ಭಾರತೀಯ ಭೂಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ ಎಂ ನರವಣೆ ಅವರ ಬಹುನಿರೀಕ್ಷಿತ ಆತ್ಮಕಥೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ (Four Stars of Destiny) ಬಿಡುಗಡೆಯ ಕುರಿತು ಎದ್ದಿದ್ದ ಊಹಾಪೋಹಗಳಿಗೆ ಇದೀಗ ತೆರೆಬಿದ್ದಿದೆ. ಪುಸ್ತಕದ ಪ್ರಕಟಣೆಯನ್ನು ನಿಲ್ಲಿಸಲಾಗಿದೆ ಎಂಬ ವರದಿಗಳ ಬೆನ್ನಲ್ಲೇ, ಸ್ವತಃ ನರವಣೆ ಅವರು ಪ್ರಕಾಶಕರ ಹೇಳಿಕೆಯನ್ನು ಹಂಚಿಕೊಂಡು ಸ್ಪಷ್ಟನೆ ನೀಡಿದ್ದಾರೆ.
ಪುಸ್ತಕದಲ್ಲಿ ಅಗ್ನಿಪಥ್ ಯೋಜನೆ ಹಾಗೂ 2020ರ ಗಲ್ವಾನ್ ಸಂಘರ್ಷದ ಸಂದರ್ಭದ ಕೆಲವು ಸೂಕ್ಷ್ಮ ಸೇನಾ ವಿಚಾರಗಳನ್ನು ಉಲ್ಲೇಖಿಸಲಾಗಿದೆ ಎಂಬ ಕಾರಣಕ್ಕೆ ರಕ್ಷಣಾ ಸಚಿವಾಲಯವು ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿತ್ತು. ಈ ಕಾರಣದಿಂದಾಗಿ ಪುಸ್ತಕ ಬಿಡುಗಡೆಗೆ ತಡೆ ಬಿದ್ದಿದೆ ಎಂಬ ಸುದ್ದಿಗಳು ಹರಿದಾಡಿದ್ದವು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ನಕ್ಸಲ್ ನಿಗ್ರಹದ ನೆಪದಲ್ಲಿ ಪ್ರಕೃತಿ ಸಂಪತ್ತಿನ ಲೂಟಿಗಿಳಿಯಿತೇ ಸರ್ಕಾರ?
ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಪ್ರಕಾಶಕ ಸಂಸ್ಥೆ ‘ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ’, “ಪುಸ್ತಕದ ಪ್ರಕಟಣಾ ಪ್ರಕ್ರಿಯೆಯು ಇನ್ನೂ ಪ್ರಗತಿಯಲ್ಲಿದೆ” ಎಂದು ಅಧಿಕೃತ ಹೇಳಿಕೆ ನೀಡಿದೆ. ಜನರಲ್ ನರವಣೆ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಈ ಹೇಳಿಕೆಯನ್ನು ಹಂಚಿಕೊಳ್ಳುವ ಮೂಲಕ ಪುಸ್ತಕ ರದ್ದಾಗಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ.
ನಿಯಮಗಳ ಪ್ರಕಾರ, ನಿವೃತ್ತ ಸೇನಾ ಅಧಿಕಾರಿಗಳು ಸೇವಾವಧಿಯ ಸೂಕ್ಷ್ಮ ವಿಚಾರಗಳನ್ನು ಬರೆಯುವಾಗ ರಕ್ಷಣಾ ಇಲಾಖೆಯ ಪೂರ್ವಾನುಮತಿ (NOC) ಪಡೆಯುವುದು ಕಡ್ಡಾಯವಾಗಿದೆ. ಪ್ರಸ್ತುತ ಪುಸ್ತಕವು ಇಲಾಖೆಯ ಪರಿಶೀಲನಾ ಹಂತದಲ್ಲಿದ್ದು, ತಾಂತ್ರಿಕ ಪ್ರಕ್ರಿಯೆಗಳು ಮುಗಿದ ಬಳಿಕವಷ್ಟೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ವರದಿಗಳು ತಿಳಿಸಿವೆ.





