ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು 12 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲಾಗಿದೆ. ಕರ್ನಾಟಕ ಸೇರಿದಂತೆ ಇನ್ನೂ ಹಲವು ರಾಜ್ಯಗಳಲ್ಲಿ ಎಸ್‌ಐಆರ್ ನಡೆಸಲು ಚುನಾವಣಾ ಆಯೋಗ ಸಿದ್ದತೆ ನಡೆಸುತ್ತಿದೆ. ಈ ನಡುವೆ ಈಗಾಗಲೇ ಎಸ್‌ಐಆರ್ ನಡೆದಿರುವ ರಾಜ್ಯಗಳಿಗೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಬಹುತೇಕ ರಾಜ್ಯಗಳಲ್ಲಿ ಮತದಾದರ ಪಟ್ಟಿಯಿಂದ ಅಧಿಕವಾಗಿ ಮಹಿಳೆಯರ ಹೆಸರುಗಳೇ ಮಾಯವಾಗಿದೆ.
ಬಿಹಾರದಲ್ಲಿ ಎಸ್‌ಐಆರ್ ಬಳಿಕ ಲಿಂಗಾನುಪಾತವು ಪ್ರತಿ 1,000 ಪುರುಷರಿಗೆ 907 ಮಹಿಳೆಯರಿಂದ 892ಕ್ಕೆ ಕುಸಿದಿದೆ. ಸುಮಾರು 65 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಅದರಲ್ಲಿ ಮಹಿಳೆಯರ ಸಂಖ್ಯೆ ಗಮನಾರ್ಹವಾಗಿದೆ. ಸರಿಸುಮಾರು 22.7 ಲಕ್ಷದಿಂದ 23 ಲಕ್ಷದಷ್ಟು ಮಹಿಳೆಯರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಇದನ್ನು ಓದಿದ್ದೀರಾ? ಎಸ್ಐಆರ್ ಪ್ರಕ್ರಿಯೆ ಮುಂದೂಡಲು ಕೋರಿ ಸುಪ್ರೀಂ ಮೆಟ್ಟಿಲೇರಿದ ಕೇರಳ ಸರ್ಕಾರ
ಇನ್ನು ಉತ್ತರ ಪ್ರದೇಶದಲ್ಲಿ ಒಟ್ಟು 2.89 ಕೋಟಿ ಮತದಾರರನ್ನು ಕೈಬಿಡಲಾಗಿದ್ದು, ಈ ಪೈಕಿ1.55 ಕೋಟಿಯಷ್ಟು ಮಹಿಳೆಯರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದರಿಂದಾಗಿ ರಾಜ್ಯದ ಮತದಾರರ ಲಿಂಗ ಅನುಪಾತವು ಪ್ರತಿ 1,000 ಪುರುಷರಿಗೆ 877 ರಿಂದ 824ಕ್ಕೆ ಇಳಿಕೆಯಾಗಿದೆ. ತಮಿಳುನಾಡಿನಲ್ಲಿ ಎಸ್‌ಐಆರ್ ಬಳಿಕ 74 ಲಕ್ಷ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಪೈಕಿ ಸುಮಾರು 49.9 ಲಕ್ಷಕ್ಕೂ ಹೆಚ್ಚು ಮಹಿಳೆಯರ ಹೆಸರು. ಕರಡು ಪಟ್ಟಿಯಲ್ಲಿ ಪುರುಷರಿಗಿಂತ 2.6 ಲಕ್ಷ ಹೆಚ್ಚು ಮಹಿಳಾ ಮತದಾರರನ್ನು ಕೈಬಿಡಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಬಳಿಕ ಒಟ್ಟು 63.66 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಈ ಪೈಕಿ ಸರಿಸುಮಾರು 32.9 ಲಕ್ಷಕ್ಕೂ ಹೆಚ್ಚು ಮಹಿಳೆಯರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಕರಡು ಪಟ್ಟಿಯಿಂದ ಕೈಬಿಡಲಾದವರಲ್ಲಿ 53.6% ಮಹಿಳೆಯರು ಆಗಿದ್ದಾರೆ.
ನಿರ್ದಿಷ್ಟವಾಗಿ ಮಹಿಳೆಯರು ಮತ್ತು ವಲಸಿಗರೇ ಅಧಿಕವಾಗಿ ಮತದಾನದ ಹಕ್ಕನ್ನು ಕಳೆದುಕೊಂಡಿರುವುದು ಯಾಕೆ ಎಂಬ ವಿಚಾರದಲ್ಲಿ ಸದ್ಯ ತೀವ್ರ ಚರ್ಚೆ ನಡೆಯುತ್ತಿದೆ. ಈ ಪ್ರಕ್ರಿಯೆ ಸರಿಯಾದ ರೀತಿಯಲ್ಲಿ ನಡೆದಿಲ್ಲ ಎಂದು ವಿರೋಧ ಪಕ್ಷಗಳ ಆರೋಪವಾದರೆ, ದಾಖಲೆಗಳು ನೀಡದ ಕಾರಣದಿಂದಾಗಿ ಮತದಾನದ ಪಟ್ಟಿಯಿಂದ ಹೊರಬಿದ್ದಿದ್ದಾರೆ ಎಂಬುದು ಚುನಾವಣಾ ಆಯೋಗ ಅಧಿಕಾರಿಗಳ ಆರೋಪವಾಗಿದೆ. ಇನ್ನು ಎಸ್‌ಐಆರ್ ಬಳಿಕ ಲಿಂಗಾನುಪಾತವೂ ತೀವ್ರ ಪ್ರಮಾಣದಲ್ಲಿ ಕುಸಿದಿದೆ.
ವಿರೋಧ ಪಕ್ಷಗಳು ಇದನ್ನು ಕೇವಲ ‘ತಪ್ಪು’ ಎಂದು ಕರೆಯದೆ, ಇದು ಆಡಳಿತಾರೂಢ ಪಕ್ಷದ ‘ವ್ಯವಸ್ಥಿತ ಸಂಚು’ ಎಂದು ಆರೋಪಿಸುತ್ತಿವೆ. ಕೆಲವು ನಿರ್ದಿಷ್ಟ ಸಮುದಾಯಗಳು ಮತ್ತು ವಿರೋಧ ಪಕ್ಷಗಳಿಗೆ ಬೆಂಬಲ ನೀಡುವ ಮತದಾರರು ಹೆಚ್ಚಿರುವ ಪ್ರದೇಶಗಳಲ್ಲಿ ಮಹಿಳೆಯರ ಹೆಸರುಗಳನ್ನು ಆಯ್ದು ತೆಗೆಯಲಾಗಿದೆ ಎಂಬ ಆರೋಪಗಳು ಕೇಳಿಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಪಕ್ಷೇತರವಾಗಿ ಆಲೋಚಿಸಿ ಮತ ಹಾಕುತ್ತಿರುವುದು ಹೆಚ್ಚಾಗಿದೆ. ಹಾಗಾಗಿ ಮಹಿಳೆಯರ ಶಕ್ತಿಯನ್ನು ಕುಗ್ಗಿಸಲು ಹೀಗೆ ಮಾಡಲಾಗುತ್ತಿದೆ ಎಂದು ವಿಪಕ್ಷಗಳು ವಾದಿಸುತ್ತಿವೆ.
ಇದನ್ನು ಓದಿದ್ದೀರಾ? ಮಧ್ಯಪ್ರದೇಶ | ಮತದಾರರ ಪಟ್ಟಿಯಿಂದ 42.74 ಲಕ್ಷ ಮತದಾರರ ಹೆಸರು ಡಿಲೀಟ್
ಮತದಾರರ ಪಟ್ಟಿಯಿಂದ ಹೆಸರು ತೆಗೆಯುವ ಮೊದಲು ಆ ವ್ಯಕ್ತಿಗೆ ಸರಿಯಾದ ನೋಟಿಸ್ ನೀಡಬೇಕು, ವಿಚಾರಣೆ ನಡೆಸಬೇಕು. ಆದರೆ ಹಲವೆಡೆ ನಿಯಮವನ್ನು ಗಾಳಿಗೆ ತೂರಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಯಾವ ಮಾನದಂಡದ ಮೇಲೆ ಇಷ್ಟು ದೊಡ್ಡ ಪ್ರಮಾಣದ ಮಹಿಳೆಯರ ಹೆಸರುಗಳನ್ನು ತೆಗೆಯಲಾಗಿದೆ ಎಂಬ ಪಟ್ಟಿಯನ್ನು ಬಹಿರಂಗಪಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಮುಖ್ಯವಾಗಿ ‘ಶಾಶ್ವತವಾಗಿ ಸ್ಥಳಾಂತರಗೊಂಡವರು’ ಎಂಬ ಕಾರಣ ನೀಡಿ ಕೈಬಿಡಲಾದವರಲ್ಲಿ ಶೇ.55ಕ್ಕೂ ಹೆಚ್ಚು ಮಂದಿ ಮಹಿಳೆಯರು. ಮದುವೆಯಾಗಿ ಬೇರೆ ಊರಿಗೆ ಹೋದಾಗ ಹಳೆಯ ವಿಳಾಸದಲ್ಲಿ ಹೆಸರು ಡಿಲೀಟ್ ಮಾಡಲಾಗುತ್ತದೆ. ಆದರೆ ಹೊಸ ವಿಳಾಸದಲ್ಲಿ ನೋಂದಣಿ ಸರಿಯಾಗಿ ನಡೆಯುತ್ತಿಲ್ಲ ಎಂಬ ಕಾರಣವನ್ನು ನೀಡಲಾಗುತ್ತಿದೆ. ಅದರಲ್ಲೂ 18 ರಿಂದ 40 ವರ್ಷದೊಳಗಿನ ಮಹಿಳೆಯರ ಹೆಸರುಗಳೇ ಹೆಚ್ಚಾಗಿ ಡಿಲೀಟ್ ಆಗುತ್ತಿರುವುದು ಆಘಾತಕಾರಿಯಾಗಿದೆ.





