ಬಿಹಾರ ಚುನಾವಣೆ ಕೆಲವೇ ದಿನಗಳು ಬಾಕಿ ಇರುವಾಗ, ಬಿಹಾರದಲ್ಲಿ ಜೆಎಸ್‌ಪಿ ನಾಯಕ ದುಲಾರ್ ಚಂದ್ ಹತ್ಯೆಯಾಗಿದೆ. ಅವರ ಹತ್ಯೆ ಪ್ರಕರಣದಲ್ಲಿ ಎನ್‌ಡಿಎ ಅಭ್ಯರ್ಥಿ ಅನಂತ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ದುಲಾರ್ ಚಂದ್ ಯಾದವ್ ಅವರು ಗುರುವಾರ ಮೊಕಾಮಾದಲ್ಲಿ ತಮ್ಮ ಸೋದರಳಿಯ ಪ್ರಿಯದರ್ಶಿ ಪಿಯೂಷ್ ಪರ ಪ್ರಚಾರ ನಡೆಸುತ್ತಿದ್ದರು. ಆ ವೇಳೆ, ಎನ್‌ಡಿಎ ಅಭ್ಯರ್ಥಿ ಅನಂತ್ ಸಿಂಗ್ ಬೆಂಬಲಿಗರು ಯಾದವ್ ಮೇಲೆ ಗುಂಡು ಹಾರಿಸಿ, ಕಾರಿನಿಂದ ಗುದ್ದಿ ಹತ್ಯೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಎಫ್‌ಐಆರ್‌ಗಳನ್ನು ದಾಖಲಿಸಿದ್ದರು. ಮೃತನ ಮೊಮ್ಮಗ ಸಲ್ಲಿಸಿದ ದೂರಿನ ಆಧಾರದ ಮೇಲೆ ದಾಖಲಾಗಿರುವ ಎಫ್‌ಐಆರ್‌ಗಳ ಪೈಕಿ ಒಂದರಲ್ಲಿ ಅನಂತ್ ಸಿಂಗ್ ಸೇರಿದಂತೆ ಇತರ ನಾಲ್ವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅನಂತ್ ಸಿಂಗ್ ಅವರು ಆರ್‌ಜೆಡಿ ಅಭ್ಯರ್ಥಿಯಾಗಿ ಗೆದ್ದಿದ್ದರು. ಆದರೆ, ನಂತರ 2022 ರಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಶಿಕ್ಷೆಗೊಳಗಾದ ನಂತರ ಅನರ್ಹಗೊಳಿಸಲಾಯಿತು. ನಂತರ ಅವರ ಪತ್ನಿ ನೀಲಂ ದೇವಿ ಉಪಚುನಾವಣೆಯಲ್ಲಿ ಗೆದ್ದರು.




