2011-13ರ ನಡುವೆ ಯುಪಿಎ ಸರ್ಕಾರದ ವಿರುದ್ಧ ಆಂದೋಲನ ನಡೆಸಿ ಇಡೀ ದೇಶದ ಗಮನ ಸೆಳೆದಿದ್ದ ಅಣ್ಣಾ ಹಜಾರೆ, ಇದೀಗ ಮತ್ತೆ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಮಹಾರಾಷ್ಟ್ರ ಸರ್ಕಾರದ ‘ಲೋಕಪಾಲ್ ಕಾಯ್ದೆ’ಯ ಜಾರಿಯಲ್ಲಿನ ವಿಳಂಬದ ವಿರುದ್ಧ ಅಣ್ಣಾ ಹಜಾರೆ ಹೋರಾಟಕ್ಕೆ ಮುಂದಾಗಿದ್ದು, 2026ರ ಜನವರಿ 30ರಿಂದ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸಿದ್ದಾರೆ.
ಜನವರಿ 30 ಮಹಾತ್ಮ ಗಾಂಧಿ ಅವರ ಪುಣ್ಯತಿಥಿಯ ದಿನವಾಗಿದ್ದು, ಅಂದಿನಿಂದ ಮಹಾರಾಷ್ಟ್ರದಲ್ಲಿರುವ ತಮ್ಮ ಸ್ವಗ್ರಾಮ ರಾಲೇಗನ್ ಸಿದ್ದಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದಿರುವ ಹಜಾರೆ, “ಮಹಾರಾಷ್ಟ್ರದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಲೋಕಪಾಲ್ ಕಾಯ್ದೆಯನ್ನು ರೂಪಿಸಲಾಗಿದೆ. ಆದರೆ, ಸರ್ಕಾರ ಆ ಕಾಯ್ದೆಯ ಜಾರಿಯಲ್ಲಿ ವಿಳಂಬ ಮಾಡುತ್ತಿದೆ. ಕಾಯ್ದೆಯನ್ನು ಕೂಡಲೇ ಜಾರಿಗೆ ತರಬೇಕು” ಎಂದು ಒತ್ತಾಯಿಸಿದ್ದಾರೆ.
“ಮಹಾರಾಷ್ಟ್ರ ಸರ್ಕಾರವು 2022ರ ಡಿಸೆಂಬರ್ 28ರಂದು ವಿಧಾನಸಭೆ ಮತ್ತು 2023ರ ಡಿಸೆಂಬರ್ 15ರಂದು ವಿಧಾನ ಪರಿಷತ್ತಿನಲ್ಲಿ ಲೋಕಾಯುಕ್ತ ಮಸೂದೆಯನ್ನು ಅಂಗೀಕರಿಸಿವೆ. ರಾಜ್ಯಪಾಲರು ಮಸೂದೆಗೆ ಸಹಿ ಹಾಕಿದ್ದಾರೆ. ಆದರೂ, ಕಾಯ್ದೆಯನ್ನು ಈವರೆಗೆ ಜಾರಿಗೆ ತಂದಿಲ್ಲ” ಎಂದು ಹಜಾರೆ ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ವಂದೇ ಮಾತರಂ ಚರ್ಚೆ | ಬಿಜೆಪಿ, ಆರ್‌ಎಸ್‌ಎಸ್ “ದೇಶದ್ರೋಹ”ವನ್ನು ಇಂಚಿಂಚು ಬಿಚ್ಚಿಟ್ಟ ಸಂಜಯ್ ಸಿಂಗ್
“ನಮ್ಮ ದೇಶವು ಕಾನೂನಿನ ಮೇಲೆ ನಡೆಯುತ್ತಿದೆ. ಲೋಕಪಾಲ್ ಕಾನೂನು ಜಾರಿಯಲ್ಲಿನ ವಿಳಂಬ ಸರಿಯಲ್ಲ. ಕಾಯ್ದೆಯ ಜಾರಿಗಾಗಿ ಹಲವು ಸಭೆಗಳನ್ನು ನಡೆಸಿರುವ ಸರ್ಕಾರ, ಕಾನೂನು ಜಾರಿಯ ಕುರಿತು ಭರವಸೆಗಳನ್ನು ನೀಡಿದೆ. ಆದರೂ, ಕಾಯ್ದೆ ಜಾರಿಯಾಗಿಲ್ಲ. ಕಾಯ್ದೆ ಜಾರಿಗೆ ಬರದಿದ್ದರೆ ನಾನು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವ ತೀರ್ಮಾನಕ್ಕೆ ಬಂದಿದ್ದೇನೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
2011ರಲ್ಲಿ, ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಐತಿಹಾಸಿಕ ಆಂದೋಲನ ಪ್ರಾರಂಭಿಸಿದ್ದರು. ಜನಲೋಕಪಾಲ್ ಕಾಯ್ದೆಗಾಗಿನ ಅವರ ಹೋರಾಟವು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಸರ್ಕಾರ ಬದಲಾಗಲು ಅವರ ಹೋರಾಟವೂ ನೆರವಾಗಿತ್ತು ಎನ್ನಲಾಗಿದೆ.




