‘ಮಾನವ ಬಾಂಬ್’ ಬೆದರಿಕೆ ಬಂದ ಕಾರಣದಿಂದಾಗಿ ಹೈದರಾಬಾದ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಮುಂಬೈನಲ್ಲಿ ಲ್ಯಾಂಡ್ ಆಗಿರುವ ಘಟನೆ ಶನಿವಾರ ನಡೆದಿದೆ. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (RGIA) ಹೈದರಾಬಾದ್‌ನಲ್ಲಿ ವಿಮಾನ ಇಳಿಸದಂತೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ ಎಂದು ಹೇಳಲಾಗಿದೆ.
ಪೊಲೀಸರ ಪ್ರಕಾರ, ಬೆಳಿಗ್ಗೆ 5.30ರ ಸುಮಾರಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಜೆಡ್ಡಾದಿಂದ ಹೈದರಾಬಾದ್‌ಗೆ ಹಾರುತ್ತಿದ್ದ ಇಂಡಿಗೋ ವಿಮಾನ 6E 68 ನಲ್ಲಿ ಬಾಂಬ್ ಇದೆ ಎಂದು ಹೇಳಲಾಗಿತ್ತು. “ಹೈದರಾಬಾದ್‌ನಲ್ಲಿ ಇಂಡಿಗೋ (ವಿಮಾನ) ಇಳಿಯುವುದನ್ನು ತಡೆಯಿರಿ. ಎಲ್‌ಟಿಟಿಇ-ಐಎಸ್ಐ 1984ರ ಮದ್ರಾಸ್ ವಿಮಾನ ನಿಲ್ದಾಣ ಸ್ಫೋಟದಂತೆ ಸ್ಫೋಟಕ್ಕೆ ಯೋಜಿಸಿದ್ದಾರೆ” ಎಂದು ಇಮೇಲ್ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ.
ಇದನ್ನು ಓದಿದ್ದೀರಾ? ರನ್‌ವೇಯಲ್ಲೇ ಊಟ ಮಾಡಿದ ವಿಮಾನ ಪ್ರಯಾಣಿಕರು: ವಿಡಿಯೋ ವೈರಲ್; ‘ಇಂಡಿಗೋ’ ಸಂಸ್ಥೆಗೆ ನೋಟಿಸ್
ಬೆದರಿಕೆಯ ನಂತರ, ವಿಮಾನವನ್ನು ಮುಂಬೈಗೆ ತಿರುಗಿಸಲಾಗಿದ್ದು, ಅಲ್ಲಿ ಸುರಕ್ಷಿತವಾಗಿ ಇಳಿದಿದೆ. ಲ್ಯಾಂಡಿಂಗ್ ನಂತರ ಸಂಪೂರ್ಣ ಭದ್ರತಾ ತಪಾಸಣೆಗಳನ್ನು ನಡೆಸಲಾಗಿದೆ. “ಎಲ್ಲಾ (ಭದ್ರತಾ) ತಪಾಸಣೆಗಳನ್ನು ನಡೆಸಲಾಯಿತು. ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಪ್ರಕರಣ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ವಿಮಾನದ ಮಾರ್ಗ ಬದಲಾಯಿಸಿದ ಬಳಿಕ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ. ಉಚಿತ ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಇಂಡಿಗೋ ಸಂಸ್ಥೆ ಹೇಳಿದೆ.





