ಆರ್‌ಎಸ್‌ಎಸ್‌ನ 100ನೇ ವರ್ಷಾಚರಣ ಮತ್ತು ವಿಜಯದಶಮಿ ಸಮಾರಂಭಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ತಾಯಿ ಕಮಲತಾಯ್ ಗವಾಯಿ ಅವರನ್ನು ಆಹ್ವಾನಿಸಲಾಗಿದೆ ಎಂದು ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಇದೀಗ, ಅವರು ಆರ್‌ಎಸ್‌ಎಸ್‌ನ ಆಹ್ವಾನವನ್ನು ತರಸ್ಕರಿಸಿರುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಕಮಲತಾಯ್ ಬರೆದಿದ್ದಾರೆ ಎನ್ನಲಾದ ಕೈಬರಹದ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ತಾವು ಅಂಬೇಡ್ಕರ್ ವಾದಿಯಾಗಿದ್ದು, ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ” ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಅಮರಾವತಿಯಲ್ಲಿ ಅಕ್ಟೋಬರ್ 5ರಂದು ಆರ್‌ಎಸ್‌ಎಸ್‌ನ ಜಿಲ್ಲಾ ಘಟಕ ‘ಶತಮಾನೋತ್ಸವ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಮಲತಾಯಿ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಕಮಲತಾಯ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ ಎಂದು ಅವರ ಪುತ್ರ, ರಾಜಕಾರಣಿ ರಾಜೇಂದ್ರ ಗವಾಯಿ ಕೂಡ ಹೇಳಿದ್ದರು.
ಈ ಬೆನ್ನಲ್ಲೇ, ಕಮಲತಾಯ್ ಅವರು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಹಾಜರಾಗುತ್ತಾರೆ ಎಂದು ಹಲವಾರು ಸುದ್ದಿ ವಾಹಿನಿಗಳು ವರದಿ ಮಾಡಿದ್ದವು. ಆದಾಗ್ಯೂ, ಕಮಲತಾಯ್ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ, ಅವರು ಪತ್ರ ಬರೆದಿದ್ದು, “ನಾನು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂಬ ಸುದ್ದಿಯು ಪಿತೂರಿ ಭಾಗವಾಗಿದೆ. ಅದೊಂದು ಆರ್‌ಎಸ್‌ಎಸ್ ಹರಡಿಸಿರುವ ಸುಳ್ಳು ಸುದ್ದಿ” ಎಂದು ಹೇಳಿರುವುದಾಗಿ ವರದಿಯಾಗಿದೆ.
ಕಮಲಾತಾಯ್ ಅವರು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂಬುದನ್ನು ಸಮರ್ಥಿಸಿಕೊಂಡಿದ್ದ ರಾಜೇಂದ್ರ ಗವಾಯಿ, “ನನ್ನ ತಂದೆ (ಆರ್.ಎಸ್ ಗವಾಯಿ) ಪಕ್ಷಾತೀತವಾಗಿ ರಾಜಕಾರಣಿಗಳಿಗೆ ಹತ್ತಿರವಾಗಿದ್ದರು. ಅವರು ಇಂದಿರಾ ಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರ ವಿವಿಧ ಕಾರ್ಯಕ್ರಮಗಳಿಗೆ ಹಾಜರಾಗಿದ್ದರು. ಇದರರ್ಥ ಅವರು ತಮ್ಮ ರಾಜಕೀಯ ದೃಷ್ಟಿಕೋನಗಳೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದರ್ಥವಲ್ಲ” ಎಂದಿದ್ದಾರೆ
“ತಮ್ಮ ತಾಯಿ ಕಮಲತಾಯ್ ಅವರನ್ನು ಆಹ್ವಾನಿಸಿದ ಕಾರ್ಯಕ್ರಮವು ಆರ್‌ಎಸ್‌ಎಸ್‌ನ ‘ಮುಖ್ಯ ಕಾರ್ಯಕ್ರಮ’ವಲ್ಲ. ನನ್ನ ತಂದೆ ಕೂಡ ಈ ಹಿಂದೆ ಆರ್‌ಎಸ್‌ಎಸ್ ಆಹ್ವಾನವನ್ನು ಸ್ವೀಕರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಕಾರಣಕ್ಕಾಗಿಯೇ ನನ್ನ ತಾಯಿ ಅದನ್ನು ಸ್ವೀಕರಿಸಲು ನಿರ್ಧರಿಸಿದರು” ಎಂದು ರಾಜೇಂದ್ರ ಹೇಳಿಕೊಂಡಿದ್ದಾರೆ.
ಈ ಲೇಖನ ಓದಿದ್ದೀರಾ?: ಜಾತಿ ಸಮೀಕ್ಷೆ: ಒಬಿಸಿಗಳಿಗೆ ವಂಚಿಸಲು ಬಿಜೆಪಿ ನಾಯಕರ ಯತ್ನ?
ರಾಜೇಂದ್ರ ಗವಾಯಿ ಅವರು ಸೆಪ್ಟೆಂಬರ್ 29ರಂದು ತಮ್ಮ ತಾಯಿ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ ಎಂದು ಹೇಳಿಕೆ ನೀಡಿದ್ದರು. ಆದರೆ, ಇದಾದ ಕೆಲವೇ ಗಂಟೆಗಳಲ್ಲಿ ಕಮಲಾತಾಯ್ ಬರೆದಿದ್ದಾರೆ ಎನ್ನಲಾಗಿರುವ ಪತ್ರವು ವ್ಯಾಪಕ ವೈರಲ್ ಆಗಿದೆ.
ಈ ಬಗ್ಗೆ ಪ್ರತಿಕ್ರಿಯಿಯೆ ನೀಡಿರುವ ರಾಜೇಂದ್ರ ಗವಾಯಿ, “ನಾನು ನನ್ನ ತಾಯಿಯನ್ನು ಬೆಂಬಲಿಸುತ್ತೇನೆ. ಅವರು ಕಾರ್ಯಕ್ರಮಕ್ಕೆ ಹಾಜರಾಗಲು ಅಥವಾ ಹಾಜರಾಗದೇ ಇರಲಿ ನಿರ್ಧರಿಸಿದರೆ, ನಾನು ಅವರನ್ನು ನಿಲುನ್ನು ಬೆಂಬಲಿಸುತ್ತೇನೆ” ಎಂದು ಹೇಳಿಕೊಂಡಿದ್ದಾರೆ.
ಆದಾಗ್ಯೂ, ವೈರಲ್ ಆಗಿರುವ ಪತ್ರವನ್ನು ಕಮಲತಾಯ್ ಅವರೇ ಬರೆದಿದ್ದಾರೆಯೇ ಎಂಬುದನ್ನು ಅವರಿಂದಲೇ ಖಚಿತ ಪಡಿಸಿಕೊಳ್ಳಲು ‘ದಿ ವೈರ್’ ಪ್ರಯತ್ನಿಸಿದೆ. ಆದರೆ, ಅವರು ಪ್ರತಿಕ್ರಿಯೆ ನೀಡಲು ಲಭ್ಯವಾಗಿಲ್ಲ ಎಂದು ಸಂಸ್ಥೆ ಹೇಳಿದೆ.
ಕಮಲತಾಯ್ ಅವರ ಪತಿ ಆರ್.ಎಸ್ ಗವಾಯಿ ಅವರು ರಾಜ್ಯಸಭಾ ಸದಸ್ಯರಾಗಿದ್ದರು. ಬಿಹಾರ ಮತ್ತು ಕೇರಳದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಅಂಬೇಡ್ಕರ್ ಚಳವಳಿಯ ಹಿರಿಯ ನಾಯಕರಾಗಿದ್ದ ಅವರು, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಲ್ಲಿ (ಆರ್‌ಪಿಐ) ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅಲ್ಲದೆ, ಕಾಲಾನಂತರ, ತಮ್ಮದೇ ಆದ ಬಣ, ಆರ್‌ಪಿಐ (ಗವಾಯಿ)ಅನ್ನು ಸ್ಥಾಪಿಸಿದ್ದರು.




