ದೇಶದ 10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಯನ್ನು ಭಾರತೀಯ ಚುನಾವಣಾ ಆಯೋಗ ಬುಧವಾರ ಘೋಷಿಸಿದೆ. ಮಾರ್ಚ್ 16ರಂದು ಮತದಾನ ನಡೆಯಲಿದ್ದು, ಅದೇ ದಿನ ಸಂಜೆ ಮತ ಎಣಿಕೆ ನಡೆಯಲಿದೆ.
ಮಹಾರಾಷ್ಟ್ರ–7, ತಮಿಳುನಾಡು–6, ಪಶ್ಚಿಮ ಬಂಗಾಳ–5, ಬಿಹಾರ–5, ಒಡಿಶಾ–4, ಅಸ್ಸಾಂ–3, ಛತ್ತೀಸ್ಗಢ–2, ಹರ್ಯಾಣ–2, ತೆಲಂಗಾಣ–2 ಹಾಗೂ ಹಿಮಾಚಲ ಪ್ರದೇಶ–1 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಸದಸ್ಯರ ಅವಧಿ ಏಪ್ರಿಲ್ 2026ರಲ್ಲಿ ಮುಕ್ತಾಯಗೊಳ್ಳಲಿದೆ.
ನಿವೃತ್ತಿಯಾಗಲಿರುವ ಪ್ರಮುಖ ಸದಸ್ಯರಲ್ಲಿ ಶರದ್ ಪವಾರ್, ಕೇಂದ್ರ ಸಚಿವ ರಾಮದಾಸ್ ಅಠವಳೆ, ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ, ತೃಣಮೂಲ ಕಾಂಗ್ರೆಸ್ ನ ಸಾಕೇತ್ ಗೋಖಲೆ ಮತ್ತು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಸೇರಿದ್ದಾರೆ.
ಚುನಾವಣಾ ಆಯೋಗ ಪ್ರಕಟಿಸಿದ ವೇಳಾಪಟ್ಟಿಯಂತೆ ಫೆಬ್ರವರಿ 26ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಮಾರ್ಚ್ 5 ಕೊನೆಯ ದಿನವಾಗಿದ್ದು, ಮಾರ್ಚ್ 6ರಂದು ಪರಿಶೀಲನೆ ನಡೆಯಲಿದೆ. ಮಾರ್ಚ್ 9ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಮಾರ್ಚ್ 16ರಂದು ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಸಂಜೆ 5 ರಿಂದ ಮತ ಎಣಿಕೆ ಆರಂಭವಾಗಲಿದೆ. ಮಾರ್ಚ್ 20ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಆಯೋಗ ತಿಳಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಭ್ರಷ್ಟಾಚಾರವೆಂಬ ಸ್ನಾನದ ಕೋಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಬೆತ್ತಲೆಯೇ…
ಮತಪತ್ರದಲ್ಲಿ ಆದ್ಯತೆ ಗುರುತಿಸಲು ಚುನಾವಣಾಧಿಕಾರಿ ಒದಗಿಸುವ ನೇರಳೆ ಬಣ್ಣದ ಸ್ಕೆಚ್ ಪೆನ್ನುಗಳನ್ನು ಮಾತ್ರ ಬಳಸಬೇಕು ಎಂದು ಆಯೋಗ ಸೂಚನೆ ನೀಡಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ವೀಕ್ಷಕರನ್ನು ನಿಯೋಜಿಸಲಾಗುವುದು ಎಂದೂ ಹೇಳಿದೆ.
ಈ ಚುನಾವಣೆಯ ಫಲಿತಾಂಶಗಳು ಸಂಬಂಧಿತ ರಾಜ್ಯ ವಿಧಾನಸಭೆಗಳಲ್ಲಿನ ಪಕ್ಷಗಳ ಸಂಖ್ಯಾಬಲದ ಮೇಲೆ ಅವಲಂಬಿತವಾಗಿದ್ದು, ರಾಜ್ಯಸಭೆಯ ಸಂಖ್ಯಾ ಬಲದಲ್ಲಿ ಅಲ್ಪ ಮಟ್ಟಿನ ಬದಲಾವಣೆಯಾಗುವ ಸಾಧ್ಯತೆ ಇದೆ.





