ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು, ತಮಗೆ ನೀಡಲಾಗಿದ್ದ ಆರು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಉಸ್ತುವಾರಿ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯು ರಾಜ್ಯ ಬಿಜೆಪಿ ಘಟಕದಲ್ಲಿನ ಆಂತರಿಕ ಅಸಮಾಧಾನವನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ.
ತಮ್ಮ ತಂದೆಯ ಆರೋಗ್ಯ ಹದಗೆಟ್ಟಿರುವ ಕಾರಣ, ಅವರನ್ನು ಆರೈಕೆ ಮಾಡಲು ತಾನು ಕೊಯಮತ್ತೂರಿನಲ್ಲಿಯೇ ಇರಬೇಕಾಗಿದೆ. ಹೀಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಲು ಅಥವಾ ಚುನಾವಣಾ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಅಣ್ಣಾಮಲೈ ಪಕ್ಷದ ಹೈಕಮಾಂಡ್‌ಗೆ ತಿಳಿಸಿದ್ದಾರೆ. “ತಂದೆಯ ಆರೋಗ್ಯವೇ ನನಗೆ ಮೊದಲ ಆದ್ಯತೆ,” ಎಂದು ಅವರು ತಿಳಿಸಿದ್ದಾರೆ.
ಬಹಿರಂಗವಾಗಿ ಕೌಟುಂಬಿಕ ಕಾರಣ ನೀಡಿದ್ದರೂ, ಅಣ್ಣಾಮಲೈ ಅವರ ಈ ನಿರ್ಧಾರದ ಹಿಂದೆ ತೀವ್ರ ಅಸಮಾಧಾನವಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಎಐಎಡಿಎಂಕೆ ಜೊತೆಗಿನ ಮೈತ್ರಿಗೆ ಅನುವು ಮಾಡಿಕೊಡುವ ಸಲುವಾಗಿ ಅವರು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಆದರೆ, ರಾಜ್ಯಾದ್ಯಂತ ಪ್ರಭಾವವಿರುವ ತಮ್ಮನ್ನು ಕೇವಲ ಆರು ಕ್ಷೇತ್ರಗಳಿಗೆ (ಕಾರೈಕುಡಿ, ಸಿಂಗಾನಲ್ಲೂರು, ಶ್ರೀವೈಕುಂಠಂ, ವಿರುಗಬಾಕ್ಕಂ, ಮದುರೈ ದಕ್ಷಿಣ ಮತ್ತು ಪದ್ಮನಾಭಪುರಂ) ಸೀಮಿತಗೊಳಿಸಿರುವುದಕ್ಕೆ ಅವರು ಬೇಸರಗೊಂಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಇದ್ರೆ ಎಲ್ಲವೂ ಸಾಧ್ಯ- ಇದು ಬಿಜೆಪಿ ಮಂತ್ರ!
ದ್ರಾವಿಡ ಪಕ್ಷಗಳ ವಿರುದ್ಧ ಸಮರ ಸಾರಿದ್ದ ಅಣ್ಣಾಮಲೈ ಅವರಿಗೆ, ಬಿಜೆಪಿ ನಾಯಕತ್ವವು ಎಐಎಡಿಎಂಕೆ ಬಗ್ಗೆ ತೋರುತ್ತಿರುವ ಮೃದು ಧೋರಣೆ ಮತ್ತು ಮೈತ್ರಿ ಕುರಿತ ನಿಲುವುಗಳು ರುಚಿಸುತ್ತಿಲ್ಲ ಎನ್ನಲಾಗಿದೆ.
ಪ್ರಸ್ತುತ ರಾಜ್ಯಾಧ್ಯಕ್ಷರಾಗಿರುವ ನೈನಾರ್ ನಾಗೇಂದ್ರನ್ ಅವರ ನಾಯಕತ್ವದಲ್ಲಿ ಅಣ್ಣಾಮಲೈ ಅವರನ್ನು ಈ ಸ್ಥಾನಕ್ಕೆ ನೇಮಿಸಲಾಗಿತ್ತು. ಜವಾಬ್ದಾರಿಯಿಂದ ಹಿಂದೆ ಸರಿದಿದ್ದರೂ, ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಸಿದ್ಧವಿರುವುದಾಗಿ ಅಣ್ಣಾಮಲೈ ತಿಳಿಸಿದ್ದಾರೆ. ಆದರೆ, ತಾವು ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.





