ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 13 ವರ್ಷಗಳಿಂದ ನಿಷ್ಕ್ರಿಯವಾಗಿ ನಿಂತಿದ್ದ ಬೋಯಿಂಗ್ 737-200 ವಿಮಾನವನ್ನು ತೆರವುಗೊಳಿಸಲಾಗಿದ್ದು, ಬೆಂಗಳೂರಿಗೆ ರವಾನಿಸಲಾಗಿದೆ. ಟ್ರ್ಯಾಕ್ಟರ್–ಟ್ರೇಲರ್ ಮೂಲಕ ವಿಮಾನವನ್ನು ಬೆಂಗಳೂರಿಗೆ ತರಲಾಗಿದೆ. ಅದನ್ನು ನಿರ್ವಹಣಾ ಎಂಜಿನಿಯರ್‌ಗಳ ತರಬೇತಿಗಾಗಿ ಬಳಸಲಾಗುತ್ತದೆ ಎಂದು ವರದಿಯಾಗಿದೆ.
43 ವರ್ಷ ಹಳೆಯ ಈ ವಿಮಾನವು ಏರ್ ಇಂಡಿಯಾ ಸಂಸ್ಥೆಗೆ ಸೇರಿದ್ದಾಗಿದೆ. ವಿಮಾನವನ್ನು ಅದರ ‘ಪ್ರಾಟ್ ಅಂಡ್ ವಿಟ್ನಿ’ ಎಂಜಿನ್‌ಗಳ ಸಮೇತ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್, “ಈ ವಿಮಾನ ನಮ್ಮದು ಎಂಬುದೇ ನಮಗೆ ತಿಳಿದಿರಲಿಲ್ಲ! ಖಾಸಗೀಕರಣದ ವೇಳೆ ವಿಮಾನದ ದಾಖಲೆಗಳು ಲೆಡ್ಜರ್‌ಗಳಲ್ಲಿ ಕಾಣೆಯಾಗಿದ್ದವು” ಎಂದು ತಿಳಿಸಿದ್ದಾರೆ.
1982ರಲ್ಲಿ ಇಂಡಿಯನ್ ಏರ್‌ಲೈನ್ಸ್‌ಗೆ ಸೇರಿದ್ದ VT-EHH ನೋಂದಣಿಯ ಬೋಯಿಂಗ್ 737-200 ವಿಮಾನವನ್ನು 1998ರಲ್ಲಿ ಅಲೈಯನ್ಸ್ ಏರ್ ಗುತ್ತಿಗೆ ಪಡೆದಿತ್ತು. 2007ರಲ್ಲಿ ವಿಮಾನವನ್ನು ಇಂಡಿಯನ್ ಏರ್‌ಲೈನ್ಸ್ ಮರಳಿಪಡೆದಿತ್ತು. ಬಳಿಕ, ವಿಮಾನವನ್ನು ಸರಕು ವಿಮಾನವಾಗಿ ಬಳಸಲಾಗುತ್ತಿತ್ತು.
ಅದೇ ವರ್ಷ, ಏರ್ ಇಂಡಿಯಾ ಸಂಸ್ಥೆಯು ಇಂಡಿಯನ್ ಏರ್‌ಲೈನ್ಸ್ ಜೊತೆ ವಿಲೀನವಾದ್ದರಿಂದ, ವಿಮಾನವು ಇಂಡಿಯನ್ ಏರ್‌ಲೈನ್ಸ್ ಸುಪರ್ದಿಗೆ ಬಂದಿತ್ತು. ಸಂಸ್ಥೆಯು ವಿಮಾನವನ್ನು ಇಂಡಿಯಾ ಪೋಸ್ಟ್ ಸೇವೆಗಾಗಿ ಬಳಕೆ ಮಾಡುತ್ತಿತ್ತು. ಆದಾಗ್ಯೂ, 2012ರಲ್ಲಿ ವಿಮಾನದ ಕಾರ್ಯನಿರ್ವಹಣೆ ನಿಲ್ಲಿಸಲಾಗಿತ್ತು. ಅಂದಿನಿಂದಲೂ ವಿಮಾನವು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಿಂತಿತ್ತು.
ಈ 13 ವರ್ಷಗಳಲ್ಲಿ ವಿಮಾನ ನಿಲ್ಧಾಣವು ವಿಮಾನದ ಪಾರ್ಕಿಂಗ್ ಶುಲ್ಕವಾಗಿ ಸಂಸ್ಥೆಯಿಂದ ಸುಮಾರು 1 ಕೋಟಿ ರೂಪಾಯಿ ವಸೂಲಿ ಮಾಡಿದೆ ಎಂದು ವರದಿಯಾಗಿದೆ. ಇದೀಗ, ವಿಮಾನವನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ಖರೀದಿಸಿದ್ದು, ಬೆಂಗಳೂರಿಗೆ ತಂದಿದೆ. ಬಿಐಎಎಲ್ ತನ್ನ ಎಂಆರ್‌ಒ ಕೇಂದ್ರದಲ್ಲಿ ತರಬೇತಿಗಾಗಿ ಬಳಸಿಕೊಳ್ಳಲಿದೆ ಎಂದು ತಿಳಿದುಬಂದಿದೆ.




