ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ಬಂಧನಕ್ಕೆ ಒಳಗಾಗಿ ಸದ್ಯ ಜೋಧಪುರ ಜೈಲಿನಲ್ಲಿರುವ ಶೈಕ್ಷಣಿಕ ಸುಧಾರಕ, ಪರಿಸರವಾದಿ, ಲಡಾಖ್ ಹೋರಾಟಗಾರ ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಜೋಧಪುರದ ಏಮ್ಸ್‌ಗೆ ದಾಖಲಿಸಲಾಗಿದೆ.
ಜನವರಿ 31ರ ಶನಿವಾರ ಬೆಳಿಗ್ಗೆ 6.30 ಗಂಟೆ ಸುಮಾರಿಗೆ ಪೊಲೀಸರು ಜೋಧಪುರ ಕೇಂದ್ರ ಕಾರಾಗೃಹದಿಂದ ಏಮ್ಸ್‌ನ ತುರ್ತು ವಿಭಾಗಕ್ಕೆ ವಾಂಗ್‌ಚುಕ್ ಅವರನ್ನು ಸ್ಥಳಾಂತರಿಸಿದ್ದಾರೆ. ಸುಮಾರು ಒಂದೂವರೆ ಗಂಟೆಗಳ ಕಾಲ ವಾಂಗ್‌ಚುಕ್ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಹಾಗೆಯೇ ಜೀರ್ಣಾಂಗ ವ್ಯವಸ್ಥೆ ಮತ್ತು ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗಳ ಪತ್ತೆ ಹಚ್ಚಲು ಗ್ಯಾಸ್ಟ್ರೋಎಂಟರಾಲಜಿಸ್ಟ್ ಪರೀಕ್ಷೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಸೋನಮ್ ವಾಂಗ್‌ಚುಕ್ ಜೈಲು ಸೇರಿ 100 ದಿನ: ಲಡಾಖ್ ಜನರಿಗಾಗಿ ಧ್ವನಿಯೆತ್ತಿ ಮೋದಿ ಶತ್ರುವಾದರೆ?
ವಾಂಗ್‌ಚುಕ್ ಉದರ ಸಂಬಂಧ ಕಾಯಿಲೆಗಳಿಂದ ಬಳಲುತ್ತಿದ್ದು, ದೇಹದ ಹಲವು ಭಾಗಗಳಲ್ಲಿ ನೋವು ಹೊಂದಿದ್ದಾರೆ. ನಿನ್ನೆಯೂ ಅವರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇನ್ನು ಇಂದು ಪರೀಕ್ಷೆಯ ನಂತರ ಬಿಗಿ ಭದ್ರತೆಯೊಂದಿಗೆ ಜೋಧಪುರ ಕೇಂದ್ರ ಕಾರಾಗೃಹಕ್ಕೆ ವಾಪಸ್ ಕರೆತರಲಾಗಿದೆ.
ಇನ್ನು ವಾಂಗ್‌ಚುಕ್ ಆರೋಗ್ಯದ ಬಗ್ಗೆ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಕಳವಳ ವ್ಯಕ್ತಪಡಿಸಿದ್ದರು. ವಾಂಗ್‌ಚುಕ್ ಆರೋಗ್ಯ ಹದಗೆಡುತ್ತಿದೆ ಎಂದು ಉಲ್ಲೇಖಿಸಿ ಹಿರಿಯ ವಕೀಲ ಕಪಿಲ್ ಸಿಬಲ್ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಗುರುವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ.ಬಿ. ವರಾಲೆ ಅವರನ್ನೊಳಗೊಂಡ ಪೀಠವು, ವಾಂಗ್‌ಚುಕ್ ಅವರನ್ನು ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯರಿಂದ ಪರೀಕ್ಷಿಸುವಂತೆ ಜೈಲಿನ ಅಧಿಕಾರಿಗಳಿಗೆ ನಿರ್ದೇಶಿಸಿದ್ದರು.
ಜೈಲಿನಲ್ಲಿ ಒದಗಿಸಲಾದ ಕುಡಿಯುವ ನೀರಿನ ಗುಣಮಟ್ಟದ ಸಮಸ್ಯೆಯಿಂದಾಗಿ ವಾಂಗ್‌ಚುಕ್ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪದೇ ಪದೇ ಈ ಬಗ್ಗೆ ತಿಳಿಸಿದ್ದರೂ, ಅವರಿಗೆ ಚಿಕಿತ್ಸೆ ನೀಡಿಲ್ಲ ಎಂದು ಸಿಬಲ್ ದೂರಿದ್ದಾರೆ. ಹಾಗೆಯೇ ವಾಂಗ್‌ಚುಕ್‌ಗೆ ವಾರಕ್ಕೊಮ್ಮೆ ವೈದ್ಯಕೀಯ ತಪಾಸಣೆ ನಡೆಸಬೇಕು. ಶುದ್ಧ ಕುಡಿಯುವ ನೀರನ್ನು ಕುಟುಂಬವೇ ಕಳುಹಿಸಲು ಅನುಮತಿ ನೀಡಬೇಕು ಎಂದೂ ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಫೆಬ್ರವರಿ 2ರ ಒಳಗಾಗಿ ವಾಂಗ್‌ಚುಕ್ ಅವರ ವೈದ್ಯಕೀಯ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದೆ.
ಇದನ್ನು ಓದಿದ್ದೀರಾ? ಜೈಲು ಬ್ಯಾರಕ್‌ಗಳನ್ನು ಸುಧಾರಿಸುವ ಪ್ರಯೋಗಕ್ಕಾಗಿ ವಾಂಗ್‌ಚುಕ್‌ಗೆ ಥರ್ಮಾಮೀಟರ್ ಬೇಕಾಗಿದೆ: ಪತ್ನಿ ಆಂಗ್ಮೋ
ಇನ್ನು ರಾಜಸ್ಥಾನ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್, ವಾಂಗ್‌ಚುಕ್ ಅವರಿಗೆ ನಿಯಮಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ನಾಲ್ಕು ತಿಂಗಳುಗಳಲ್ಲಿ ಜೈಲು ವೈದ್ಯರು 21 ಬಾರಿ ಅವರನ್ನು ಪರೀಕ್ಷಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಲಡಾಖ್ ರಾಜ್ಯ ಸ್ಥಾನಮಾನಕ್ಕಾಗಿ ಹೋರಾಟ ನಡೆಸುತ್ತಿದ್ದ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ, ಶಿಕ್ಷಣತಜ್ಞ ವಾಂಗ್‌ಚುಕ್ ಅವರನ್ನು ಸೆಪ್ಟೆಂಬರ್‌ನಲ್ಲಿ ಎನ್‌ಎಸ್‌ಎ ಅಡಿಯಲ್ಲಿ ಬಂಧಿಸಲಾಗಿದೆ. ನಾಲ್ವರ ಸಾವಿಗೆ ಕಾರಣವಾದ ಲಡಾಖ್ ಹಿಂಸಾಚಾರಕ್ಕೆ ವಾಂಗ್‌ಚುಕ್ ಪ್ರಚೋದನಕಾರಿ ಭಾಷಣವೇ ಕಾರಣ ಎಂದು ಹೇಳಿ ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿದೆ. ಸದ್ಯ ವಾಂಗ್‌ಚುಕ್ 100ಕ್ಕೂ ಅಧಿಕ ದಿನಗಳಿಂದ ಜೋಧಪುರದ ಕೇಂದ್ರ ಕಾರಾಗೃಹದಲ್ಲಿದ್ದು ಸದ್ಯ ಸೋನಮ್ ಪತ್ನಿ ಎನ್‌ಎಸ್‌ಎ ಆಂಗ್ಮೋ ಬಂಧನ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.





