ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ವಾಯು ಮಾಲಿನ್ಯ ಕುರಿತು ಗಂಭೀರ ಚರ್ಚೆ ನಡೆಸಬೇಕು. ಸಮಸ್ಯೆಯನ್ನು ನಿಭಾಯಿಸಲು ಕೇಂದ್ರ ಬಜೆಟ್‌ನಲ್ಲಿ ‘ಸಾಕಷ್ಟು ಹಣ’ ಒದಗಿಸಬೇಕು. ವಾಯು ಮಾಲಿನ್ಯ ಸಂಬಂಧ ‘ರಾಷ್ಟ್ರೀಯ ಆರೋಗ್ಯ ತುರ್ತುಪರಿಸ್ಥಿತಿ’ ಘೋಷಿಸಬೇಕು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಹೊಂಚಿಕೊಂಡಿರುವ ರಾಹುಲ್ ಗಾಂಧಿ, ನಾಗರಿಕರಿಂದ ಬಂದ ಸಂದೇಶಗಳನ್ನು ವಿವರಿಸಿದ್ದಾರೆ. “ಸರ್ಕಾರವು ಸಂಸತ್ತಿನಲ್ಲಿ ವಾಯು ಮಾಲಿನ್ಯ ಕುರಿತು ಚರ್ಚೆಗೆ ಅವಕಾಶ ನೀಡುವ ಸಮಯ ಬಂದಿದೆ. ಪ್ರಧಾನಿಯವರು ವಾಯು ಮಾಲಿನ್ಯವನ್ನು ರಾಷ್ಟ್ರೀಯ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಬೇಕು… ನಾವು ಒಟ್ಟಾಗಿ ಸೇರಿ ಗಂಭೀರ ಯೋಜನೆಯನ್ನು ನಡೆಸಬೇಕಾಗಿದೆ. ಈ ಸಮಸ್ಯೆಯನ್ನು ನಿಭಾಯಿಸಲು ಬಜೆಟ್‌ನಲ್ಲಿ ಸಾಕಷ್ಟು ಹಣದ ಅಗತ್ಯವಿದೆ” ಎಂದು ಹೇಳಿದ್ದಾರೆ.
“ಕಳೆದ ಕೆಲವು ದಿನಗಳಿಂದ, ಮಾಲಿನ್ಯವು ಜನಸಾಮಾನ್ಯರ ಜೀವನಕ್ಕೆ ಏನೆಲ್ಲ ಮಾಡುತ್ತಿದೆ ಎಂಬುದರ ಕುರಿತು ಭಾರತೀಯರು ಕಳುಹಿಸಿದ ಸಾವಿರಾರು ಸಂದೇಶಗಳನ್ನು ನಾನು ಓದಿದ್ದೇನೆ. ಎಲ್ಲರಲ್ಲಿಯೂ ಭಯವು ಎದ್ದು ಕಾಣುತ್ತಿದೆ. ಮಕ್ಕಳು ಮತ್ತು ಪೋಷಕರಲ್ಲಿ ಭವಿಷ್ಯದ ಭಯ ಆವರಿಸಿದೆ. ಭಾರತದಾದ್ಯಂತ ನಗರಗಳಲ್ಲಿನ ಕುಟುಂಬಗಳು ಆತಂಕದಲ್ಲಿದ್ದಾರೆ. ಮಾಲಿನ್ಯವು ಇನ್ನು ಮುಂದೆ ಕೇವಲ ಪರಿಸರ ಸಮಸ್ಯೆಯಲ್ಲ; ಇದು ರಾಷ್ಟ್ರೀಯ ಆರೋಗ್ಯ ತುರ್ತುಪರಿಸ್ಥಿತಿ. ಸಂಸತ್ತು ಅದರ ಬಗ್ಗೆ ಚರ್ಚಿಸಬೇಕು. ಸರ್ಕಾರ ಕಾರ್ಯನಿರ್ವಹಿಸಬೇಕು” ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರವು ಬಜೆಟ್ ಮಾಡುತ್ತಿರುವ ಭಾನುವಾರವೇ, ದೆಹಲಿಯಲ್ಲಿ ಗಾಳಿ ಗುಣಮಟ್ಟ ‘ತುಂಬಾ ಕಳಪೆ ಮಟ್ಟ’ಕ್ಕೆ ಕುಸಿದಿದೆ. ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) ಬೆಳಿಗ್ಗೆ 8 ಗಂಟೆಯ ಸುಮಾರಿಗೆ 318ರಷ್ಟಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ತಿಳಿಸಿದೆ.
ಬಜೆಟ್ ಅಧಿವೇಶನವು ಒಟ್ಟು 65 ದಿನಗಳ ಕಾಲ ಪಡೆಯಲಿದೆ. ಮೊದಲ ಹಂತದ 30 ದಿನಗಳ ಅಧಿವೇಶನವು ಏಪ್ರಿಲ್ 2 ರಂದು ಕೊನೆಗೊಳ್ಳುತ್ತದೆ. ನಂತರ, ಎರಡನೇ ಹಂತದ ಅಧಿವೇಶನವು ಫೆಬ್ರವರಿ 13ರಿಂದ ಮಾರ್ಚ್ 9ರವರೆಗೆ ನಡೆಯಲಿದೆ.




