ಭಾರತಕ್ಕೆ ಮಹತ್ವದ ಆರು ದಿನಗಳ ಪ್ರವಾಸ ಕೈಗೊಂಡಿರುವ ಅಫ್ಘಾನಿಸ್ತಾನದ ಪ್ರಭಾರ ವಿದೇಶಾಂಗ ಸಚಿವ ಅಮಿರ್ ಖಾನ್ ಮುತ್ತಾಕಿ ಅವರು ಶುಕ್ರವಾರ ಹೊಸದಿಲ್ಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತೆಯರಿಗೆ ಭಾಗವಹಿಸಲು ಅನುಮತಿ ನಿರಾಕರಿಸಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ದಿ ಇಂಡಿಪೆಂಡೆಂಟ್ ಪತ್ರಿಕೆಯ ವರದಿಗಾರ್ತಿ ಹಾಗೂ ಪ್ರಮುಖ ಸುದ್ದಿವಾಹಿನಿಗಳ ಹಿರಿಯ ವರದಿಗಾರ್ತಿಯರು ಸೇರಿದಂತೆ ಮಹಿಳಾ ಪತ್ರಕರ್ತೆಯರಿಗೆ ಪತ್ರಿಕಾಗೋಷ್ಠಿಗೆ ಪ್ರವೇಶ ನಿರಾಕರಿಸಲಾಗಿತ್ತು. ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಜೊತೆ ಮಾತುಕತೆ ನಡೆಸಿದ ಬಳಿಕ ಮುತ್ತಾಕಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಅಫ್ಘಾನ್‌ನ ಪ್ರಭಾರ ವಿದೇಶಾಂಗ ಸಚಿವರ ಪತ್ರಿಕಾಗೋಷ್ಠಿಗೆ ಮಹಿಳಾ ಪತ್ರಕರ್ತೆಯರ ನಿಷೇಧವನ್ನು ಪತ್ರಕರ್ತರು ಖಂಡಿಸಿದ್ದಾರೆ. ತಾಲಿಬಾನ್‌ನ ಸ್ತ್ರೀವಿರೋಧಿ ನಿಲುವಿನ ಪ್ರತಿಫಲನ ಇದಾಗಿದೆಯೆಂದು ಅವರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೆಡಿಕಲ್ ಮಾಫಿಯಾಗೆ ಅಮಾಯಕ ಮಕ್ಕಳು ಬಲಿ; ಸರ್ಕಾರಗಳೇ ಜವಾಬ್ದಾರಿ
ದೇಶದಲ್ಲಿ ಇಂತಹ ತಾರತಮ್ಯವಾದಿ ನೀತಿಗಳಿಗೆ ದೇಶದಲ್ಲಿ ಅವಕಾಶ ನೀಡಿದ್ದಕ್ಕಾಗಿ ಭಾರತ ಸರಕಾರವನ್ನು ಕೂಡಾ ಪತ್ರಕರ್ತರು ಖಂಡಿಸಿದ್ದಾರೆ.
‘‘ಭಾರತ ಸರಕಾರದ ಮೂಗಿನ ನೇರದಲ್ಲೇ, ದೇಶದ ರಾಜಧಾನಿಯ ಹೃದಯಭಾಗದಲ್ಲಿ ಅಫ್ಘಾನ್ ವಿದೇಶಾಂಗ ಸಚಿವರ ಮುತ್ತಾಕಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದು, ಉದ್ದೇಶಪೂರ್ವಕವಾಗಿ ಮಹಿಳೆಯರನ್ನು ಹೊರಗಿಟ್ಟಿದ್ದಾರೆ. ಇದಕ್ಕೆ ಅವಕಾಶ ನೀಡಲು ಹೇಗೆ ಸಾಧ್ಯ? ಇದಕ್ಕೆ ಯಾರು ಅನುಮೋದನೆ ನೀಡಿದರು?’’ ಎಂದು ಲೇಖಕಿ ಹಾಗೂ ಪತ್ರಕರ್ತೆ ನಯನಿಮಾ ಬಸು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.





