ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕ ತೀವ್ರವಾಗಿ ಕುಸಿದಿರುವ ಸಮಯದಲ್ಲಿ, ಈ ಎರಡು ಘಟನೆಗಳಲ್ಲಿ ಪರ್ತಕರ್ತರ ನಡೆಯು ಮಾಧ್ಯಮ ಕ್ಷೇತ್ರದಲ್ಲಿ ಹೊಸ ಭರವಸೆಯನ್ನು ಮೂಡಿಸಿವೆ.
ಬಿಜೆಪಿ ಆಡಳಿತದಲ್ಲಿ ಭಾರತದ ಬಹುತೇಕ ಮಾಧ್ಯಮಗಳು ಬಿಜೆಪಿಯ ಸಾಕು ನಾಯಿಯಂತೆ ವರ್ತಿಸುತ್ತಿವೆ. ತಮ್ಮ ಕರ್ತವ್ಯ-ಸ್ವಾತಂತ್ರ್ಯವನ್ನು ಮರೆತು ಮೋದಿ/ಬಿಜೆಪಿಯ ಹೊಗಳುಭಟರಾಗಿದ್ದಾರೆ. ಬಿಜೆಪಿ ಆಡಳಿತವನ್ನು ಪ್ರಶ್ನಿಸುವ ಮಾಧ್ಯಮಗಳ ಮೇಲೆ ನಾನಾ ರೀತಿಯಲ್ಲಿ ಒತ್ತಡ ಮತ್ತು ಸೆನ್ಸಾರ್‌ಶಿಪ್ ಹೆಸರಿನ ದಮನಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಎರಡು ಘಟನೆಗಳು ಪತ್ರಿಕಾ ಸ್ವಾತಂತ್ರ್ಯ ಮತ್ತು ಪತ್ರಿಕೋದ್ಯಮದ ದಿಟ್ಟತೆಗೆ ಸಾಕ್ಷಿಯಾಗಿವೆ. ಕೊಲ್ಕತ್ತಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಿಜೆಪಿ ನಾಯಕ, ಸಚಿವ ಕೈಲಾಶ ವಿಜಯವರ್ಗೀಯ ಅವರನ್ನು ಪತ್ರಕರ್ತರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ಅವರ ಪ್ರಶ್ನೆಗೆ ಉತ್ತರಿಸಲಾಗದ ಬಿಜೆಪಿ ನಾಯಕರು, ತೇಲಿಸಿದ ಉತ್ತರ ಕೊಟ್ಟು ನುಣುಚಿಕೊಂಡಿದ್ದಾರೆ. ಪತ್ರಕರ್ತರ ಪ್ರಶ್ನೆ ಮತ್ತು ಧೈರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಡಿಸೆಂಬರ್ 30ರಂದು ಪಶ್ಚಿಮ ಬಂಗಾಳದ ಕೊಲ್ಕತ್ತಾದ ಬಿಜೆಪಿ ಕಚೇರಿಯಲ್ಲಿ ಅಮಿತ್ ಶಾ ಸುದ್ದಿಗೋಷ್ಠಿ ನಡೆಸಿದ್ದರು. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ಭ್ರಷ್ಟಾಚಾರ, ಮಹಿಳೆಯರ ಸುರಕ್ಷತೆ ಇತ್ಯಾದಿಗಳ ಕುರಿತು ವಾಗ್ದಾಳಿ ನಡೆಸಿದರು. ಇದೇ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಅಮಿತ್ ಶಾ ಸಿಡಿಮಿಡಿಗೊಂಡರು. ಸಾವರಿಸಿಕೊಂಡು, ಹಾರಿಕೆಯ ಉತ್ತರ ಕೊಟ್ಟು, ಪಲಾಯನ ಮಾಡಿದರು.
ಅಮಿತ್ ಶಾಗೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆ ಹೀಗಿತ್ತು: “ಬಿಜೆಪಿಯಲ್ಲಿ ದೀರ್ಘಕಾಲದಿಂದಲೂ ಒಂದು ಅನಧಿಕೃತ ನಿಯಮವಿದೆ. ’75 ವರ್ಷದ ನಂತರ ಹಿರಿಯ ನಾಯಕರನ್ನು ಸಕ್ರಿಯ ರಾಜಕಾರಣದಿಂದ ದೂರವಿಡಲಾಗುತ್ತದೆ’. ಈ ನಿಯಮದಡಿ ಮುರಳೀ ಮನೋಹರ್ ಜೋಶಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರಂತಹ ಹಿರಿಯರನ್ನು ಹೊರಗಿಡಲಾಗಿದೆ. ಹೀಗಿರುವಾಗ, ನನ್ನ ಪ್ರಶ್ನೆ ಸರಳ– ಈ ನಿಯಮ ಪ್ರಧಾನಿ ಮೋದಿ ಅವರಿಗೂ ಅನ್ವಯಿಸುತ್ತದೆಯೇ? ಮೋದಿ ಅವರು ಈಗಾಗಲೇ 75 ವರ್ಷ ವಯಸ್ಸನ್ನು ಮೀರಿದ್ದಾರೆ.”
ಈ ಪ್ರಶ್ನೆ ಬಿಜೆಪಿಯ ನಿವೃತ್ತಿ ನಿಯಮವನ್ನು ನೇರವಾಗಿ ಟೀಕಿಸಿದ್ದು, ಮೋದಿ ಅವರ ಅಧಿಕಾರ ಮತ್ತು ಭವಿಷ್ಯವನ್ನು ಕೆದಕಿತ್ತು. ಬಿಜೆಪಿಯ ಆಂತರಿಕ ನೀತಿಗಳಿಗೆ ಸವಾಲು ಎಸೆಯುವಂತಿತ್ತು.
ಪತ್ರಕರ್ತರ ಈ ಪ್ರಶ್ನೆಗೆ ಅಮಿತ್ ಶಾ ತಬ್ಬಿಬ್ಬಾದರು. ಆದರೂ, ನೇರ ಉತ್ತರ ನೀಡದೆ ವಿಷಯವನ್ನು ಡೈವರ್ಟ್ ಮಾಡಲು ಪ್ರಯಸ್ನಿಸಿದರು. “ನೀವು ನಮ್ಮ ಪಕ್ಷದ ಕುರಿತು ಯಾಕೆ ಚಿಂತಿಸುತ್ತೀರಿ? ನೀವು ಬಂಗಾಳದ ಬಗ್ಗೆ ಚಿಂತಿಸಿ” ಎಂದು ಹೇಳಿ, ಪತ್ರಿಕಾಗೋಷ್ಠಿಯನ್ನು ಅರ್ಧಕ್ಕೇ ಮೊಟಕುಗೊಳಿಸಿ ಹೊರನಡೆದರು.
ಅಂತೆಯೇ, ಮಧ್ಯಪ್ರದೇಶದ ಇಂದೋರ್‌ನ ಭಾಗೀರಥಪುರದಲ್ಲಿ ಕಲುಷಿತ ನೀರಿನಿಂದ ಹಲವರು ಸಾವನ್ನಪ್ಪಿರುವ ವಿಚಾರವಾಗಿ ಪತ್ರಕರ್ತರೊಬ್ಬರು ಅಲ್ಲಿನ ಸಚಿವ, ಇಂದೋರ್ ಶಾಸಕ ಕೈಲಾಶ್ ವಿಜಯವರ್ಗೀಯ ಅವರನ್ನು ನೇರವಾಗಿ ಪ್ರಶ್ನಿಸಿದರು.
ಪತ್ರಕರ್ತರ ಪ್ರಶ್ನೆ ಹೀಗಿತ್ತು: ”ಭಾಗೀರಥಪುರದಲ್ಲಿ ಕಲುಷಿತ ನೀರು ಕುಡಿದು 15 ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ಅಸ್ವಸ್ಥಗೊಂಡಿದ್ದಾರೆ. ಈ ಘಟನೆಗೆ ನಗರಾಡಳಿತ ಸಚಿವರು, ಜನಸಂಪನ್ಮೂಲ ಸಚಿವರು, ಸ್ಥಳೀಯ ಶಾಸಕರು ಜವಾಬ್ದಾರರಲ್ಲವೇ? ಸಚಿವರು ಮತ್ತು ಹಿರಿಯ ಅಧಿಕಾರಗಳ ವಿರುದ್ಧ ಯಾಕೆ ಕ್ರಮ ಕೈಗೊಳ್ಳುವುದಿಲ್ಲ? ಕೇವಲ ಕಿರಿಯ ಸಿಬ್ಬಂದಿಗಳ ವಿರುದ್ಧ ಮಾತ್ರವೇ ಕ್ರಮ ಕೈಗೊಳ್ಳಲು ಚರ್ಚಿಸುತ್ತಿರುವುದು ಸರಿಯೇ? ಆಸ್ಪತ್ರೆಗೆ ದಾಖಲಾದ ರೋಗಿಗಳ ಕುಟುಂಬಗಳಿಗೆ ಇನ್ನೂ ವೈದ್ಯಕೀಯ ವೆಚ್ಚದ ಮರುಪಾವತಿ ದೊರೆತಿಲ್ಲ. ಕುಟುಂಬಗಳು ವೈದ್ಯಕೀಯ ಬಿಲ್‌ಗಳನ್ನು ಹಿಡಿದು, ಹಣಕ್ಕಾಗಿ ಪರದಾಡುತ್ತಿವೆ” ಎಂದು ಪ್ರಶ್ನಿಸಿದರು.
ಇದರಿಂದ ಕುಪಿತಗೊಂಡ ವಿಜಯವರ್ಗೀಯ, ಪತ್ರಕರ್ತರಿಗೆ ನಿಂದನಾತ್ಮಕ ಭಾಷೆಯಲ್ಲಿ ಉತ್ತರಿಸಿದರು. ‘ಓಹ್ ಅದನ್ನು ಬಿಡಿ. ಇಂತಹ ನಾನ್‌ಸೆನ್ಸ್ ಪ್ರಶ್ನೆಗಳನ್ನು ಕೇಳಬೇಡಿ. ಇಂತಹ ಪ್ರಶ್ನೆಗಳನ್ನು ಕೇಳಲು ನಿಮ್ಮನ್ನು ಕಳಿಸಿದವರು ಯಾರು’ ಎಂದಿದ್ದಾರೆ.
देश के सबसे साफ शहर में गंदा पानी पीने से 10 से ज्यादा लोगों की मौत हो चुकी है जिस शख्स पर लोगों को साफ पानी पिलाने का जिम्मा है वो सवालों को फोकट बता रहे हैं हमारे सवालों को "घंटे" में उड़ा रहे हैं @manishdekoder @GargiRawat @Abhinav_Pan @sanket pic.twitter.com/5iIF2AiFZ7
— Anurag Dwary (@Anurag_Dwary) December 31, 2025
ಆದಾಗ್ಯೂ, ಸ್ವಲ್ಪ ಸಮಯದ ಬಳಿಕ ಎಕ್ಸ್‌ನಲ್ಲಿ ತಮ್ಮ ಮಾತುಗಳಿಗೆ ವಿಷಾದ ವ್ಯಕ್ತಪಡಿಸಿರುವ ವಿಜಯವರ್ಗೀಯ, “ಕಳೆದ ಎರಡು ದಿನಗಳಿಂದ ನಾನು ಮತ್ತು ನನ್ನ ತಂಡವು ಪೀಡಿತ ಪ್ರದೇಶದ ಪರಿಸ್ಥಿತಿಯನ್ನು ಸುಧಾರಿಸಲು ನಿರಂತರವಾಗಿ ನಿದ್ರೆಯಿಲ್ಲದೆ ಕೆಲಸ ಮಾಡುತ್ತಿದ್ದೇವೆ. ನನ್ನ ಜನರು ಕಲುಷಿತ ನೀರಿನಿಂದ ಬಳಲುತ್ತಿದ್ದಾರೆ ಮತ್ತು ಕೆಲವರು ನಮ್ಮನ್ನು ಅಗಲಿದ್ದಾರೆ. ಈ ದುಃಖದ ಸ್ಥಿತಿಯಲ್ಲಿ, ಮಾಧ್ಯಮದ ಪ್ರಶ್ನೆಗೆ ಉತ್ತರಿಸುವಾಗ ನನ್ನ ಮಾತುಗಳು ತಪ್ಪಾದ ರೀತಿಯಲ್ಲಿದ್ದವು. ಇದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಆದರೆ ನನ್ನ ಜನರು ಸಂಪೂರ್ಣವಾಗಿ ಸುರಕ್ಷಿತ ಮತ್ತು ಆರೋಗ್ಯವಂತರಾಗುವವರೆಗೆ, ನಾನು ವಿರಮಿಸುವುದಿಲ್ಲ” ಎಂದಿದ್ದಾರೆ.
ಈ ಎರಡು ಘಟನೆಗಳು ಬಿಜೆಪಿ ನಾಯಕರ ಮುಂದೆ ದಿಟ್ಟತೆಯಿಂದ ಪ್ರಶ್ನೆಗಳನ್ನು ಕೇಳಿದ ಪತ್ರಕರ್ತರ ಧೈರ್ಯವನ್ನು ತೋರಿಸಿವೆ. ಆದರೆ, ತಾವು ಪ್ರಶ್ನಾತೀತರು, ತಮ್ಮನ್ನು ಯಾರೂ ಪ್ರಶ್ನಿಸಬಾರದು ಎಂಬ ಸರ್ವಾಧಿಕಾರಿ ಧೋರಣೆ ಹೊಂದಿರುವ ಬಿಜೆಪಿ ನಾಯಕರು ಅಪಮಾನಕರವಾಗಿ ಉತ್ತರಿಸಿದ್ದಾರೆ. ಎರಡೂ ಘಟನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ವರದಿ ಪ್ರಕಾರ, ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕ ತೀವ್ರವಾಗಿ ಕುಸಿದಿರುವ ಸಮಯದಲ್ಲಿ, ಈ ಎರಡು ಘಟನೆಗಳಲ್ಲಿ ಪರ್ತಕರ್ತರ ನಡೆಯು ಮಾಧ್ಯಮ ಕ್ಷೇತ್ರದಲ್ಲಿ ಹೊಸ ಭರವಸೆಯನ್ನು ಮೂಡಿಸಿವೆ ಎಂದು ಶ್ಲಾಘಿಸಲಾಗುತ್ತಿದೆ.




