ಮಹಾರಾಷ್ಟ್ರದಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ ನಡೆದಿದ್ದು, ನಾಗ್ಪುರದಲ್ಲಿ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ 23 ವರ್ಷದ ಯುವಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ನಾಗ್ಪರದ ಕಟೋಲ್ ರಸ್ತೆ ಬೈಪಾಸ್‌ನಲ್ಲಿ ಭಾನುವಾರ ರಾತ್ರಿ 11.20ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಗಿತ್ತಿಖಾಡನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಭಾರಿ ತಿಳಿಸಿದ್ದಾರೆ. ಅಪಘಾತ ಸ್ಥಳದ ಬಳಿ ಯಾವುದೇ ಸಿಸಿಟಿವಿ ಕ್ಯಾಮೆರಾ ಇರಲಿಲ್ಲ. ಅಪಘಾತ ಎಸಗಿದವರು ಯಾರೆಂಬುದು ಇನ್ನೂ ಗೊತ್ತಾಗಿಲ್ಲ ಎಂದು ಅವರು ಹೇಳಿದ್ದಾರೆ.
ಮೃತರನ್ನು ಮಧ್ಯಪ್ರದೇಶ ಮೂಲದ ರಾಹುಲ್ ಖೈರ್ವಾರ್ ಎಂದು ಗುರುತಿಸಲಾಗಿದೆ. ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಎರಡು ದಿನಗಳ ಹಿಂದೆ (ಭಾನುವಾರ), ಮುಂಬೈನ ವರ್ಲಿ ಪ್ರದೇಶದಲ್ಲಿ ಮಹಿಳೆಯೊಬ್ಬರು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಿಎಂಡಬ್ಲ್ಯು ಕಾರೊಂದು ಢಿಕ್ಕಿ ಹೊಡೆದು ಮಹಿಳೆ ಸಾವನ್ನಪ್ಪಿದ್ದರು. ಢಿಕ್ಕಿ ಹೊಡೆದ ಕಾರು ಆಕೆಯನ್ನು 1 ಕಿ.ಮೀ ವರೆಗೆ ಎಳೆದೊಯ್ದಿತ್ತು. ಕಾರಿನಲ್ಲಿದ್ದವರು ಪರಾರಿಯಾಗುವ ಭರದಲ್ಲಿ ಆಕೆಯನ್ನು ಎಳೆದೊಯ್ದಿದ್ದರು ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.




