ಪ್ರಿಯ ಮೋದಿ ಸರ್‌ಗೆ ‘ಈ ದಿನ’ ಬರೆದ ಪ್ರೀತಿಯ ಬಹಿರಂಗ ಪತ್ರ!

Date:

ದೇಶದ ಪ್ರಧಾನಿ ಸಂಸತ್ತಿನಲ್ಲೇ ಸುರಕ್ಷಿತವಲ್ಲ ಎಂದಾದರೆ ಇನ್ನೆಲ್ಲಿ ಸುರಕ್ಷಿತ?. ನೀವೇ ಸುರಕ್ಷಿತ ಅಲ್ಲವಾದರೆ ಮುಗಿಲನ್ನೇ ಹೊದ್ದು ನೆಲವನ್ನೇ ಹಾಸಿಕೊಂಡಿರುವ ಈ ದೇಶದ ಕೋಟ್ಯಂತರ ಸರ್ವೇಸಾಧಾರಣ ಪ್ರಜೆಗಳ ಗತಿಯೇನು ಎಂಬುವುದು ತಮಗೆ ಆಗದವರು ಆಡಿಕೊಳ್ಳುತ್ತಿರುವ ಮಾತುಗಳು ಸರ್, ತಲೆ ಕೆಡಿಸಿಕೊಳ್ಳಬೇಡಿ.

ಮೋದಿ ಸರ್, ಈದಿನ.ಕಾಂ ಮಾಡುವ ಸಾದರ ಪ್ರಣಾಮಗಳು

ಮೊನ್ನೆ ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಕುರಿತ ಚರ್ಚೆಗೆ ಉತ್ತರ ನೀಡಲು ತಾವು ಸದನಕ್ಕೆ ಬರಬೇಕಿತ್ತು. ನಿಮ್ಮ ಉತ್ತರ ಇಲ್ಲದೆಯೇ ವಂದನಾ ನಿರ್ಣಯ ಅಂಗೀಕರಿಸಲಾಯಿತು. ಹಾಗೆಯೇ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧೀ ಅವರಿಗೆ ವಂದನಾ ನಿರ್ಣಯ ಕುರಿತ ಚರ್ಚೆಯಲ್ಲಿ ಮಾತಾಡಲು ಅವಕಾಶ ನೀಡಲಿಲ್ಲ. ಎರಡೂ ಕಾರಣಗಳಿಗಾಗಿ ಲೋಕಸಭೆ ಹೊಸ ದಾಖಲೆ ಬರೆಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತಾವು ಉತ್ತರ ನೀಡಲು ಸದನಕ್ಕೆ ಬರಲಿಲ್ಲ ಎಂಬುದಕ್ಕಿಂತ ಹೆಚ್ಚಾಗಿ ಯಾಕೆ ಬರಲಿಲ್ಲ ಎಂಬ ವಿವರಣೆ ಕೇಳಿ ದೇಶ ದಂಗಾಗಿ ಹೋಗಿದೆ ಸರ್. ಲೋಕಸಭಾಧ್ಯಕ್ಷರು ನೀಡಿರುವ ವಿವರಣೆ ಪ್ರಕಾರ ಉತ್ತರ ನೀಡಲು ಬಾರದಂತೆ ನಿಮ್ಮನ್ನು ಅವರೇ ಕೋರಿದರಂತೆ. ಬಂದಿದ್ದರೆ ತಮ್ಮ ಮೇಲೆ ದೈಹಿಕ ದಾಳಿ ನಡೆಯುವ ಸಂಭವ ಇತ್ತಂತೆ ಸರ್!

ಎಂತಹ ವಿಡಂಬನೆಯಿದು ಸರ್ ಜೀ. ಜನತಂತ್ರದ ದೇಗುಲ ಎಂದು ನೀವೇ ಕರೆದು ಮೆಟ್ಟಿಲಿಗೆ ಹಣೆ ಉಜ್ಜಿ ಪ್ರವೇಶಿಸಿರುವ ಸದನ ಲೋಕಸಭೆ. ಸಂಸತ್ ಭವನ ಸಮುಚ್ಚಯದ ಸುತ್ತಮುತ್ತ ವರ್ಷದುದ್ದಕ್ಕೂ ಬಿಗಿ ಪಹರೆ ಇರುತ್ತದೆ. ಸಂಸತ್ತಿನ ಅಧಿವೇಶನ ನಡೆದಾಗಲಂತೂ ಈ ಪಹರೆ ನೂರುಪಟ್ಟು ಹೆಚ್ಚಿರುತ್ತದೆ. ಮಾನ್ಯ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಸಂಸತ್ತಿನ ಮೇಲೆ ಉಗ್ರಗಾಮಿಗಳ ದಾಳಿ ನಡೆದ ನಂತರವಂತೂ ಈ ಪಹರೆ ಅಕ್ಷರಶಃ ಸರ್ಪಗಾವಲು ಆಗಿದೆ. ಆಗಬೇಕಾದ್ದೇ. ದೇಶದ ಮೂಲೆಮೂಲೆಗಳಿಂದ ಆರಿಸಿ ಕಳಿಸಿದ ಜನಪ್ರತಿನಿಧಿಗಳು, ಪ್ರಧಾನಮಂತ್ರಿ ಮತ್ತು ಅವರ ಮಂತ್ರಿಮಂಡಲದ ಸದಸ್ಯರು, ಪ್ರತಿಪಕ್ಷಗಳ ನಾಯಕರು ಮುಂತಾದ ಗಣ್ಯಮಾನ್ಯರೆಲ್ಲರೂ ಅಧಿವೇಶನಗಳ ಸಂದರ್ಭಗಳಲ್ಲಿ ಸಂಸತ್ತಿನಲ್ಲಿ ನೆರೆದು ಸೇರಿರುತ್ತಾರೆ. ಅವರ ಸುರಕ್ಷತೆಗೆ ಪರಮ ಆದ್ಯತೆ ನೀಡಲಾಗಿದೆ. ನಿಮ್ಮ ಮೇಲೆ ಹಕ್ಕಿಯ ನೆರಳು ಕೂಡ ಬೀಳದಂತೆ ಸ್ಪೆಷಲ್ ಕಮಾಂಡೋಗಳು ಹಗಲಿರುಳು ನಿಮ್ಮನ್ನು ಕಾಯುತ್ತಿರುತ್ತಾರೆ.

ಇಂತಹ ಉಕ್ಕಿನ ಕೋಟೆಯ ಹೃದಯ ಲೋಕಸಭೆ-ರಾಜ್ಯಸಭೆ ಸದನಗಳು. ಇಂತಹ ಹೃದಯಸ್ಥಾನಗಳಲ್ಲಿ ತಮ್ಮ ಮೇಲೆ ದೈಹಿಕ ದಾಳಿ ನಡೆಯುವ ಸಾಧ್ಯತೆ ಇದೆಯೆಂದು ಸಭಾಧ್ಯಕ್ಷರು ಎಚ್ಚರಿಸಿದ್ದು ಮೆಚ್ಚತಕ್ಕ ಸಕಾಲಿಕ ಕ್ರಮ. ಸಂಸತ್ತಿನೊಳಗೇ ತಾವು ಸುರಕ್ಷಿತ ಅಲ್ಲ ಎಂಬ ಹೇಳಿಕೆ ನೀಡಬಾರದಿತ್ತು, ದೇಶದ ಪ್ರಧಾನಿ ಸಂಸತ್ತಿನಲ್ಲೇ ಸುರಕ್ಷಿತವಲ್ಲ ಎಂದಾದರೆ ಇನ್ನೆಲ್ಲಿ ಸುರಕ್ಷಿತ? ನೀವೇ ಸುರಕ್ಷಿತ ಅಲ್ಲವಾದರೆ ಮುಗಿಲನ್ನೇ ಹೊದ್ದು ನೆಲವನ್ನೇ ಹಾಸಿಕೊಂಡಿರುವ ಈ ದೇಶದ ಕೋಟ್ಯಂತರ ಸರ್ವೇಸಾಧಾರಣ ಪ್ರಜೆಗಳ ಗತಿಯೇನು ಎಂಬುವುದು ತಮಗೆ ಆಗದವರು ಆಡಿಕೊಳ್ಳುತ್ತಿರುವ ಮಾತುಗಳು ಸರ್, ತಲೆ ಕೆಡಿಸಿಕೊಳ್ಳಬೇಡಿ.

ಸಂಸತ್ತಿನಲ್ಲೇ ತಾವು ಸುರಕ್ಷಿತ ಅಲ್ಲವೆನ್ನುವ ಮಾತು ನಿಮ್ಮ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂಬುದು ಅಪ್ಪಟ ಕುಹಕಿಗಳ ಪಿತೂರಿ ಬಿಡಿ.

ಅಡಿಗಡಿಗೆ ಅಪಾಯದ ನಡುವೆ ಬದುಕುತ್ತಿದ್ದೇನೆಂದು ಕಳೆದ ಹನ್ನೆರಡು ವರ್ಷಗಳಿಂದ ಆಗಾಗ ಹೇಳುತ್ತಲೇ ಬಂದಿದ್ದೀರಿ. ಸಾಂವಿಧಾನಕ ಜನತಂತ್ರದಲ್ಲಿ ಪ್ರತಿಪಕ್ಷಗಳಿಗೊಂದು ಸ್ಥಾನಮಾನವಿದೆ, ಕರ್ತವ್ಯಗಳಿವೆ ಎಂದು ಬಾಬಾಸಾಹೇಬ್ ನಿರ್ಮಿತ ಸಂವಿಧಾನದಲ್ಲೇ ಬರೆಯಲಾಗಿದೆ. ಆದರೆ ಪ್ರತಿಪಕ್ಷಗಳು ನಿಮ್ಮ ಪ್ರಾಣಕ್ಕೆ ಆಪತ್ತು ಎಂಬುದು ನಿಜವೇ ಆದರೆ ಅವುಗಳನ್ನು ಬರ್ಖಾಸ್ತು ಮಾಡುವುದೇ ಒಳ್ಳೆಯದೇನೋ ಅಲ್ಲವಾ ಸರ್? ತಾವು ಮತ್ತು ತಮ್ಮ ಆಡಳಿತ ಪಕ್ಷ ನಿಮ್ಮ ದನಿಯನ್ನು ನೀವೇ ಆಲಿಸುತ್ತ, ಅದರ ಮೋಹಕ ಆತ್ಮರತಿಯ ಚಕ್ರತೀರ್ಥದಲ್ಲಿ ನಿರುಮ್ಮಳವಾಗಿ ವಿಹರಿಸಬಹುದು. ಯಾವ ಅಡಚಣೆಯೂ ಇಲ್ಲದೆ ದೇಶಸೇವೆ ಮಾಡಿಕೊಂಡಿರಬಹುದು.

ಈ ಬಗೆಯ ಅಪಾಯದ ಅರಿವು ಈ ಹಿಂದಿನ ಪ್ರಧಾನಿಗಳ್ಯಾರಿಗೂ ಆಗದೆ ಹೋದದ್ದು ಸೋಜಿಗ ಅಲ್ಲವೇ ಸರ್? ನೆಹರೂ ಅವರಿಂದ ಹಿಡಿದು ತಮಗೆ ಮುನ್ನ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ತನಕ ಪ್ರಧಾನಿಗಳು ಅಪಾಯದ ಅರಿವೇ ಇಲ್ಲದೆ ಅಧಿಕಾರದ ಅಮಲಿನಲ್ಲಿ ಮುಳುಗಿದ್ದರಲ್ಲ ಮೋದೀಜೀ? ಛೇ ಛೇ…

ಜನರಲ್ ಮನೋಜ್ ಮುಕುಂದ್ ನರವಣೆ ಎಂಬ ನಿವೃತ್ತ ಸೇನಾ ಮುಖ್ಯಸ್ಥರು ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಎಂಬ ಆತ್ಮ ಚರಿತ್ರೆಯನ್ನು ಬರೆದಿದ್ದಾರಂತೆ. ಪ್ರಕಟಣೆಗೆ ತಮ್ಮ ಸರ್ಕಾರದ ಅನುಮತಿಗಾಗಿ ಎರಡು ವರ್ಷಗಳಿಂದ ಕಾಯುತ್ತಿದ್ದಾರಂತೆ ಪ್ರಕಾಶಕರು. ಹಾಗೆಂದು ಖುದ್ದ ಜನರಲ್ ನರವಣೆ ಅವರೇ ಹೇಳಿ ಮೂರೂವರೆ ತಿಂಗಳಾಗಿರಬಹುದು ಅಷ್ಟೇ ಸರ್. ಸರಿಯಾಗಿ ಹೇಳಬೇಕೆಂದರೆ 2025ರ ಅಕ್ಟೋಬರ್ ನಲ್ಲಿ ಜರುಗಿದ್ದ ಖುಶ್ವಂತ್ ಸಿಂಗ್ ಸಾಹಿತ್ಯೋತ್ಸವದ ಸಂದರ್ಭ ಸರ್.

ಚೀನಾ ದೇಶವನ್ನು ಕೆಂಗಣ್ಣು ಬಿಟ್ಟು ಹೆದರಿಸಬೇಕೆಂಬ ತಮ್ಮ ಸಕಾಲಿಕ ಸಲಹೆಯನ್ನು ಮನಮೋಹನಸಿಂಗ್ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲವಲ್ಲ ಸರ್? 2014ರಲ್ಲಿ ತಾವು ಪ್ರಧಾನಿಯಾದಿರಿ, ಕೆಂಗಣ್ಣು ಬಿಟ್ಟು ಚೀನಾವನ್ನು ಹೆದರಿಸಿ ಸರ್. ಬದುಕಿದೆಯಾ ಬಡಜೀವವೇ ಎಂದು ಕಾಲುಗಳ ಸಂದಿಯಲ್ಲಿ ಬಾಲ ಸಿಕ್ಕಿಸಿಕೊಂಡು ತಿರುಗಿ ನೋಡದೆ ಓಡಬೇಕು ನೋಡಿ.

ವಾದಿತ  ಗಡಿಪ್ರದೇಶದಲ್ಲಿ ರಸ್ತೆಗಳು, ಹೆದ್ದಾರಿಗಳನ್ನು ನಿರ್ಮಿಸುತ್ತ ಬಂದಿದ್ದ ಕಳೆದ ಕೆಲವು ವರ್ಷಗಳಲ್ಲಿ ಸುಸಜ್ಜಿತ ಹಳ್ಳಿಗಳನ್ನೇ ಕಟ್ಟಿದೆ ಚೀನಾ. ಅರುಣಾಚಲ ಪ್ರದೇಶದ ಅಪ್ಪರ್ ಸುಭಾನ್ಸಿರಿ ಜಿಲ್ಲೆಯ ತ್ಸಾರಿ ಚು ನದಿಯ ದಂಡೆಯಲ್ಲಿ 2020ರ ನವೆಂಬರ್ ನಲ್ಲೇ ಚೀನೀ ನಿರ್ಮಿಸಿರುವ ಹಳ್ಳಿಯ ಉಪಗ್ರಹ ಛಾಯಾಚಿತ್ರಗಳನ್ನು NDTV ತೋರಿಸಿತ್ತು. ಆದರೆ ತಮ್ಮ ಔದಾರ್ಯ ದೊಡ್ಡದು ಸರ್. ಯಾರೂ ದೇಶದೊಳಕ್ಕೆ ನುಗ್ಗಿಲ್ಲ, ನುಗ್ಗುವುದೂ ಇಲ್ಲ ಎಂದು ಕ್ಷಮಾಗುಣ ಮರೆದುಬಿಟ್ಟಿರಿ ಸರ್. ವೀರರು-ಶೂರರಿಗೆ ಕ್ಷಮಾಗುಣವೇ ಭೂಷಣವೆಂದು ನಮ್ಮ ಹಿರೀಕರು ಸುಮ್ಮನೇ ಹೇಳಿಲ್ಲ ಬಿಡಿ ಸರ್.

ಅದಿರಲಿ ಸರ್. 2020ರ ಆಗಸ್ಟ್ 31ರ ರಾತ್ರಿ ಶತ್ರುದೇಶ ಚೀನಾದ ಟ್ಯಾಂಕರ್ ಗಳು ನಮ್ಮ ಗಡಿಯಿಂದ ಅರ್ಧ ಕಿ.ಮೀ.ದೂರಕ್ಕೆ ಬಂದು ನಿಂತವೆಂದೂ, ಮುಂದೇನು ಮಾಡಬೇಕೆಂದು ದೇಶದ ರಕ್ಷಣಾ ಮಂತ್ರಿಯನ್ನೂ, ಪ್ರಧಾನಿಗಳಾದ ತಮ್ಮನ್ನೂ ಮಾರ್ಗದರ್ಶನಕ್ಕೆ ಕೋರಿದ್ದಾಗಿ ನರವಣೆ ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ. ಆಯ್ದ ಭಾಗಗಳನ್ನು ಕ್ಯಾರವಾನ್ ನಿಯತಕಾಲಿಕ ಇದೇ ಫೆಬ್ರವರಿ ಒಂದರ ಸಂಚಿಕೆಯಲ್ಲಿ, ‘ನರವಣೇಸ್ ಮೊಮೆಂಟ್ಸ್ ಆಫ್ ಟ್ರೂಥ್’ ಎಂಬ ತಲೆಬರೆಹದಡಿ ಪ್ರಕಟಿಸಿತು.

‘ನಿಮಗೆ ಉಚಿತವೆಂದು ತೋರಿದ್ದನ್ನು ಮಾಡಿ’ ಎಂದು ಕಟ್ಟಕಡೆಗೆ ತಾವು ಆದೇಶ ನೀಡಿದಿರೆಂದು ನರವಣೆ ಬರೆದಿದ್ದಾರೆ. ಗಂಟಲಿನ ಬಿಸಿ ತುಪ್ಪವಾಗಿ ಪರಿಮಿಸಿತು ಈ ಸನ್ನಿವೇಶ. ನುಂಗುವಂತಿಲ್ಲ, ಉಗುಳುವುದಕ್ಕೂ ಬರಲಿಲ್ಲ ಎಂದು ನರವಣೆ ಹೇಳುತ್ತಾರೆ. ಕಡೆಗೆ ಚೀನೀ ಟ್ಯಾಂಕ್ ಗಳಿಗೆ ಪ್ರತಿಯಾಗಿ ಭಾರತದ ಟ್ಯಾಂಕ್ ಗಳನ್ನು ಆಯಕಟ್ಟಿನ ಪ್ರದೇಶಗಳಲ್ಲಿ ಹೂಡುವಂತೆ ನರವಣೆ ಸೇನಾಧಿಕಾರಿಗಳಿಗೆ ಆದೇಶ ನೀಡುತ್ತಾರೆ. ಆದೇಶ ಜಾರಿಯಾಗುತ್ತದೆ. ಪ್ರತಿರೋಧವನ್ನು ದಾಖಲಿಸಿಕೊಂಡಂತೆ ಚೀನಾದ ಟ್ಯಾಂಕ್ ಗಳು ಅಲ್ಲಿಯೇ ನಿಲ್ಲುತ್ತವೆ.

ಚೀನಾಕ್ಕೆ ತಕ್ಕ ಪಾಠ ಕಲಿಸಬೇಕೆಂದು ಹೇಳುತ್ತ ಬಂದಿದ್ದ ತಾವು, ಅಂತಹ ಸ್ಥಿತಿ ಎದುರಾದಾಗ ಮಿಲಿಟರಿ ಘರ್ಷಣೆಯಿಂದ ಹಿಂದೆಗೆದು ಹೀಗೆ ಸಲೀಸಾಗಿ ಕೈ ತೊಳೆದುಕೊಂಡದ್ದು ಪಾಪ ಜನರಲ್ ನರವಣೆಯವರನ್ನು ಉಭಯಸಂಕಟಕ್ಕೆ ಸಿಲುಕಿಸಿತ್ತಂತೆ. ಆಗಸ್ಟ್ ನಂತರ ಜೂನ್ ನಲ್ಲಿ ಗಾಲ್ವಾನ್ ಕಣಿವೆ ಘರ್ಷಣೆಯಲ್ಲಿ ಭಾರತ 20 ಯೋಧರನ್ನು ಕಳೆದುಕೊಂಡಿತು. ನಿಮ್ಮ ಸರ್ಕಾರ ಯುಎಪಿಎ ಅಡಿ ಹಿಡಿದು ಜೈಲಿಗೆ ತಳ್ಳಿರುವ ಸೋನಮ್ ವಾಂಗ್ ಚುಕ್ ಅವರ ಪತ್ನಿ ಹೇಳಿರುವ ಪ್ರಕಾರ ಚೀನಾ ಕೇವಲ ಭಾರತದ ಪ್ರದೇಶವನ್ನು ಆಕ್ರಮಿಸಿಕೊಂಡಿರುವುದು ಮಾತ್ರವಲ್ಲ, ಪ್ರತಿ ವರ್ಷ ಮತ್ತಷ್ಟು ಒಳಕ್ಕೆ ನುಗ್ಗುತ್ತಿದೆಯಂತೆ ಸರ್.

ಯುದ್ಧ ಸಾರುವುದು ಮಿಲಿಟರಿಯ ಮೊದಲ ಆಯ್ಕೆ ಅಲ್ಲವೇ ಅಲ್ಲ. ಯುದ್ಧದ ಆರ್ಥಿಕ ಮತ್ತು ರಾಜಕೀಯ ಸಾಧಕಬಾಧಕಗಳನ್ನು ಅಳೆದು ತೂಗುವುದು ಮಿಲಿಟರಿಯ ಕೆಲಸವಲ್ಲ. ಜನತೆ ಆರಿಸಿದ ಸರ್ಕಾರವೇ ಆ ಕೆಲಸ ಮಾಡಬೇಕು. 1999ರಲ್ಲಿ ಪಾಕ್ ಗೆ ಕುಚೇಷ್ಟೆಯನ್ನು ತುಳಿಯಲು ಅಂದಿನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಮತ್ತು 1971ರಲ್ಲಿ ಬಾಂಗ್ಲಾ ವಿಮೋಚನಾ ಯುದ್ಧ ಸಾರುವ ನಿರ್ಧಾರವನ್ನು ಇಂದಿರಾ ಗಾಂಧೀ ಸರ್ಕಾರಗಳೇ ಸವಿವರ ಸಮಾಲೋಚನೆಗಳ ನಂತರ ಕೈಗೊಂಡಿದ್ದವು. ಪ್ರಧಾನಿಯವರಾದ ತಮಗೆ ಇದೆಲ್ಲ ತಿಳಿದೇ ಇರುತ್ತದೆ ಸರ್.  

ಜನರಲ್ ನರವಣೆಯವರು ಇಡೀ ಪುಸ್ತಕದಲ್ಲಿ ಎಲ್ಲಿಯೂ ತಮ್ಮನ್ನು ಟೀಕಿಸಿಲ್ಲವೆಂದು ಕಾರವಾನ್ ಪ್ರಕಟಣೆ ನಿಚ್ಚಳವಾಗಿ ಹೇಳಿದೆ ಸರ್. ಬದಲಾಗಿ ಪುಸ್ತಕದಲ್ಲಿ ಮತ್ತೆ ಮತ್ತೆ ತಮ್ಮನ್ನು ಹೊಗಳಿರುವ ಉಲ್ಲೇಖಗಳಿವೆಯಂತೆ. ಆದರೆ ತಮ್ಮ ಸರ್ಕಾರ ಕೈಗೊಂಡ ಅಗ್ನಿಪಥ್ ಯೋಜನೆ ಕುರಿತು ಅವರಿಗೆ ಒಪ್ಪಿಗೆ ಇರಲಿಲ್ಲವಂತೆ.

ನರವಣೆಯವರ ಈ ಆತ್ಮಚರಿತ್ರೆ ಪ್ರಕಟವಾಗದಂತೆ ಅದುಮಿಟ್ಟಿರುವುದೇ ಚೀನೀ ಆಕ್ರಮಣ ಕುರಿತು ತಮ್ಮ ಸರ್ಕಾರದ ವೈಫಲ್ಯದ ಪ್ರತೀಕ ಎಂದು ಕ್ಯಾರವಾನ್ ಲೇಖನದಲ್ಲಿ ರಕ್ಷಣಾ ವಿಶೇಷಜ್ಞ ಸುಶಾಂತ್ ಸಿಂಗ್ ಆಪಾದಿಸಿದ್ದಾರೆ ಸರ್.

ಜನರಲ್ ನರವಣೆ ಅವರ ಅಪ್ರಕಟಿತ ಪುಸ್ತಕದ ಭಾಗಗಳನ್ನು ಉಲ್ಲೇಖಿಸಲು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧೀ ಬಹುವಾಗಿ ಪ್ರಯತ್ನಿಸಿದರು ಸರ್. ಹಾಗೆ ಮಾಡದಂತೆ ಅವರ ಮಾತನ್ನು ಸಭಾಧ್ಯಕ್ಷರು ಯಶಸ್ವಿಯಾಗಿ ತಡೆಹಿಡಿದುಬಿಟ್ಟರು ಸರ್. ಪಠ್ಯದ ನೈಜತೆಯನ್ನು ಪ್ರಮಾಣೀಕರಿಸುವಂತೆ ರಾಹುಲ್ ಅವರನ್ನು ‘ಸಿಕ್ಕಿಸಿ’ ಹಾಕಿಸಿದರು. ದೇಶದ ಭದ್ರತೆಗೆ ಸಂಬಂಧಿಸಿದಂತೆ ಅತ್ಯಂತ ಸೂಕ್ಷ್ಮ ತೀರ್ಮಾನ ತೆಗೆದುಕೊಳ್ಳಲು ತಾವು ವಿಫಲರಾದಿರಿ ಎಂದು ಹೇಳುವುದು ರಾಹುಲ್ ‘ದುರು’ದ್ದೇಶವಾಗಿತ್ತು ಅಲ್ವಾ ಸರ್?

ಪ್ರತಿಪಕ್ಷದ ನಾಯಕರೆನಿಸಿಕೊಂಡವರು ಸರ್ಕಾರವನ್ನು ಪೇಚಿಗೆ ಸಿಕ್ಕಿಸಿ ಉತ್ತರ ಬಯಸುವುದು ದೇಶದ್ರೋಹ ಎಂದು ಸಂವಿಧಾನದಲ್ಲಿ ಬರೆದಿಲ್ಲವಾದರೆ ಏನಂತೆ ಸರ್, ತಮ್ಮ ಪಕ್ಷದವರು ಹಾಗೆ ಕರೆದರೆಂದರೆ ಅದು ಬ್ರಹ್ಮವಾಕ್ಯವೇ ಹೌದು ಬಿಡಿ ಸರ್.

ಲೋಕಸಭೆಯಲ್ಲಿ ಉತ್ತರ ಹೇಳದಿದ್ದರೇನಾಯ್ತು ಬಿಡಿ ಸರ್, ಮರುದಿನ ರಾಜ್ಯಸಭೆಯಲ್ಲಿ ಕಪಾಳಕ್ಕೆ ಬಾರಿಸಿದಂತೆ ಮಾತಾಡಿದ್ದೀರಿ. ನನ್ನ ಸಮಾಧಿ ತೋಡುವ ಕಾಂಗ್ರೆಸ್ ಷಡ್ಯಂತ್ರ ಸಫಲ ಆಗಲು ಬಿಡಲ್ಲ ಅಂದಿದ್ದೀರಿ ಸರ್. ಲೋಕಸಭೆಯಲ್ಲಿ ನಿಮ್ಮ ಮೇಲೆ ದೈಹಿಕ ಆಕ್ರಮಣ ನಡೆಯುವುದೆಂದು ನೀವೂ ನಂಬಿಬಿಟ್ಟಿರಾ ಸರ್?

ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಕುರಿತು ನಡೆದ ಚರ್ಚೆಗೆ ಉತ್ತರ ನೀಡಲು ನೀವು ಬರುವಿರೆಂದು ನಿರೀಕ್ಷಿಸುವ ಹೊತ್ತಿನಲ್ಲಿ ಪ್ರತಿಪಕ್ಷಗಳ ಕೆಲವು ಮಹಿಳಾ ಸದಸ್ಯರು ಲೋಕಸಭೆಯಲ್ಲಿ ತಾವು ಕೂರುವ ಆಸನದ ಬಳಿ ಜಮಾಯಿಸಿದ್ದರು. ‘ನಿಮಗೆ ತೋಚಿದಂತೆ ಕ್ರಮ ಕೈಗೊಳ್ಳಿ’ ಎಂದು ಜನರಲ್ ನರವಣೆ ಅವರಿಗೆ ತಾವು ನೀಡಿದ್ದ ನಿರ್ದೇಶನದ ಬರೆಹವಿದ್ದ ಕಾಗದದ ಫಲಕಗಳನ್ನು ಈ ಹೆಣ್ಣುಮಕ್ಕಳು ಕೈಯಲ್ಲಿ ಹಿಡಿದಿದ್ದರು ಸರ್. ಇದು ನಿಜಕ್ಕೂ ಅಪಾಯಕಾರಿ ಸರ್. ತಾವು ಬರದೆ ಇದ್ದುದೇ ಒಳಿತಾಯಿತು ಸರ್.

ತೀರಾ ಪೇಚಿನ ಪರಿಸ್ಥಿತಿ ಎದುರಾದಾಗೆಲ್ಲ, ತಮ್ಮ ಮೇಲೆ ಆಪತ್ತು ತರಲು ಪ್ರತಿಪಕ್ಷಗಳು ಷಡ್ಯಂತ್ರ ರಚಿಸಿವೆ ಎನ್ನುತ್ತ ಬಂದಿದ್ದೀರಿ. ಈ ಸಲ ಕೂಡ ಚೀನೀ ಆಕ್ರಮಣದ ಮುಂದೆ ತಾವು ನಿರುತ್ತರರೂ ಶರಣಾಗತರೂ ಆಗಿಬಿಟ್ಟಿರಿ ಎಂಬ ಅಂಶ ಬಯಲಿಗೆ ಬೀಳುತ್ತದೆಂದು ಗಾಬರಿಯಾಗಿ ಲೋಕಸಭೆಗೆ ಬರದೆ ತಪ್ಪಿಸಿಕೊಂಡಿರಿ. ಇದು ಪಲಾಯನದ ತಂತ್ರವಲ್ಲದೆ ಮತ್ತೇನೂ ಅಲ್ಲ. ಬರಿದೇ ಪ್ರತಿಪಕ್ಷಗಳನ್ನು ದೂರುತ್ತಿದ್ದೀರಿ ಎಂದು ರಾಹುಲ್ ಗಾಂಧೀ-ಪ್ರಿಯಾಂಕಾ ಗಾಂಧೀ ಹಲುಬಿದ್ದಾರೆ ನೋಡಿ ಸರ್. ತಮಗೆ ಸಮಾಧಿ ತೋಡುವ ಕಾಂಗ್ರೆಸ್ ಕುತಂತ್ರದ ಪುರಾವೆಗಳು ನಿಮ್ಮಲ್ಲಿ ಇದ್ದರೂ ಅವುಗಳನ್ನು ಕೊಡದೆ ಕ್ಷಮಿಸಿಬಿಡುವ ದೊಡ್ಡಗುಣ ತಮ್ಮದು ಸರ್.

ನೆನಪಿದೆಯಾ ಸರ್, 2023ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯ ಹೊತ್ತಿನಲ್ಲೂ ನಿಮಗೆ ಸಮಾಧಿ ತೋಡುವ ಕಾಂಗ್ರೆಸ್ ನ ಇಂತಹುದೇ ಷಡ್ಯಂತ್ರದ ಆರೋಪ ಮಾಡಿದ್ದಿರಿ ಸರ್.

ಜನರಲ್ ನರವಣೆ ಪುಸ್ತಕದ ಪ್ರಸ್ತಾಪ ಕುರಿತು ರಾಹುಲ್ ಗಾಂಧೀ ಸದನದಲ್ಲಿ ಮಾಡಲು ಮುಂದಾಗಿದ್ದ ಉಲ್ಲೇಖದಿಂದ ಆಗುವ ಮುಖಭಂಗದಿಂದ ತಪ್ಪಿಸಿಕೊಳ್ಳಲು ತಾವು ಸದನಕ್ಕೆ ಬಾರದೆ ‘ಸಭಾಧ್ಯಕ್ಷರ ಹಿಂದೆ ಅಡಗಿಕೊಂಡಿರಿ’. ಸದನವನ್ನು ಎದುರಿಸುವ ಗಟ್ಸ್ ನಿಮಗೆ ಇರಲಿಲ್ಲ ಎಂಬ ಪ್ರಿಯಾಂಕ ಗಾಂಧೀಯವರ ಮಾತು ಅದೆಷ್ಟು ಅಪ್ರಬುದ್ಧ ಅಲ್ಲವೇ ಸರ್?

56 ಅಂಗುಲ ಅಗಲದ ಎದೆಗಾರಿಕೆ ತಮ್ಮದು. ಹಾಗೆ ಪಲಾಯನ ಮಾಡುವುದು ಸಾಧ್ಯವೇ ಇಲ್ಲ ಬಿಡಿ ಸರ್. ಗುಜರಾತಿನ ಮುಖ್ಯಮಂತ್ರಿಯಾಗಿದ್ದ ದಿನಗಳಿಂದಲೂ ಈ ಎದೆಗಾರಿಕೆಯನ್ನು ಸಾಬೀತು ಮಾಡಿ ತೋರಿರುವವರು ನೀವು.

‘ನಾನೊಬ್ಬ ಜೋಗಿ, ಸರ್ವಸಂಗ ಪರಿತ್ಯಾಗಿ. ಜೋಳಿಗೆ ತಗಲಿಸಿಕೊಂಡು ಎಲ್ಲ ಬಿಟ್ಟುಕೊಟ್ಟು ಹೊರಟೇ ಬಿಡುತ್ತೇವೆ ಕಣ್ರೀ’ (ಅರೇ, ಹಮ್ ತೋ ಫಕೀರ್ ಆದ್ಮೀ ಹೈ, ಝೋಲಾ ಲೇ ಕೇ ಚಲ್ ಪಢೇಂಗೇ ಜೀ…) ಎಂದಿದ್ದಿರಿ. ಆದರೂ ಈ ದೇಶದ ಜನರನ್ನು ನಡುನೀರಿನಲ್ಲಿ ಕೈಬಿಡಕೂಡದು ಎಂಬ ಏಕೈಕ ಕಾಳಜಿಯ ಕಾರಣ ನೀವು ಫಕೀರರೂ ಆಗಲಿಲ್ಲ, ಜೋಳಿಗೆ ಹಿಡಿಕೊಂಡು ಎಲ್ಲ ತೊರೆದು ಹೊರಡಲೂ ಇಲ್ಲ. ಬದಲಿಗೆ ಪ್ರಧಾನಿಯಾಗಿ ಉಳಿಯುವ ತಮ್ಮ ದೃಢಸಂಕಲ್ಪ ಇನ್ನಷ್ಟು ಮತ್ತಷ್ಟು ಗಟ್ಟಿಯಾಗುತ್ತಲೇ ಹೋಗುತ್ತಿದೆ. ಮೋದಿ ಮೋದಿ ಎಂದು ಸಾವಿರಾರು ಸಲ ಬರೆದಿದ್ದ ಹತ್ತು ಲಕ್ಷದ ಸೂಟನ್ನು ತೊಟ್ಟಿರಿ. 800 ಕೋಟಿ ರುಪಾಯಿಯ ವಿಮಾನ ಖರೀದಿಸಿದಿರಿ. ಕೋಟ್ಯಂತರ ರುಪಾಯಿ ಬೆಲೆಯ ಹಲವು ಲಿಮೋಸಿನ್ ಕಾರುಗಳು ನಿಮ್ಮ ವಾಹನಗಳ ಲಾಯ ಸೇರಿದವು. ಪಾರ್ಲಿಮೆಂಟಿಗೆ ನೆಲದಡಿಯಲ್ಲಿ ನೇರ ರಾಜಮಾರ್ಗವುಳ್ಳ ಹೊಸ ಅರಮನೆಯನ್ನು ಕಟ್ಟಿಸಿಕೊಳ್ಳುತ್ತಿದ್ದೀರಿ. ಇದೆಲ್ಲ ಜನರಿಗಾಗಿಯೇ ಅಲ್ಲವೇ ಸರ್?

ಮೂಢಮತಿಗಳಿಗೆ ತಿಳಿಯದು ತಾವೇನು ಮಾಡುತ್ತಿದ್ದೇವೆಂದು, ಅವರನ್ನು ಮತ್ತೂ ಒಮ್ಮೆ ಕ್ಷಮಿಸಿಬಿಡಿ ಸರ್.

ಆದರಗಳೊಂದಿಗೆ
ಈ ದಿನ.ಕಾಂ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...