ವಯಸ್ಕರಿಬ್ಬರು ಮದುವೆಗೆ ಕಾನೂನುಬದ್ಧ ವಯಸ್ಸನ್ನು ತಲುಪದಿದ್ದರೂ ಪರಸ್ಪರ ಒಪ್ಪಿಗೆಯಿಂದ ಲಿವ್-ಇನ್ ಸಂಬಂಧದಲ್ಲಿರಲು ಅರ್ಹರು. ಅವರ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸಲಾಗುವುದಿಲ್ಲ ಎಂದು ರಾಜಸ್ಥಾನ ಹೈಕೋರ್ಟ್ ಹೇಳಿದೆ.
ಕೋಟಾದ 18 ವರ್ಷದ ಯುವತಿ ಮತ್ತು 19 ವರ್ಷದ ಯುವಕ ರಕ್ಷಣೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅನೂಪ್ ಧಂಡ್ ಅವರ ಏಕಸದಸ್ಯ ಪೀಠವು ನಡೆದಿದೆ. ಈ ಅರ್ಜಿಯಲ್ಲಿ ಯುವಕ, ಯುವತಿ ತಾವು ಸ್ವತಂತ್ರವಾಗಿ ಜತೆಗೆ ವಾಸಿಸುತ್ತಿದ್ದೇವೆ. 2025ರ ಅಕ್ಟೋಬರ್ 27ರಂದು ಲಿವ್-ಇನ್ ಒಪ್ಪಂದವನ್ನು ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ‘ಲಿವ್-ಇನ್ ಸಂಬಂಧ’ವನ್ನು ಮದುವೆ ಎಂದು ಕಾನೂನು ಪರಿಗಣಿಸುವುದಿಲ್ಲ: ಕೇರಳ ಹೈಕೋರ್ಟ್
ಆದರೆ ಯುವತಿಯ ಕುಟುಂಬವು ಈ ಸಂಬಂಧವನ್ನು ವಿರೋಧಿಸಿದ್ದು ಇಬ್ಬರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದೆ. ಈ ಬಗ್ಗೆ ಕೋಟಾ ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಈ ಅರ್ಜಿಯನ್ನು ವಿರೋಧಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ವಿವೇಕ್ ಚೌಧರಿ, “ಯುವಕನಿಗೆ ಮದುವೆಗೆ ಕನಿಷ್ಠ ಕಾನೂನುಬದ್ಧ ವಯಸ್ಸಾದ 21 ವರ್ಷ ಆಗಿಲ್ಲ. ಆದ್ದರಿಂದ ಆತನಿಗೆ ಲಿವ್-ಇನ್ ಸಂಬಂಧದಲ್ಲಿರಲು ಅವಕಾಶ ನೀಡಬಾರದು” ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು, “ಅರ್ಜಿದಾರರು ಮದುವೆಯಾಗುವ ವಯಸ್ಸಿನವರಲ್ಲ ಎಂಬ ಕಾರಣಕ್ಕಾಗಿ ಸಂವಿಧಾನದ 21ನೇ ವಿಧಿ ಯುವಕನಿಗೆ ನೀಡುವ ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ನಿರಾಕರಿಸಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದೆ. ಹಾಗೆಯೇ ಲಿವ್-ಇನ್ ಸಂಬಂಧಗಳನ್ನು ಭಾರತೀಯ ಕಾನೂನಿನಡಿಯಲ್ಲಿ ನಿಷೇಧಿಸಲಾಗಿಲ್ಲ ಅಥವಾ ಅದು ಅಪರಾಧವಲ್ಲ ಎಂದೂ ಹೇಳಿದ್ದಾರೆ.
ಹಾಗೆಯೇ ಅರ್ಜಿಯಲ್ಲಿ ಕುಟುಂಬಸ್ಥರು ಬೆದರಿಕೆ ಹಾಕಿರುವ ಬಗ್ಗೆ ಉಲ್ಲೇಖವಿರುವುದರಿಂದ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಭಿಲ್ವಾರ ಮತ್ತು ಜೋಧ್‌ಪುರ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದ್ದಾರೆ. ಅಗತ್ಯವಿದ್ದರೆ ದಂಪತಿಗಳಿಗೆ ಅಗತ್ಯ ರಕ್ಷಣೆಯನ್ನು ಒದಗಿಸಲು ನಿರ್ದೇಶಿಸಿದ್ದಾರೆ.





