾಡುತ್ತಿದೆ” ಎಂದು ನಟರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.





