ದೇಶದ ಅತ್ಯಂತ ಪ್ರತಿಷ್ಠಿತ ರಿಲಯನ್ಸ್ ಇಂಡಸ್ಟ್ರೀಸ್ ಗ್ರೂಪ್ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಲು ಮುಂದಾಗಿದೆ. ಎಐ ವಿಸ್ತರಣೆಗಾಗಿ ಮುಂದಿನ ಏಳು ವರ್ಷಗಳಲ್ಲಿ ರಿಲಯನ್ಸ್ ಮತ್ತು ಜಿಯೋ ಜಂಟಿಯಾಗಿ ಬರೋಬ್ಬರಿ 10 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಘೋಷಿಸಿದ್ದಾರೆ.
ಮುಖೇಶ್ ಅಂಬಾನಿ ಘೋಷಿಸಿರುವ 10 ಲಕ್ಷ ಕೋಟಿ ಎಂದರೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ವಾರ್ಷಿಕ ಬಜೆಟ್ ಗಾತ್ರಕ್ಕಿಂತ ಹೆಚ್ಚಿದೆ.
ನವದೆಹಲಿಯಲ್ಲಿ ನಡೆಯುತ್ತಿರುವ ‘ಎಐ ಇಂಪ್ಯಾಕ್ಟ್ ಸಮ್ಮೇಳನ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಡಿಜಿಟಲ್ ಭವಿಷ್ಯದ ಕುರಿತು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು.
ಕೃತಕ ಬುದ್ಧಿಮತ್ತೆಯು ಕೇವಲ ಒಂದು ನೂತನ ತಂತ್ರಜ್ಞಾನವಲ್ಲ, ಬದಲಾಗಿ ಮನುಷ್ಯನಂತೆ ಆಲೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಶಕ್ತಿಯಿರುವ ಮಾಂತ್ರಿಕ ವ್ಯವಸ್ಥೆಯಾಗಿದೆ ಎಂದು ಬಣ್ಣಿಸಿದ ಅವರು, ಇದನ್ನು ಪುರಾಣಗಳಲ್ಲಿ ಉಲ್ಲೇಖವಾಗಿರುವ ಎಂದಿಗೂ ಬರಿದಾಗದ ‘ಅಕ್ಷಯ ಪಾತ್ರೆ’ಗೆ ಹೋಲಿಸಿದರು. ಇಂದು ಪ್ರಪಂಚದಲ್ಲೇ ಅತಿ ಹೆಚ್ಚು ಡೇಟಾ ಬಳಸುತ್ತಿರುವುದು ನಮ್ಮ ಭಾರತೀಯರು. ದೆಹಲಿಯಿಂದ ಹಿಡಿದು ಕುಗ್ರಾಮದವರೆಗೂ ಇಂಟರ್ನೆಟ್ ವೇಗದಲ್ಲಿ ಯಾವುದೇ ಭೇದಭಾವವಿಲ್ಲ. ಜಿಯೋ ಈಗಾಗಲೇ 50 ಕೋಟಿಗೂ ಅಧಿಕ ಜನರಿಗೆ ಸಂಪರ್ಕ ಒದಗಿಸಿದ್ದು, ಇದೀಗ ದೇಶವನ್ನು ಡೇಟಾ ಯುಗದಿಂದ “ಬುದ್ಧಿವಂತಿಕೆಯ ಯುಗಕ್ಕೆ” ಕೊಂಡೊಯ್ಯಲು ಸಜ್ಜಾಗಿದೆ ಎಂದು ಅವರು ವಿವರಿಸಿದರು.
ಹಿಂದೆ ಮೊಬೈಲ್ ಡೇಟಾವನ್ನು ಹೇಗೆ ಅಗ್ಗದ ಬೆಲೆಯಲ್ಲಿ ನೀಡಲಾಗಿತ್ತೋ, ಅದೇ ರೀತಿ ಎಐ ತಂತ್ರಜ್ಞಾನವನ್ನು ಕೂಡ ಪ್ರತಿಯೊಬ್ಬರಿಗೂ ಕಡಿಮೆ ವೆಚ್ಚದಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಮುಖೇಶ್ ಅಂಬಾನಿ ಭರವಸೆ ನೀಡಿದರು.
ಇದನ್ನು ಓದಿದ್ದೀರಾ? 6 ದಶಕಗಳ ಕಾಯುವಿಕೆ ಅಂತ್ಯ: ಬಂಗಾಳವನ್ನು ಬಗ್ಗು ಬಡಿದು ರಣಜಿ ಫೈನಲ್ ಪ್ರವೇಶಿಸಿದ ಜಮ್ಮು ಕಾಶ್ಮೀರ
“ಆರ್ಥಿಕತೆಯ ಪ್ರತಿಯೊಂದು ವಲಯ, ಪ್ರತಿಯೊಬ್ಬ ನಾಗರಿಕ ಹಾಗೂ ಸರ್ಕಾರದ ಪ್ರತಿಯೊಂದು ಸೇವೆಗಳಲ್ಲಿ ಎಐ ಬಳಕೆಯಾಗಲು ಟೆಲಿಕಾಂ ಆಪರೇಟರ್ ಜಿಯೋ ಪ್ರಮುಖ ಪಾತ್ರ ವಹಿಸಲಿದೆ. ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಜಿಯೋ ಈಗಾಗಲೇ ಹಲವು ಎಐ ಅಪ್ಲಿಕೇಶನ್‌ಗಳನ್ನು ಪ್ರಾರಂಭಿಸಿದೆ. 22 ಭಾಷೆಗಳಲ್ಲಿ ಹೊಂದಾಣಿಕೆಯ ಕಲಿಕೆಗಾಗಿ ‘ಜಿಯೋಶಿಕ್ಷಕ್’, ತ್ವರಿತ ವೈದ್ಯಕೀಯ ಮಾರ್ಗದರ್ಶನ ಹಾಗೂ ಆರೋಗ್ಯ ಸೇವೆಗಳಿಗಾಗಿ ‘ಜಿಯೋಆರೋಗ್ಯ ಎಐ’, 14 ಕೋಟಿ ರೈತರಿಗೆ ಬೆಳೆ ಇಳುವರಿ ಹೆಚ್ಚಿಸಲು ನೆರವಾಗಲು ‘ಜಿಯೋಕೃಷಿ’ ಹಾಗೂ ಶಿಕ್ಷಣ, ಉದ್ಯೋಗ ಮತ್ತು ಸರ್ಕಾರಿ ಸೇವೆಗಳನ್ನು ಸುಲಭವಾಗಿ ಜನರಿಗೆ ತಲುಪಿಸಲು ‘ಜಿಯೋ ಭಾರತ್ ಐಕ್ಯೂ’ ಅನ್ನು ಪರಿಚಯಿಸಲಾಗಿದೆ” ಎಂದು ಮುಖೇಶ್ ಅಂಬಾನಿ ತಿಳಿಸಿದರು.
21ನೇ ಶತಮಾನದಲ್ಲಿ ಭಾರತವು ವಿಶ್ವದ ಅತಿದೊಡ್ಡ ಎಐ ಶಕ್ತಿಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮುಖೇಶ್ ಅಂಬಾನಿ, ಮುಂಬರುವ ದಶಕಗಳಲ್ಲಿ ಜಗತ್ತಿನ ಯಾವುದೇ ದೇಶವು ಭಾರತದ ಶಕ್ತಿಯನ್ನು ಸರಿಗಟ್ಟಲು ಸಾಧ್ಯವಿಲ್ಲ ಎಂದರು.
ಸುಮಾರು 100 ಕೋಟಿಗೂ ಹೆಚ್ಚು ಇಂಟರ್ನೆಟ್ ಬಳಕೆದಾರರು, ಜಾಗತಿಕವಾಗಿ ಅತಿ ಕಡಿಮೆ ಡೇಟಾ ವೆಚ್ಚ ಹಾಗೂ ಮಾಸಿಕ 12 ಶತಕೋಟಿಗೂ ಅಧಿಕ ಡಿಜಿಟಲ್ ವಹಿವಾಟುಗಳನ್ನು ನಮ್ಮ ದೇಶದ ಜನರು ಪಡೆದಿದ್ದಾರೆ ಎಂದು ಮುಖೇಶ್ ಅಂಬಾನಿ ತಿಳಿಸಿದರು
ಇದೇ ವೇಳೆ, ಎಐ ಬರುವುದರಿಂದ ನಮ್ಮ ಉದ್ಯೋಗಗಳು ನಾಶವಾಗುತ್ತವೆ ಎಂದು ಯಾರೂ ಭಯಪಡುವ ಅಗತ್ಯವಿಲ್ಲ, ಬದಲಾಗಿ ಇದರಿಂದ ಹೆಚ್ಚಿನ ಕೌಶಲ್ಯ ಬೇಡುವ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.





