ರಾಜ್ಯ ಸರ್ಕಾರಗಳು ತಮ್ಮ ಒಪ್ಪಿಗೆಯನ್ನು ನೀಡದಿದ್ದರೆ ಎನ್‌ಡಿಡಿಬಿಯಿಂದ ಬರಬೇಕಾದ ಅನುದಾನವನ್ನು ತಡೆಯುವ ದುಷ್ಕೃತ್ಯಕ್ಕೂ ಕೇಂದ್ರ ಸರ್ಕಾರ ಕೈ ಹಾಕಬಹುದು. ತ್ರಿಭಾಷಾ ಸೂತ್ರವನ್ನು ಒಪ್ಪದ ಕಾರಣಕ್ಕೆ ತಮಿಳುನಾಡು ಸರ್ಕಾರಕ್ಕೆ ಶಿಕ್ಷಣದ ಅನುದಾನವನ್ನು ನೀಡುವುದಿಲ್ಲ ಎನ್ನುವಂತಹ ದಾಷ್ಟ್ಯವನ್ನು ಕೇಂದ್ರ ಸರ್ಕಾರ ತೋರಿರುವುದನ್ನು ಗಮನಿಸಬಹುದು.
ದೇಶದ ಎಲ್ಲಾ ರಾಜ್ಯಗಳೂ ತಮ್ಮ ಸಹಕಾರ ನೀತಿಯನ್ನು 2026ರ ಜನವರಿ 31ರೊಳಗೆ ಪ್ರಕಟಿಸಬೇಕು ಎಂದು ಕೇಂದ್ರ ಸಹಕಾರಿ ಸಚಿವರೂ ಆಗಿರುವ ಗೃಹ ಸಚಿವ ಅಮಿತ್ ಶಾ ನಿರ್ದೇಶಿಸಿದ್ದಾರೆ. ರಾಷ್ಟ್ರದ ಎಲ್ಲ ರಾಜ್ಯಗಳ ಸಹಕಾರ ಸಚಿವರೊಂದಿಗೆ ಸಭೆ ನಡೆಸಿ, “2025ರಿಂದ 2045ರವರೆಗೆ ಜಾರಿಗೆ ಬರುವ ರಾಷ್ಟ್ರೀಯ ಸಹಕಾರ ನೀತಿಯು (ಎನ್‌ಸಿಪಿ) ಶೀಘ್ರವೇ ಪ್ರಕಟವಾಗಲಿದ್ದು, ಈ ನೀತಿಯಡಿಯಲ್ಲಿ, ಪ್ರತಿಯೊಂದು ರಾಜ್ಯವೂ ತನ್ನ ಸಹಕಾರ ನೀತಿಯನ್ನು ತನ್ನದೇ ಆದ ಸಹಕಾರ ಸಂಬಂಧಿತ ಪರಿಸ್ಥಿತಿಗಳ ಆಧಾರದ ಮೇಲೆ ರೂಪಿಸಿ, ಸ್ಪಷ್ಟ ಗುರಿಗಳನ್ನು ನಿಗದಿ ಮಾಡಿಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.
ಮಾದರಿ ರಾಷ್ಟ್ರೀಯ ಸಹಕಾರಿ ನೀತಿ ಕಾಯ್ದೆಯಡಿ ದೇಶದಾದ್ಯಂತ ಸಹಕಾರಿ ವಲಯದಲ್ಲಿ ಶಿಸ್ತು, ನಾವೀನ್ಯತೆ ಮತ್ತು ಪಾರದರ್ಶಕತೆ ತರಲಾಗುವುದು. ಅದರ ಭಾಗವಾಗಿ ಎನ್‌ಸಿಪಿ ರೂಪಿಸಲು ರಾಜ್ಯಗಳಿಗೆ ಆದೇಶಿಸಲಾಗುತ್ತಿದೆ. 2026ರ ಒಳಗೆ 2 ಲಕ್ಷ ʼಪ್ರೈಮರಿ ಅಗ್ರಿಕಲ್ಚರಲ್ ಕ್ರಿಡಿಟ್ ಸೊಸೈಟಿʼಗಳನ್ನು ಸ್ಥಾಪಿಸಲಾಗುವುದು. ಆಗ ದೇಶದ ಯಾವೊಂದು ಗ್ರಾಮವೂ ಪ್ರಾಥಮಿಕ ಸಹಕಾರಿ ಸಂಸ್ಥೆಯನ್ನು ಹೊಂದಿಲ್ಲದೇ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಮುಂದುವರೆದು, “140 ಕೋಟಿ ಜನಸಂಖ್ಯೆಯ ಭಾರತದಲ್ಲಿ ಜಿಡಿಪಿ, ಜಿಎಸ್ಡಿಪಿ ಮತ್ತು ಉದ್ಯೋಗವನ್ನು ಹೆಚ್ಚಿಸುವುದು ಬಹಳ ಮುಖ್ಯ. ಸಹಕಾರಿ ವಲಯವೊಂದೇ ಪ್ರತಿಯೊಬ್ಬರಿಗೆ ಉದ್ಯೋಗ ದೊರಕಿಸಲಿರುವ ಆಯ್ಕೆ. ಅದಕ್ಕಾಗಿಯೇ ನಾಲ್ಕು ವರ್ಷಗಳ ಹಿಂದೆ ಕೇಂದ್ರ ಸಹಕಾರಿ ಸಚಿವಾಲಯವನ್ನು ಸ್ಥಾಪಿಸಲಾಯಿತು. ದೇಶದ ಲಕ್ಷಾಂತರ ರೈತರ ಮತ್ತು ಗ್ರಾಮೀಣ ಜನರ ಬಲವರ್ಧನೆಗೆ ಸಹಕಾರಿ ವಲಯದಲ್ಲಿ ಹೊಸತನ ಬರಬೇಕು” ಎಂದಿದ್ದಾರೆ. ಆದರೆ ಅಮಿತ್ ಶಾ ಅವರ ಮಾತಿನ ಧಾಟಿ ಮಥಿಸಿದರೆ ನಮಗೆ ದೊರಕುವುದು ಮಜ್ಜಿಗೆಯಲ್ಲ, ಬರೀ ಹುಳಿಯಷ್ಟೇ ಎಂಬುದು ಸ್ಪಷ್ಟವಾಗುತ್ತದೆ.

ಸಹಕಾರಿ ಕ್ಷೇತ್ರವನ್ನು ಕೇಂದ್ರೀಕರಣ ಮಾಡುವ ಕಸರತ್ತಿನಲ್ಲಿ ಮೋದಿ ಮತ್ತು ಅಮಿತ್ ಶಾ ಜೋಡಿ ಕಳೆದ ನಾಲ್ಕು ವರ್ಷಗಳಿಂದಲೂ ಪ್ರಯತ್ನಿಸುತ್ತಲೇ ಇದೆ. ಅದರ ಭಾಗವಾಗಿ 2021ರಲ್ಲಿ, ಅಲ್ಲಿವರೆಗೂ ಒಕ್ಕೂಟ ಸರ್ಕಾರದಲ್ಲಿ ಇಲ್ಲದ ಸಹಕಾರಿ ಸಚಿವಾಲಯ ತಲೆ ಎತ್ತಿತು. ಈ ಇಲಾಖೆಯ ಜವಾಬ್ದಾರಿಯನ್ನು ಗೃಹಸಚಿವ ಅಮಿತ್ ಶಾ ಅವರೇ ನಿಭಾಯಿಸುತ್ತಿರುವುದನ್ನು ಗಮನಿಸಬಹುದು. ಗುಜರಾತಿನ ಅಮುಲ್‌ನಂತಹ ಸಹಕಾರಿ ಬ್ರಾಂಡ್‌ನ ಅಗಾಧತೆ, ಸಾಮರ್ಥ್ಯ ಬಲ್ಲ ಶಾ ಅವರಿಗೆ ಈ ವಲಯದಲ್ಲಿನ ಸಂಪತ್ತು ತಿಳಿಯದೇ ಇರುವ ವಿಷಯವಲ್ಲ.
ಸಹಕಾರಿ ಕ್ಷೇತ್ರವು ನಮ್ಮ ಸಂವಿಧಾನದ ಪ್ರಕಾರ ರಾಜ್ಯ ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಅಂದರೆ, ಈ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರ ಮೂಗು ತೂರಿಸುವಂತಿಲ್ಲ. ತಮ್ಮ ಜನರ ಹಿತಾಸಕ್ತಿಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರಗಳು ಸಹಕಾರಿ ನೀತಿ ನಿರೂಪಣೆಗಳನ್ನು ಮಾಡಬೇಕಾಗುತ್ತದೆ. ಹೀಗಿರುವಾಗ ಸಹಕಾರಿ ವಲಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಅವಣಿಸುತ್ತಿರುವ ಕೇಂದ್ರದ ನಿಲುವುಗಳನ್ನು ನಾಕಾ ಬದಿಗಳಿಂದಲೂ ಪರಾಮರ್ಶಿಸಬೇಕಾಗುತ್ತದೆ.
ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟ (ಅಮೂಲ್) ನಂತರದಲ್ಲಿ ಕರ್ನಾಟಕ ಹಾಲು ಮಹಾಮಂಡಳ (ನಂದಿನಿ) ಬಲಿಷ್ಠವಾಗಿದೆ. ಇದರ ಜೊತೆಗೆ ನ್ಯಾಷನಲ್ ಡೇರಿ ಡೆವಲಪ್ಮೆಂಟ್ ಬೋರ್ಡ್ (ಮದರ್ ಡೇರಿ), ತಮಿಳುನಾಡು ಹಾಲು ಉತ್ಪಾದಕರ ಒಕ್ಕೂಟ (ಆವಿನ್), ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟ (ಮಿಲ್ಮಾ) ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಜನರೊಂದಿಗೆ ನೇರ ಒಡನಾಟ ಹೊಂದಿವೆ. 2024-25ರಲ್ಲಿ ಅಮೂಲ್‌ನ ವಹಿವಾಟು 90,000 ಕೋಟಿ ರೂ., ನಂದಿನಿ ಉತ್ಪನ್ನಗಳದ್ದು 25,000 ಕೋಟಿ ರೂ., ಮದರ್ ಡೇರಿಯದ್ದು 17,500 ಕೋಟಿ ರೂ, ಆವಿನ್ ಉತ್ಪನ್ನಗಳದ್ದು ಸುಮಾರು 6,000 ಕೋಟಿ ರೂ., ಮಿಲ್ಮಾ 4346 ಕೋಟಿ ವಹಿವಾಟು ನಡೆಸಿವೆ. ಹೀಗೆ ರಾಜ್ಯಗಳ ಕೈಯಲ್ಲಿರುವ ಸಹಕಾರಿ ಸಂಸ್ಥೆಗಳು ದೊಡ್ಡ ಮಟ್ಟದಲ್ಲಿ ಒಂದು ಮಟ್ಟಿಗೆ ಜನರ ಕೈಯಲ್ಲಿಯೇ ಇವೆ. ಅವು ಸಾರ್ವಜನಿಕವಾಗಿದ್ದುಕೊಂಡೇ ತಮ್ಮ ಎಡರು-ತೊಡರುಗಳನ್ನು ತಾವೇ ಪರಿಹರಿಸಿಕೊಳ್ಳುತ್ತಿವೆ. ಅವುಗಳನ್ನು ಕೇಂದ್ರ ಸರ್ಕಾರ ಹಿಡಿತಕ್ಕೆ ತೆಗೆದುಕೊಂಡರೆ ಅದು ರಾಜ್ಯಗಳ ಸ್ವಾಯತ್ತತೆ ಮೇಲೆ ನಡೆಸುವ ಗದಾಪ್ರಹಾರವಾಗುತ್ತದೆ. ಸ್ಥಳೀಯ ಹಿತಾಸಕ್ತಿ ಕಸಿದು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡಂತಾಗುತ್ತದೆ.

ನಮ್ಮ ನಂದಿನಿ ಉತ್ಪನ್ನಗಳನ್ನೇ ತೆಗೆದುಕೊಳ್ಳೋಣ… ಹಲವು ಏಳುಬೀಳುಗಳನ್ನು ಕಂಡ ಕೆಎಂಎಫ್ ಸಂಸ್ಥೆಯು ಹಾಲು, ಮೊಸರು, ತುಪ್ಪ, ಸ್ವೀಟ್‌ನಿಂದ ಹಿಡಿದು ದೋಸೆ ಹಿಟ್ಟು ಮಾರಾಟದವರೆಗೂ ಬೆಳೆದು ನಿಂತಿದೆ. ಖಾಸಗಿ ಹಾಲು ಮಾರಾಟ ಕಂಪನಿಗಳೂ ಸಕ್ರಿಯವಾಗಿವೆ. ಇದೇ ಹೊತ್ತಿನಲ್ಲಿ ಮೋದಿ- ಅಮಿತ್ ಶಾ ಜೋಡಿಯ ನಲ್ಮೆಯ ಮಿತ್ರರಾದ ಮುಕೇಶ್ ಅಂಬಾನಿಯವರ ರಿಲೆಯನ್ಸ್ ಕಂಪನಿಯು ಹಾಲು ಉತ್ಪನ್ನಗಳ ಕ್ಷೇತ್ರಕ್ಕೆ ಕಾಲಿಟ್ಟಿದೆ. ಅಮೂಲ್‌ನ ಮುಖ್ಯಸ್ಥರಾಗಿದ್ದ ಆರ್.ಎಸ್.ಸೋದಿ ಅವರು ಅಂಬಾನಿಯವರ ರಿಲೆಯನ್ಸ್ ಕಂಪನಿಗೆ ಸೇರಿಕೊಂಡಿದ್ದಾರೆ. ಈ ಬೆಳವಣಿಗೆಗಳು ಕೋಟ್ಯಂತರ ಜನರ ಬದುಕಿಗೆ ಆಸರೆಯಾಗಿರುವ ಹೈನುಗಾರಿಕೆಯನ್ನು ಅಂಬಾನಿಯ ಪದತಲದಲ್ಲಿ ಇಡುವ ಹುನ್ನಾರವಾಗಿರಬಹುದೇ ಎಂಬ ಅನುಮಾನ ಹುಟ್ಟಿಸುತ್ತಿವೆ. ʼಮೊದಲು ಕೇಂದ್ರೀಕರಣ ಬಳಿಕ ಖಾಸಗೀಕರಣʼ ಎಂಬ ಆತಂಕವನ್ನು ಅಲ್ಲಗಳೆಯಲಾಗದು. ಮೂರು ರೈತ ವಿರೋಧಿ ಕಾಯ್ದೆಗಳನ್ನು ತಂದು, ಅದಾನಿಗೆ ಅನುಕೂಲ ಮಾಡಿಕೊಡಲು ಇದೇ ಕೇಂದ್ರ ಸರ್ಕಾರ ಹೊರಟಿತ್ತು. ಪಂಜಾಬ್, ಹರ್ಯಾಣ ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲ ಬೀದಿಯಲ್ಲಿ ಕುಳಿತ ಬಳಿಕ ವಾಪಸ್ ತೆಗೆದುಕೊಂಡಿದ್ದು ಇನ್ನೂ ನೆನಪಿನಿಂದ ಮಾಸಿಲ್ಲ.
ಇದನ್ನೂ ಓದಿ: ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ; ಐದು ದಶಕಗಳ ಏಳು-ಬೀಳು
ಇಂತಹದ್ದೇ ಕಾರ್ಪೊರೇಟ್ ಹಿತಾಸಕ್ತಿಯ ಭಾಗವಾಗಿ ಹೊಸ ಕಾಯ್ದೆಯನ್ನು ತರುತ್ತಿರುವ ಭಯ ರೈತರನ್ನು ಆವರಿಸುತ್ತಿದೆ. ಅಂಬಾನಿಯವರು ಹೈನುಗಾರಿಕೆಯ ಮೇಲೆ ಏಕಸ್ವಾಮ್ಯವನ್ನು ಸ್ಥಾಪಿಸಲು ತುದಿಗಾಲಲ್ಲಿ ನಿಂತಂತಿದ್ದಾರೆ. ಈ ಹೊತ್ತಿನಲ್ಲಿ ಕೇಂದ್ರ ಸರ್ಕಾರ ರೂಪಿಸುವ ಕಾಯ್ದೆಗಳು ಗುಮಾನಿ ಹುಟ್ಟಿ ಹಾಕದೆ ಇರವು. ಸಹಕಾರಿ ಕ್ಷೇತ್ರವನ್ನು ಬರಕಾಸ್ತು ಮಾಡಿ, ಕಾರ್ಪೊರೇಟ್ ಶಕ್ತಿಗಳ ಕೈಗೆ ರೈತರ ಜುಟ್ಟನ್ನು ಕೊಡುವ ಹುನ್ನಾರ ನಡೆದಿದ್ದರೆ ಆಶ್ಚರ್ಯಪಡಬೇಕಿಲ್ಲ.

ಅಟಲ್ ಬಿಹಾರಿ ವಾಜಪೇಯಿ ಅವರ ಅಧಿಕಾರವಧಿಯಲ್ಲಿಯೂ ಸಹಕಾರಿ ಕೇತ್ರವನ್ನು ಕೇಂದ್ರ ಸರ್ಕಾರ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿತ್ತು. ಈಗ ಮೋದಿ-ಶಾ ಆಡಳಿತದಲ್ಲಿ ಕೇಂದ್ರೀಕರಣದ ಬಿರುಸು ಜೋರಾಗಿದೆ. ಸಹಕಾರಿ ಸಂಸ್ಥೆಗಳು ಎಲ್ಲಿಯವರೆಗೆ ರಾಜ್ಯ ಸರ್ಕಾರದ ಹಿಡಿತದಲ್ಲಿರುತ್ತವೆಯೋ ಅಲ್ಲಿವರೆಗೆ ಸ್ಥಳೀಯ ಹಿತಾಸಕ್ತಿಗಳು ಉಸಿರಾಡಬಹುದು. ಅದು ಸಾಂವಿಧಾನಕವೂ ಹೌದು. ಇದಲ್ಲದೆ ಸಹಕಾರಿ ವಲಯವನ್ನು ಕೇಂದ್ರದ ಸುಪರ್ದಿಗೆ ಬಿಟ್ಟರೆ, ಈಗ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ಅಥವಾ ಇನ್ನಾವುದೇ ಸ್ಥಳೀಯ ಭಾಷೆ ಬಾರದ ನೌಕರರೊಂದಿಗೆ ಸ್ಥಳೀಯರು ಕಿತ್ತಾಡುತ್ತಿರುವಂತೆ ಆಗಲೂ ದಿನಾ ಗುದ್ದಾಡಬೇಕಾದೀತು.
ಒಂದು ವೇಳೆ ಕೇಂದ್ರದ ಮೂಗುತೂರಿಸುವಿಕೆಗೆ ಆಕ್ಷೇಪಿಸಿದರೆ ಕೇಂದ್ರ ತನ್ನ ಅಧಿಕಾರ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ. ರಾಜ್ಯ ಸರ್ಕಾರಗಳು ತಮ್ಮ ಒಪ್ಪಿಗೆಯನ್ನು ನೀಡದಿದ್ದರೆ ಎನ್‌ಡಿಡಿಬಿಯಿಂದ ಬರಬೇಕಾದ ಅನುದಾನವನ್ನು ತಡೆಯುವ ದುಷ್ಕೃತ್ಯಕ್ಕೂ ಕೇಂದ್ರ ಸರ್ಕಾರ ಕೈ ಹಾಕಬಹುದು. ತ್ರಿಭಾಷಾ ಸೂತ್ರವನ್ನು ಒಪ್ಪದ ಕಾರಣಕ್ಕೆ ತಮಿಳುನಾಡು ಸರ್ಕಾರಕ್ಕೆ ಶಿಕ್ಷಣದ ಅನುದಾನವನ್ನು ನೀಡುವುದಿಲ್ಲ ಎನ್ನುವಂತಹ ದಾಷ್ಟ್ಯವನ್ನು ಕೇಂದ್ರ ಸರ್ಕಾರ ತೋರಿರುವುದನ್ನು ಗಮನಿಸಬಹುದು.
ಕೇಂದ್ರೀಕರಣದ ತೂಗುಗತ್ತಿಯ ಕುರಿತು ಎಚ್ಚರಿಕೆ ವಹಿಸಬೇಕಾಗುತ್ತದೆ. ಕರ್ನಾಟಕದ ಅಸ್ಮಿತೆಯ ಭಾಗವಾಗಿದ್ದ ಬ್ಯಾಂಕುಗಳು ಏನಾದವೆಂದು ನೋಡಬಹುದು. ನಾಲ್ವಡಿಯವರು ಕಟ್ಟಿದ ಮೈಸೂರು ಬ್ಯಾಂಕ್, ಉಪೇಂದ್ರ ಅನಂತ ಪೈ, ಟಿಎಂಎ ಪೈ, ವಾವನ ಶ್ರೀನಿವಾಸ ಕುಡ್ವ ಅವರ ಕನಸಿನ ಸಿಂಡಿಕೇಟ್ ಬ್ಯಾಂಕ್, ಹಾಜಿ ಅಬ್ದುಲ್ಲಾ ಅವರ ಕಾರ್ಪೊರೇಷನ್ ಬ್ಯಾಂಕ್, ಅತ್ತಾವರ ಬಾಲಕೃಷ್ಣ ಅವರ ವಿಜಯ ಬ್ಯಾಂಕ್‌ಗಳನ್ನು ವಿಲೀನ ಮಾಡಿ ಅವುಗಳ ಅಸ್ಮಿತೆಯನ್ನೇ ಹಾಳುಗೆಡವಲಾಯಿತು. ಈ ಬ್ಯಾಂಕ್ಗಳಲ್ಲಿ ಉತ್ತರದ ರಾಜ್ಯಗಳ ಜನರ ಹಿಡಿತ ಹೆಚ್ಚಾಯಿತು. ಜಿಎಸ್ಟಿ ಜಾರಿಗೆ ತಂದು, ರಾಜ್ಯ ಸರ್ಕಾರಗಳಿಗೆ ಬರಬೇಕಾದ ಪಾಲಿನಲ್ಲಿಯೂ ವಂಚಿಸಲಾಯಿತು. ಹೈನುಗಾರಿಕೆಯೂ ಹೀಗೆ ಆದರೆ ಆಶ್ಚರ್ಯವಿಲ್ಲ. ರಾಜ್ಯದ ಸಂಪೂರ್ಣ ನಿಯಂತ್ರಣ ಕಳೆದುಕೊಳ್ಳಬೇಕಾಗುತ್ತದೆ. ಸಣ್ಣ ಗ್ರಾಮವೊಂದರಲ್ಲಿ ನಡೆಯುತ್ತಿರುವ ಸಹಕಾರಿ ಸಂಘದ ಮೇಲೆ ಅಲ್ಲಿನ ಜನರು ಹಿಡಿತ ಕಳೆದುಕೊಳ್ಳುತ್ತಾರೆ. ಅಂತಿಮವಾಗಿ ಕಾರ್ಪೊರೇಟ್ ಕುಳಗಳ ಕೈಗೆ ರೈತರನ್ನು ಹಿಡಿದು ಕೊಟ್ಟರೆ ಅಲ್ಲಿಗೆ ಸಹಕಾರಿ ಕ್ಷೇತ್ರಕ್ಕೆ ಕೊನೆಯ ಮೊಳೆ ಹೊಡೆದಂತೆ.
ಇದನ್ನೂ ಓದಿ: ಪ್ಲಾಸ್ಟಿಕ್ ಚೀಲ ಮುಕ್ತ ದಿನ | ಪರಿಸರ ಸ್ನೇಹಿ ಭವಿಷ್ಯಕ್ಕಾಗಿ ಜಾಗತಿಕ ಹೋರಾಟ
ಸಹಕಾರಿ ವಲಯವು ಹಿಂದಿನಿಂದಲೂ ಭಾರತೀಯ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿ ಬಾಳುತ್ತಿದೆ. ಸಾವಿರಾರು ರೈತರ ಜೀವನಾಧಾರವಾಗಿ, ಮಹಿಳಾ ಸಬಲೀಕರಣದ ಭಾಗವಾಗಿ, ಸಾರ್ವಜನಿಕ ಪಾಲುದಾರಿಕೆಯ ಮಾದರಿಯಾಗಿ ರೂಪುಗೊಂಡ ಈ ವ್ಯವಸ್ಥೆಯು ಈಗ ಕೇಂದ್ರದ ಕೇಂದ್ರೀಕರಣ ಪ್ರಯತ್ನದಲ್ಲಿ ತನ್ನ ಅಸ್ತಿತ್ವದ ಸಂಭವನೀಯ ಅತಂತ್ರತೆಯ ಸಂಕಟ ಎದುರಿಸುತ್ತಿದೆ. ರಾಜ್ಯಗಳ ಹಕ್ಕನ್ನು, ಸ್ಥಳೀಯ ಹಿತಾಸಕ್ತಿಯನ್ನು, ಸಹಕಾರಿ ಸಂಘಗಳ ಸ್ವಾತಂತ್ರ್ಯವನ್ನು ಕತ್ತರಿಸಿ ಕೇಂದ್ರವು ತನ್ನ ನಿಯಂತ್ರಣವನ್ನು ಗಟ್ಟಿಗೊಳಿಸಿಕೊಳ್ಳಲು ಹೊರಟಿರುವುದು ಸಾಂವಿಧಾನಿಕ ಸಂವೇದನಾಶೀಲತೆಗೇ ಪ್ರಶ್ನೆಯಾಗಿ ನಿಂತಿದೆ. ಅಂಬಾನಿಯಂತಹ ಕಾರ್ಪೊರೇಟ್ ಶಕ್ತಿಗಳು ಹಾಲು ಉತ್ಪನ್ನ ಕ್ಷೇತ್ರದಲ್ಲಿ ತೀವ್ರವಾಗಿ ಪ್ರವೇಶಿಸುತ್ತಿರುವ ಈ ಹೊತ್ತಿನಲ್ಲಿ, ಸಹಕಾರ ಕ್ಷೇತ್ರದ ಮುಕ್ತಾಯದ ಘಂಟೆಯಾಗಿ ಕೇಂದ್ರದ ‘ಮಾದರಿ ನೀತಿ’ ಭಾಸವಾಗದಿರಲಿ ಎಂಬುದು ಈ ದೇಶದ ತಳಮಟ್ಟದ ಸಂಸ್ಥೆಗಳ ಕೂಗು.
ರಾಜ್ಯಗಳು ಎಚ್ಚರಿಕೆಯಿಂದ, ಸಾಮೂಹಿಕ ಶಕ್ತಿ ಮತ್ತು ರಾಜಕೀಯ ಸಾಮರ್ಥ್ಯವನ್ನು ಬಳಸಿಕೊಂಡು, ಈ ಕೇಂದ್ರೀಕರಣದ ಜಾಲಕ್ಕೆ ತಕ್ಕ ಉತ್ತರ ನೀಡಬೇಕಾಗಿದೆ. ಸಹಕಾರ ಎನ್ನುವುದು ಜನರಿಂದ ಜನರಿಗಾಗಿ ಎಂಬ ಆಧಾರ ತತ್ವವನ್ನೇ ಉಳಿಸಿಕೊಳ್ಳಬೇಕಾದ ಕ್ಷಣ ಇದು. ಇಲ್ಲದಿದ್ದರೆ, ನಮ್ಮ ನಂದಿನಿ, ಆವಿನ್, ಮಿಲ್ಮಾ ಮತ್ತು ಸಾವಿರಾರು ಪುಟ್ಟ ಸಹಕಾರಿ ಸಂಸ್ಥೆಗಳ ಭವಿಷ್ಯ ದೂರದ ದಿಲ್ಲಿಯಿಂದ ನಿರ್ಧರಿಸುವ ಯಂತ್ರದ ಕೀಲಿ ಮಾತ್ರ ಆಗಿಬಿಟ್ಟಂತಾಗುತ್ತದೆ.





