ಶಬರಿಮಲೆ ದೇವಾಸ್ಥಾನಕ್ಕೆ ತೆರಳಿದ್ದ ಬೆಂಗಳೂರು ನಗರದ ಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ಕೇರಳ ಪೊಲೀಸರು ಕ್ರೂರವಾಗಿ ವರ್ತಿಸಿದ್ದು, ನಗ್ನಗೊಳಿಸಿ ಕಿರುಕುಳ ನೀಡಿದ್ದಾರೆ. ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಿಲ್ಲ ಎಂದು ಆರೋಪಿಸಲಾಗಿದೆ. ಸಮುದಾಯದ ರಕ್ಷಣೆಗಾಗಿ ಈ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಆಗ್ರಹಿಸಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿರುವುದು ಮಾತ್ರವಲ್ಲದೆ ಪಂಬಾ ಪೊಲೀಸರು, ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರ ಬಟ್ಟೆ ಬಿಚ್ಚುವಂತೆ ಬಲವಂತ ಮಾಡಿದ್ದಾರೆ, ನಗ್ನಗೊಳಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ಲಿಂಗತ್ವ ಅಲ್ಪಸಂಖ್ಯಾತರಿಗೆ ಯಕ್ಷಗಾನ ಕೌಶಲ್ಯ ತರಬೇತಿ
ಆಹಾರವೂ ನೀಡರೆ, ನಿದ್ರಿಸಲೂ ಬಿಡದೆ ಶಬರಿಮಲೆ ಠಾಣೆಯ ಪೊಲೀಸರು ಹಿಂಸೆ ಎಸಗಲಾಗುತ್ತಿದ್ದಾರೆ. ಬೆಂಗಳೂರಿನ ಲಿಂಗತ್ವ ಅಲ್ಪಸಂಖ್ಯಾತರಾದ ಅನು ಸಿ, ಪ್ರಿಯಾಂಕಾ ಆರ್, ದಿವ್ಯಾ ಆರ್, ಅನುಷಾ, ಯಶ್ ಶರ್ಮಾ, ಕುಮಾರ್ ಬಿ, ಯಶವಂತ್ ವಿ, ಸಂತೋಷ್ ಮತ್ತು ಇನ್ನೂ ಮೂವರನ್ನು ಪೊಲೀಸರು ಬಂಧನದಲ್ಲಿರಿಸಿದ್ದಾರೆ ಎಂದು ಹೇಳಲಾಗಿದೆ.
ಕೇರಳ ಪೊಲೀಸರ ಈ ಕೃತ್ಯವನ್ನು ಅಕ್ಕೈ ಪದ್ಮಶಾಲಿ ಖಂಡಿಸಿದ್ದು ದೇವರ ದರ್ಶನಕ್ಕೆ ಅನುವು ಮಾಡಬೇಕು ಎಂದು ವಿನಂತಿಸಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಶೀಘ್ರವೇ ವಿವರವಾದ ಮಾಹಿತಿ ನೀಡಿ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದು ಹೇಳಿದ್ದಾರೆ.
ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿದ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, “ಬೆಂಗಳೂರಿನಿಂದ ನಮ್ಮ ಸಮುದಾಯದ ಒಟ್ಟು 11 ಮಂದಿ ಶಬರಿಮಲೆ ದೇವಸ್ಥಾನಕ್ಕೆ ಹೋಗಿದ್ದರು. ದೇವಸ್ಥಾನಕ್ಕೆ ಹೋದಾಗ ಪೊಲೀಸರು ತಡೆದಿದ್ದು, ಗುರುತಿನ ಪುರಾವೆಯನ್ನು ಕೇಳಿದ್ದಾರೆ. ಈ ವೇಳೆ ದೇವಸ್ಥಾನಕ್ಕೆ ಹೋಗಲು ಗುರುತಿನ ಪುರಾವೆ ಯಾಕೆ ಎಂದು ನಮ್ಮವರು ಪ್ರಶ್ನಿಸಿದ್ದಾರೆ. ಈ ವೇಳೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ” ಎಂದು ದೂರಿದರು.

“ಅಲ್ಲಿಂದ ಪಂಬಾ ಪೊಲೀಸ್ ಠಾಣೆಗೆ ಕರೆದೊಯ್ದು ಒಂಚೂರು ಗೌರವ ನೀಡದೆ ನಡೆಸಿಕೊಂಡಿದ್ದಾರೆ. ಬಟ್ಟೆ ಬಿಚ್ಚಿ ಲಿಂಗತ್ವ ಅಲ್ಪಸಂಖ್ಯಾತರೇ ಎಂದು ತೋರಿಸುವಂತೆ ಒತ್ತಡ ಹೇರಿದ್ದಾರೆ. ಇದಕ್ಕೆ ನಿರಾಕರಿಸಿದಾಗ ಬಲವಂತವಾಗಿ ಮೂರು ಕಿಲೋ ಮೀಟರ್ ದೂರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಇಬ್ಬರು ಪುರುಷ ವೈದ್ಯರು ಮಾತ್ರ ಇದ್ದರು. ಒಬ್ಬರು ಮಹಿಳಾ ಕಾನ್‌ಸ್ಟೆಬಲ್ ಇದ್ದರು. ಆಸ್ಪತ್ರೆಯಲ್ಲಿ ಎಲ್ಲರ ಮುಂದೆ ಬಟ್ಟೆ ಬಿಚ್ಚಿಸಿ ಮೂತ್ರ ವಿಸರ್ಜಿಸುವ ಭಾಗವನ್ನು ಪರಿಶೀಲಿಸಿದ್ದಾರೆ. ಬಳಿಕ ಸ್ಕ್ಯಾನಿಂಗ್ ಮಾಡಬೇಕು ಎಂದು ಹೇಳಿದ್ದಾರೆ. ಅದಕ್ಕೆ ನಿರಾಕರಿಸಿದಾಗ ಮತ್ತೆ ಪಂಬಾ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ” ಎಂದು ಘಟನೆಯನ್ನು ವಿವರಿಸಿದರು.
“ಊಟವೂ ನೀಡಿಲ್ಲ. ನಿದ್ದೆ ಮಾಡಲೂ ಅವಕಾಶವಿರಲಿಲ್ಲ. ತುಂಬಾ ಅಮಾನುಷವಾಗಿ ನಡೆಸಿಕೊಂಡಿದ್ದಾರೆ. ಗುರುತಿನ ಪುರಾವೆ ಕೇಳಿದಾಗ ಕರ್ನಾಟಕ ಸರ್ಕಾರ ನೀಡುವ ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಪುರಾವೆ, ಆಧಾರ್ ಕಾರ್ಡ್‌ಗಳನ್ನು ತೋರಿಸಲಾಗಿದೆ. ಆದರೆ ಜನನ ಪ್ರಮಾಣಪತ್ರವನ್ನು ನೀಡುವಂತೆ ಒತ್ತಾಯಿಸಿದ್ದಾರೆ. ನಮ್ಮವರು ಹೋಗಿರುವುದು ಶಬರಿಮಲೆ ಅಯ್ಯಪ್ಪನ ದರ್ಶನಕ್ಕಾಗಿ, ಹಾಗಿರುವಾಗ ಪುರಾವೆ ಯಾಕೆ? ಇದು ಯಾವ ನ್ಯಾಯ? ಗಂಡಸರು, ಹೆಂಗಸರಿಗೆ ಇಲ್ಲದ ನಿಯಮ, ನಮಗೆ ಯಾಕೆ” ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ವಾರಣಾಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಲಿಂಗತ್ವ ಅಲ್ಪಸಂಖ್ಯಾತ ಹಿಮಾಂಗಿ ಸ್ಪರ್ಧೆ
“ಹಲವು ಅಧಿಕಾರಿಗಳು ಮತ್ತು ಮಾಜಿ ಆರೋಗ್ಯ ಸಚಿವೆ ಶೈಲಜಾ ಟೀಚರ್ ಮೊದಲಾದವರುಗಳನ್ನು ಸಂಪರ್ಕಿಸಿ ವಿಷಯ ತಿಳಿಸಿದ ಬಳಿಕ ಶಬರಿಮಲೆಗೆ ಹೋಗಲು ಅವಕಾಶ ನೀಡಲಾಗಿದೆ. 11 ಮಂದಿಯ ಪೈಕಿ ಒಂಬತ್ತು ಜನ ದೇವಸ್ಥಾನಕ್ಕೆ ಹೋಗಿದ್ದು, ಇನ್ನಿಬ್ಬರು ಈ ವರ್ತನೆಯನ್ನು ಖಂಡಿಸಿ ಪೊಲೀಸ್ ಠಾಣೆಯಲ್ಲೇ ಮಾಲೆ ಇಟ್ಟು ಹೊರ ನಡೆದಿದ್ದಾರೆ. ಸಂವಿಧಾನದಲ್ಲಿ ಎಲ್ಲರೂ ಎಲ್ಲಿಗೆ ಬೇಕಾದರೂ ಹೋಗುವ ಅವಕಾಶವಿದೆ. ಇದು 2019ರ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆಗೆ, ಸುಪ್ರೀಂ ಕೋರ್ಟ್‌ನ ತೀರ್ಪಿಗೆ ವಿರುದ್ಧವಾದುದ್ದು. ಪೊಲೀಸರ ಈ ನಡವಳಿಕೆಯನ್ನು ಒಪ್ಪಲಾಗದು. ದೇವರ ನಾಡು ಈಗ ದೆವ್ವದ ನಾಡು ಆಗಿದೆ. 2018ರಲ್ಲಿಯೂ ಇದೇ ರೀತಿಯ ಘಟನೆಯಾಗಿದೆ. ಇವು ಸಂವಿಧಾನಕ್ಕೆ ವಿರುದ್ಧವಾದ ಘಟನೆ” ಎಂದು ಹೇಳಿದ್ದಾರೆ.
ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕಿದ್ದ ನಿರ್ಬಂಧ
ಶಬರಿಮಲೆ ದೇವಾಲಯದಲ್ಲಿ 10 ರಿಂದ 50 ವರ್ಷ ವಯಸ್ಸಿನ ಮುಟ್ಟಾದ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧವಿತ್ತು. 2018ರ ಸೆಪ್ಟೆಂಬರ್ 28ರಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಐತಿಹಾಸಿಕ ತೀರ್ಪು ನೀಡಿದ್ದು 4:1 ಬಹುಮತದ ತೀರ್ಪಿನಲ್ಲಿ, ನ್ಯಾಯಾಲಯವು ಎಲ್ಲಾ ವಯಸ್ಸಿನ ಮಹಿಳೆಯರು ಶಬರಿಮಲೆ ದೇವಾಲಯವನ್ನು ಪ್ರವೇಶಿಸಲು ಅವಕಾಶ ನೀಡಬೇಕು ಎಂದು ಆದೇಶಿಸಿತು.
ಸಂವಿಧಾನದತ್ತ ಮೂಲಭೂತ ಹಕ್ಕುಗಳಾದ ಸಮಾನತೆಯ ಹಕ್ಕು (ವಿಧಿ 14) ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು (ವಿಧಿ 25) ಈ ನಿರ್ಬಂಧವು ಉಲ್ಲಂಘಿಸುತ್ತದೆ. ಮುಟ್ಟಿನ ಆಧಾರದ ಮೇಲೆ ತಾರತಮ್ಯ ಮಾಡುವುದು ಅಸ್ಪೃಶ್ಯತೆಯಾಗುತ್ತದೆ ಎಂದು ನ್ಯಾಯಾಲಯವು ಅಭಿಪ್ರಾಯಿಸಿತ್ತು. ಸುಪ್ರೀಂ ಕೋರ್ಟ್‌ನ ಆದೇಶವನ್ನು ಕೇರಳ ಸರ್ಕಾರ ಜಾರಿಗೆ ತಂದಾಗ ಬಲಪಂಥೀಯರ ನೇತೃತ್ವದಲ್ಲಿ ಪ್ರತಿಭಟನೆಗಳು ಆರಂಭವಾದವು. 2019ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು ಪುನರ್ಪರಿಶೀಲನಾ ಅರ್ಜಿಗಳನ್ನು ಏಳು ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ವರ್ಗಾಯಿಸಿತು. ಸದ್ಯ 2018ರ ತೀರ್ಪಿಗೆ ಯಾವುದೇ ತಡೆಯಾಜ್ಞೆ ಇಲ್ಲವಾದ್ದರಿಂದ ಕಾನೂನುಬದ್ಧವಾಗಿ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶವಿದೆ. ಆದರೂ ಇಂದಿಗೂ ಮಹಿಳೆಯರ ಭೇಟಿ ಸವಾಲಾಗಿಯೇ ಉಳಿದಿದೆ.
ಈ ವಿವಾದಗಳ ನಡುವೆ 2018ರ ಡಿಸೆಂಬರ್‌ನಲ್ಲಿ ನಾಲ್ವರು ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರ ತಂಡವು ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿತ್ತು. ಮೊದಲು ಅವರನ್ನು ಪೊಲೀಸರು ತಡೆದಿದ್ದರೂ, ನಂತರ ಉನ್ನತ ಅಧಿಕಾರಿಗಳ ಅನುಮತಿಯ ಮೇರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ತಂತ್ರಿಗಳು (ಪ್ರಧಾನ ಅರ್ಚಕರು) ಮತ್ತು ಪಂದಳಂ ರಾಜಮನೆತನದವರು ಲಿಂಗತ್ವ ಅಲ್ಪಸಂಖ್ಯಾತರ ಪ್ರವೇಶಕ್ಕೆ ಯಾವುದೇ ಆಕ್ಷೇಪಣೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅದಾದ ಬಳಿಕ 2024ರಲ್ಲಿ ಮತ್ತೋರ್ವ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ ದೇವಾಲಯ ಪ್ರವೇಶಿಸಿದ್ದರು. ಆದರೆ ಇದೀಗ ಲಿಂಗತ್ವ ಅಲ್ಪಸಂಖ್ಯಾತರ ಪ್ರವೇಶಕ್ಕೆ ನಿರಾಕರಿಸುವುದು ತೀವ್ರ ವಿವಾದಕ್ಕೆ ಕಾರಣವಾಗುತ್ತಿದೆ. ಪ್ರವೇಶ ನಿರಾಕರಿಸುವುದಕ್ಕೂ ಮುಖ್ಯವಾಗಿ ಲಿಂಗತ್ವ ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಗೌರವ ನೀಡದೆ ಅಮಾನುಷವಾಗಿ ನಡೆಸಿರುವುದು ಖಂಡನಾರ್ಹ.





