ಚಂದ್ರಯಾನ 3ರ ಯಶಸ್ಸಿನ ಬೆನ್ನಲ್ಲೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್-1 ನೌಕೆಯನ್ನು ಪಿಎಸ್‌ಎಲ್‌ವಿ-ಸಿ 57 ರಾಕೆಟ್ ಮೂಲಕ ಸೆ.2ರಂದು ಶನಿವಾರ ಆಂಧಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಿದೆ.
ಶನಿವಾರವೇ ಆದಿತ್ಯ ಎಲ್-1 ಅನ್ನು ಕೆಳಸ್ತರದ ಭೂ ಕಕ್ಷೆಯೊಳಗೆ ಸೇರಿಸಲಾಗುವುದು. ಕ್ರಮೇಣ ಭೂ ಕಕ್ಷೆಯ ಎತ್ತರವನ್ನು ಹೆಚ್ಷಿಸುತ್ತಾ ಹೋಗಲಾಗುತ್ತದೆ. ಇಂದು ಉಡಾವಣೆಯಾಗಲಿರುವ ಎಲ್-1 ನೌಕೆಯು ನಿಗದಿತ ಬಿಂದು ತಲುಪಲು 125 ದಿನ ತೆಗೆದುಕೊಳ್ಳಲಿದೆ.
ಭೂಮಿಯಿಂದ 15 ಲಕ್ಷ ಕಿಮೀ ದೂರದಲ್ಲಿರುವ ಲಾಂಗ್ರೇಜ್ ಎಲ್-1 ಬಿಂದುವಿನಲ್ಲಿ ಆದಿತ್ಯ ಎಲ್-1 ಅಂತರಿಕ್ಷ ವೀಕ್ಷಣಾಲಯವನ್ನು ಇರಿಸಲಾಗುವುದು. ಆದಿತ್ಯ ಎಲ್-1 ನೌಕೆಯಲ್ಲಿ ವಿವಿಧ ರೀತಿಯ ಏಳು ಸಾಧನಗಳನ್ನು ಅಳವಡಿಸಲಾಗಿದೆ. ಇದು ಯಾವುದೇ ಅಡಚಣೆಯಿಲ್ಲದೇ ನಿರಂತರವಾಗಿ ಸೂರ್ಯನಲ್ಲಿ ನಡೆಯುವ ಸೌರ ಚಟುವಟಿಕೆಗಳನ್ನು ಗಮನಿಸುತ್ತದೆ.
ಚಂದ್ರ ಮತ್ತು ಮಂಗಳನ ಅಧ್ಯಯನದ ನಂತರ ಸೂರ್ಯನ ಅಧ್ಯಯನಕ್ಕೆ ಮುಂದಾದ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ. ಈ ಯೋಜನೆಯಿಂದ ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಮತ್ತು ಸಾಮರ್ಥ್ಯ ಹೆಚ್ಚಾಗಲಿದೆ.





