ಬುಧವಾರ ಬೆಳಿಗ್ಗೆ ಸಂಭವಿಸಿದ ದುರ್ಘಟನೆಯಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ – ಅಜಿತ್ ಬಣ) ನಾಯಕ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟಿದ್ದಾರೆ. ಎನ್‌ಸಿಪಿ (ಅಜಿತ್ ಬಣ)ವು ತನ್ನ ಸರ್ವೋಚ್ಚ ನಾಯಕನನ್ನು ಕಳೆದುಕೊಂಡಿದೆ. ಈಗ, ಎನ್‌ಸಿಪಿ ಭವಿಷ್ಯ ಮತ್ತು ಪವಾರ್ ಕುಟುಂಬದ ಪರಂಪರೆ ಅನಿಶ್ಚಿತತೆಯಲ್ಲಿದೆ. ಪಕ್ಷದ ಮುಂದಿನ ಗತಿಯೇನು ಎಂಬ ಪ್ರಶ್ನೆ ಮಹಾರಾಷ್ಟ್ರ ರಾಜಕಾರಣದಲ್ಲಿ ಗಾಢವಾಗಿದೆ.
ಇತ್ತೀಚೆಗೆ ನಡೆದ, ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ, ಅಜಿತ್ ಅವರ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ಅವರ ಎನ್‌ಸಿಪಿ ಬಣಗಳು ಕೆಲ ಪಾಲಿಕೆಗಳಲ್ಲಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು. ಇದೇ ವೇಳೆ, ಎರಡೂ ಬಣಗಳು ಮತ್ತೆ ಒಗ್ಗೂಡುವ ಚರ್ಚೆಗಳೂ ಆರಂಭವಾಗಿದ್ದವು. ಉಭಯ ಬಣಗಳನ್ನು ಬೆಸೆದು, ಅಜಿತ್ ಅವರನ್ನು ಮುಖ್ಯಸ್ಥನನ್ನಾಗಿ ಪ್ರತಿಷ್ಠಾಪಿಸಿ, ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯಲು ಶರದ್ ಪವಾರ್ ನಿರ್ಧರಿಸಿದ್ದರು. ಬಣಗಳ ಒಗ್ಗೂಡುವಿಕೆಯ ಚರ್ಚೆಯೂ ತ್ವರಿತವಾಗಿತ್ತು. ಆದರೆ, ಇದೇ ಸಮಯದಲ್ಲಿ ಪವಾರ್ ಕುಟುಂಬಕ್ಕೆ ಆಘಾತ ಎದುರಾಗಿದೆ. ವಿಮಾನ ಅಪಘಾತಕ್ಕೆ ಅಜಿತ್ ಪವಾರ್ ಬಲಿಯಾಗಿದ್ದಾರೆ.
ಶರದ್ ಪವಾರ್ ಅವರ ನೆರಳಿನಲ್ಲಿ ಬೆಳೆದ ಅಜಿತ್ ಪವಾರ್ ಅವರನ್ನು ಪವಾರ್ ಕುಟುಂಬದ ಭದ್ರಕೋಟೆಯಾಗಿದ್ದ ಬಾರಾಮತಿ ಕ್ಷೇತ್ರವು ರಾಜ್ಯ ನಾಯಕನನ್ನಾಗಿ ಬೆಳೆಸಿತು. ‘ದಾದಾ’ ಎಂಬ ಕಿರೀಟವನ್ನೂ ಕೊಟ್ಟಿತ್ತು. ಶರದ್ ಪವಾರ್ ರಾಷ್ಟ್ರ ರಾಜಕಾರಣದ ಮೇಲೆ ಗಮನ ನೀಡಿದರೆ, ಅಜಿತ್ ಪವಾರ್ ರಾಜ್ಯ ರಾಜಕಾರಣದಲ್ಲಿ ಹಿಡಿತ ಸಾಧಿಸಿದರು. ಈ ಜೋಡಿ ಸುಮಾರು 30 ವರ್ಷಗಳ ಕಾಲ ಜೊತೆಯಾಗಿ ರಾಜಕಾರಣ ಮಾಡಿತು. ಈ ಸುದೀರ್ಘ ಅವಧಿಯಲ್ಲಿ ತಮಗೆ ದೊರೆತ ರಾಜಕೀಯ ಅಧಿಕಾರವನ್ನು ಬಳಸಿಕೊಂಡ ಅಜಿತ್ ಪವಾರ್, ಮಹಾರಾಷ್ಟ್ರ ರಾಜಕಾರಣದಲ್ಲಿ ಚಾಣಾಕ್ಷತನ ಬೆಳೆಸಿಕೊಂಡಿದ್ದರು. ಸ್ವ-ಹಿತಾಸಕ್ತಿ, ಅಧಿಕಾರ ದಾಹ, ಸಮಯ ಸಾಧನೆಯನ್ನು ಅಜಿತ್ ರಕ್ತಗತವಾಗಿಸಿಕೊಂಡಿದ್ದರು. ಈ ಚಾಣಾಕ್ಷತಯಿಂದಲೇ 8 ಬಾರಿ ಉಪಮುಖ್ಯಮಂತ್ರಿ ಹುದ್ದೆ ಗಿಟ್ಟಿಸಿಕೊಂಡಿದ್ದರು.
ಅದೇ ಅಧಿಕಾರ ದಾಹದಿಂದ ತಮ್ಮನ್ನು ಬೆಳೆಸಿದ, ತಮ್ಮ ಚಿಕ್ಕಪ್ಪನಿಂದಲೇ ಬೇರ್ಪಟ್ಟು, ಪಕ್ಷವನ್ನೂ ಹೊಡೆದುರುಳಿಸಿದರು. ಬಿಜೆಪಿ ಸಖ್ಯ ಬೆಳೆಸಿ, ಮೋದಿ ಮಷೀನ್‌ನಲ್ಲಿ ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ತೊಳೆದುಕೊಂಡು, ತಾವು ಸ್ವಚ್ಛ ಕೈವುಳ್ಳವರು ಎಂದು ಬಿಂಬಿಸಿಕೊಂಡಿದ್ದರು. ತಮ್ಮ ವಿರುದ್ಧದ 70,000 ಕೋಟಿ ರೂ. ನೀರಾವರಿ ಹಗರಣ, ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ಗೆ ಸಂಬಂಧಿಸಿದ 25,000 ಕೋಟಿ ರೂ. ಹಗರಣ, ಅಕ್ರಮ ಮರಳು ಗಣಿಗಾರಿಕೆ, ಪಿಂಪ್ರಿ-ಚಿಂಚವಡ್ ನಗರಸಭೆಯಲ್ಲಿ ಭ್ರಷ್ಟಾಚಾರ ಆರೋಪಗಳನ್ನು ಮೋದಿ ವಾಷಿಂಗ್ ಮಷೀನ್‌ನಲ್ಲಿ ತೊಳೆದುಕೊಂಡು, ತನಿಖಾ ಸಂಸ್ಥೆಗಳಿಂದ ಕ್ಲೀನ್ ಚಿಟ್ ಪಡೆದುಕೊಂಡರು.
ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಬೇಕೆಂದು ಹಪಾಹಪಿಸಿದ್ದರು. ಆದರೂ, ಅವರ ಪ್ರಯತ್ನ ಈಡೇರಲೇ ಇಲ್ಲ. ಉಪ ಮುಖ್ಯಮಂತ್ರಿಯಾಗಿಯೇ ನಿರ್ಗಮಿಸಿದರು.
ಈಗ, ಅಜಿತ್ ಪವಾರ್ ಅವರ ನಿಧನದಿಂದಾಗಿ, NCPಯ ಎರಡೂ ಬಣಗಳ ಭವಿಷ್ಯ ಅನಿಶ್ಚಿತತೆಯಲ್ಲಿದೆ. ಅವರ ಅಕಾಲಿಕ ಮರಣವು ಪಕ್ಷ ಮತ್ತು ಪವಾರ್ ಕುಟುಂಬದಲ್ಲಿ ಭಾರೀ ಶೂನ್ಯವನ್ನು ಸೃಷ್ಟಿಸಿದೆ. ಪವಾರ್ ಪರಿವಾರದಲ್ಲಿ ಕಠೋರ ನಾಯಕನಿಲ್ಲದಂತಾಗಿದೆ. ಎನ್‌ಸಿಪಿ ನಾಯಕತ್ವಕ್ಕೆ ಪ್ರಬಲ ವ್ಯಕ್ತಿಯಿಲ್ಲ ಎಂಬ ಭಾವ ಮೂಡಿದೆ. ಪವಾರ್ ಕುಟುಂಬದ ಸುಪ್ರಿಯಾ ಸುಳೆ ಅಥವಾ ರೋಹಿತ್ ಪವಾರ್ ಅವರು ಎನ್‌ಸಿಪಿ ನಾಯಕತ್ವವನ್ನು ವಹಿಸಿಕೊಳ್ಳಲು-ನಿಭಾಯಿಸಲು ಸಿದ್ಧರಿಲ್ಲ. ಶರದ್ ಪವಾರ್ ಅವರಿಗೆ 85 ವರ್ಷ ವಯಸ್ಸಾಗಿದ್ದು, ಅವರು ಅಗಾಧ ಜವಾಬ್ದಾರಿಯನ್ನು ಹೊತ್ತು, ರಾಜ್ಯಾದ್ಯಂತ ಪಕ್ಷವನ್ನು ಮುನ್ನಡೆಸುವ ಮತ್ತು ಮತ್ತಷ್ಟು ಪ್ರಬಲಗೊಳಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾರೆ.
ಮುಖ್ಯವಾಗಿ, ಎನ್‌ಸಿಪಿಯ ಅಜಿತ್ ಬಣ ಮತ್ತು ಶದರ್ ಬಣಗಳು ಇನ್ನೂ ಒಗ್ಗೂಡಿಲ್ಲ. ಮಾತುಕತೆಗಳು ಪೂರ್ಣಗೊಳ್ಳುವ ಮುನ್ನವೇ ಅಜಿತ್ ಮೃತಪಟ್ಟಿದ್ದಾರೆ. ಆದ್ದರಿಂದ, ಬಣಗಳು ಒಂದಾಗುವ ಸಾಧ್ಯತೆಯೂ ಕಾಣುತ್ತಿಲ್ಲ. ಸದ್ಯಕ್ಕೆ, ಅಜಿತ್ ಬಣದ ನಿರ್ಧಾರಗಳನ್ನು ತೆಗೆದುಕೊಳ್ಳಲು, ಆ ಪಕ್ಷವನ್ನು ಮುನ್ನಡೆಸಬಹುದಾದ ಎರಡನೇ ಹಂತದ ನಾಯಕನೇ ಇಲ್ಲ! ಪಕ್ಷವನ್ನು ಮುನ್ನಡೆಸುವ ನಾಯಕನಾರು ಎಂಬ ಪ್ರಶ್ನೆಗೆ ಎನ್‌ಸಿಪಿ ಅಜಿತ್ ಬಣದಲ್ಲಿ ಉತ್ತರವೂ ಇಲ್ಲ. ಪಕ್ಷವು ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆಯಬಹುದೇ? ಸಾಮೂಹಿಕವಾಗಿ ನಿರ್ಧಾರ ತಗೆದುಕೊಳ್ಳಬಹುದೇ? ಎಂಬ ಚರ್ಚೆಗಳು ನಡೆಯುತ್ತಿವೆ.
ಈ ಲೇಖನ ಓದಿದ್ದೀರಾ?: ಅಜಿತ್ ಪವಾರ್: ಮೋದಿ ಸರ್ಕಾರದ ಒತ್ತಡಕ್ಕೆ ಮಣಿದು ಎನ್‌ಸಿಪಿ ಇಬ್ಭಾಗಿಸಿದ್ದ ‘ಮಹಾ’ ನಾಯಕ
ಜೊತೆಗೆ, ಎನ್‌ಸಿಪಿಯ ಉಭಯ ಬಣಗಳು ಒಗ್ಗೂಡುವ ಮಾತುಕತೆಗಳ ಭಾಗವಾಗಿ ಅಜಿತ್ ಬಣವು ಶರದ್ ಪವಾರ್ ಬಣದೊಂದಿಗೆ ವಿಲೀನಗೊಳ್ಳುವ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಎನ್ನಲಾಗುತ್ತಿದೆ. ಒಂದು ವೇಳೆ, ಹಾಗಾದಲ್ಲಿ, ಎನ್‌ಸಿಪಿ ಅಜಿತ್ ಬಣವು ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ತೊರೆದು, ವಿಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿ ಸೇರಬೇಕಾಗುತ್ತದೆ. ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ. ಅಜಿತ್ ಕುಟುಂಬ ಕೂಡ ಶರದ್ ಪವಾರ್ ಪಕ್ಷದೊಂದಿಗೆ ತಮ್ಮ ಪಕ್ಷವನ್ನು ವಿಲೀನಗೊಳಿಸಲು ಚಿಂತಿಸುತ್ತಿದೆ ಎಂದೇ ಹೇಳಲಾಗುತ್ತಿದೆ. ಪಕ್ಷದ ಅಸ್ತಿತ್ವಕ್ಕೆ ಈ ವಿಲೀನ ಅನಿವಾರ್ಹವೆಂದು ವಿಶ್ಲೇಷಕರೂ ಹೇಳುತ್ತಾರೆ.
ಮತ್ತೊಂದೆಡೆ, ಹಾಲಿ ಸರ್ಕಾರದಲ್ಲಿ ಇರುವ ಅಧಿಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ಜೊತೆ ಅಜಿತ್ ಬಣವು ಮುಂದುವರೆಬಹುದು. ಆದರೆ, ಇದು ನಾವಿಕನಿಲ್ಲದ ದೋಣಿಗೆ ಬಿಜೆಪಿ ‘ಹುಟ್ಟು’ ಬೇಕಾಗಬಹುದು. ಪರಿಣಾಮ, ಎನ್‌ಸಿಪಿ (ಅಜಿತ್ ಬಣ)ದ ಮೇಲೆ ಬಿಜೆಪಿ ದಬ್ಬಾಳಿಕೆ ನಡೆಸಬಹುದು. ಹೆದರಿಕೆ-ಬೆದರಿಕೆಗಳೊಂದಿಗೆ ಎನ್‌ಸಿಪಿಯನ್ನೇ ಬಿಜೆಪಿ ನುಂಗಿಹಾಕಬಹುದು. ಈಗಾಗಲೇ, ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ನುಂಗಿ-ಅರಗಿಸಿಕೊಂಡಿರುವ ಬಿಜೆಪಿಗೆ ಎನ್‌ಸಿಪಿಯನ್ನು ನಿರ್ನಾಮ ಮಾಡುವುದು ಅಸಾಧ್ಯವೇನೂ ಅಲ್ಲ.
ಅದರಾಚೆಗೂ, ಅಜಿತ್ ಪತ್ನಿ ಸುನೇತ್ರಾ ಪವಾರ್ ಅಥವಾ ಮಗ ಪಾರ್ಥ್ ಪವಾರ್ ನೇತೃತ್ವದಲ್ಲಿ ಪಕ್ಷವು ಸ್ವತಂತ್ರವಾಗಿ ಮುನ್ನಡೆಯಬಹುದು. ಆದರೆ, ಬಿಜೆಪಿಯಂತಹ ತೋಳ ಪ್ರಬಲವಾಗಿರುವ ಸಂದರ್ಭದಲ್ಲಿ, ಸ್ವತಂತ್ರವಾಗಿ ಮುನ್ನಡೆಯುವುದು ಸುಲಭವಲ್ಲ ಎಂದೇ ಹೇಳಲಾಗುತ್ತಿದೆ.




