ಭಾರತದ ಬಾಹ್ಯಾಕಾಶ ಕ್ಷೇತ್ರ ಇನ್ನೊಂದು ಮೈಲಿಗಲ್ಲು ಸೃಷ್ಟಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಯು ಬಾಹುಬಲಿ ಎಂದು ಕರೆಯಲ್ಪಡುವ ತನ್ನ ಅತ್ಯಂತ ಶಕ್ತಿಶಾಲಿ ರಾಕೆಟ್ ಎಲ್‌ವಿಎಂ–3 (LVM3) ಮೂಲಕ ಇಲ್ಲಿವರೆಗೆ ಭಾರತ ಉಡಾವಣೆ ಮಾಡಿರುವ ಅತಿ ಭಾರವಾದ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಿನ್ನೆ (ಡಿ.24) ಬೆಳಗ್ಗೆ 8:55ಕ್ಕೆ ಈ ಭಾರೀ ರಾಕೆಟ್ ಗಗನಕ್ಕೆ ಹಾರಿದೆ. ಉಡಾವಣೆಯ ಕ್ಷಣದಿಂದಲೇ ವಿಜ್ಞಾನಿಗಳು, ಇಂಜಿನಿಯರ್‌ಗಳು ಮತ್ತು ದೇಶದಾದ್ಯಂತ ಲಕ್ಷಾಂತರ ಜನ ಕಾತರದಿಂದ ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ. ರಾಕೆಟ್ ನಿಖರವಾಗಿ ಕಾರ್ಯನಿರ್ವಹಿಸಿ, ಯಾವುದೇ ಅಡಚಣೆ ಇಲ್ಲದೆ ತನ್ನ ಗುರಿ ತಲುಪಿದೆ.
ಸುಮಾರು 43.5 ಮೀಟರ್ ಎತ್ತರ, 640 ಟನ್ ತೂಕ ಹೊಂದಿರುವ ಎಲ್‌ವಿಎಂ–3, ISRO ಗೆ ಈಗಾಗಲೇ ಚಂದ್ರಯಾನ–2, ಚಂದ್ರಯಾನ–3 ಮುಂತಾದ ಮಹತ್ವದ ಮಿಷನ್‌ಗಳಲ್ಲಿ ಯಶಸ್ಸು ತಂದಿದೆ. ಈ ಬಾರಿ ಹೊತ್ತೊಯ್ದಿದ್ದ ಉಪಗ್ರಹ 6,100 ಕಿಲೋ ಗ್ರಾಂ ತೂಕದ ‘ಬ್ಲೂಬರ್ಡ್ ಬ್ಲ್ಯಾಕ್–2’ (Blue Bird Block-2). ಇದು ಭಾರತೀಯ ರಾಕೆಟ್ ಮೂಲಕ ಕಕ್ಷೆಗೆ ಸೇರಿಸಿದ ಅತಿ ಭಾರವಾದ ಉಪಗ್ರಹ ಎಂಬ ದಾಖಲೆ ನಿರ್ಮಿಸಿದೆ.
ಈ ಉಪಗ್ರಹವನ್ನು ಅಮೆರಿಕದ AST Space Mobile ಕಂಪನಿ ಅಭಿವೃದ್ಧಿಪಡಿಸಿದ್ದು, ಇದು ಮುಂದಿನ ತಲೆಮಾರಿನ ಸೆಲ್ಯುಲರ್ ಬ್ರಾಡ್‌ಬ್ಯಾಂಡ್ ತಂತ್ರಜ್ಞಾನಕ್ಕೆ ಮೀಸಲಾಗಿರುವ ಉಪಗ್ರಹವಾಗಿದೆ. ಉಡಾವಣೆಯ ಸುಮಾರು 15 ನಿಮಿಷಗಳೊಳಗೆ, ಉಪಗ್ರಹವು ರಾಕೆಟ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟು, ಭೂಮಿಯ ಮೇಲ್ಮೈನಿಂದ ಸುಮಾರು 520 ಕಿಲೋಮೀಟರ್ ರ್ಎತ್ತರದ ಕಡಿಮೆ ಭೂಕಕ್ಷೆ(LEO) ಯಲ್ಲಿ ನೆಲೆಯಾಯಿತು. ಈ ಕ್ಷಣವನ್ನು ಇಸ್ರೋ ಅಪರೂಪದ ಆನ್‌ಬೋರ್ಡ್ ಕ್ಯಾಮೆರಾ ದೃಶ್ಯಗಳ ಮೂಲಕ ಹಂಚಿಕೊಂಡಿದೆ.
ಬ್ಲೂಬರ್ಡ್ ಬ್ಲ್ಯಾಕ್–2 ಉಪಗ್ರಹ ಹಲವು ವಿಶೇಷತೆಗಳಿಂದ ಕೂಡಿದೆ. ಇದು ಭವಿಷ್ಯದಲ್ಲಿ ಸಾಮಾನ್ಯ ಮೊಬೈಲ್ ಫೋನ್‌ಗಳಿಗೆ ನೇರವಾಗಿ 4G ಮತ್ತು5G ಸಿಗ್ನಲ್ ನೀಡುವ ಸಾಮರ್ಥ್ಯ ಹೊಂದಿದೆ. ಅಂದರೆ, ದೂರದ ಹಳ್ಳಿಗಳು, ಸಮುದ್ರದ ಮಧ್ಯಭಾಗ, ಪರ್ವತ ಪ್ರದೇಶಗಳಲ್ಲೂ ಯಾವುದೇ ವಿಶೇಷ ಉಪಕರಣಗಳಿಲ್ಲದೆ ಮೊಬೈಲ್ ಸಂಪರ್ಕ ಸಾಧ್ಯವಾಗಲಿದೆ. ಡಿಜಿಟಲ್ ವಿಭಜನೆ ಕಡಿಮೆ ಮಾಡುವ ದಿಕ್ಕಿನಲ್ಲಿ ಇದು ಕ್ರಾಂತಿಕಾರಿ ಹೆಜ್ಜೆಯಾಗಿದೆ.
ಈ ಮಿಷನ್‌ನ್ನು ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್(NSIL), ಇಸ್ರೋನ ವಾಣಿಜ್ಯ ಘಟಕದ ಮೂಲಕ ಕೈಗೊಳ್ಳಲಾಗಿದ್ದು, ಇದು ಭಾರತದ ವಾಣಿಜ್ಯ ಬಾಹ್ಯಾಕಾಶ ಮಾರುಕಟ್ಟೆಯಲ್ಲಿನ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಜಾಗತಿಕ ಮಟ್ಟದಲ್ಲಿ ಭಾರೀ ಉಪಗ್ರಹ ಉಡಾವಣೆ ಸೇವೆಗಳಲ್ಲಿ ಭಾರತ ಈಗ ನಿರ್ಣಾಯಕ ಪಾತ್ರ ವಹಿಸಬಲ್ಲದು ಎಂಬುದನ್ನು ಈ ಉಪಗ್ರಹ ಉಡಾವಣೆ ನಿಜವಾಗಿಸಿದೆ.
ಉಡಾವಣೆಗೆ ಕೆಲ ಕ್ಷಣಗಳ ಮುನ್ನ ಅಪಾಯ ತಪ್ಪಿಸಲು ಸುಮಾರು 90 ಸೆಕೆಂಡ್ ತಡವಾಗಿ ರಾಕೆಟ್ ಹಾರಿಸಲಾಗಿದೆ. ಇದು ಇಸ್ರೋನ ಶಿಸ್ತು, ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಮಾನದಂಡಗಳ ಗಂಭೀರತೆಯನ್ನು ತೋರಿಸುತ್ತದೆ. ಹೆಚ್ಚುತ್ತಿರುವ ಬಾಹ್ಯಾಕಾಶ ಸಂಚಾರದ ನಡುವೆ, ಇಂತಹ ಜಾಗರೂಕತೆ ಭವಿಷ್ಯದ ಮಿಷನ್‌ಗಳಿಗೆ ಅತ್ಯಂತ ಮಹತ್ವದ್ದಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಸಾಧನೆಗೆ ಅಭಿನಂದನೆ ಸಲ್ಲಿಸಿ, ʼಇದು ಭಾರತದ ಬಾಹ್ಯಾಕಾಶ ಕ್ಷೇತ್ರದ ಶಕ್ತಿಯನ್ನೂ, ಜಾಗತಿಕ ಮಟ್ಟದಲ್ಲಿ ನಮ್ಮ ಸಾಮರ್ಥ್ಯವನ್ನೂ ತೋರಿಸುವ ಮಹತ್ವದ ಹೆಜ್ಜೆʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: CPCB ವರದಿ | ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಯಲ್ಲಿ ಹಿಂದೆ ಬಿದ್ದ ಕರ್ನಾಟಕ
ಇಸ್ರೋ ಅಭಿವೃದ್ಧಿಪಡಿಸಿದ LVM3, ಮೂರು ಹಂತದ ಉಡಾವಣಾ ವಾಹನವಾಗಿದ್ದು, ಎರಡು ಘನ ಸ್ಟ್ರಾಪ್-ಆನ್ ಮೋಟಾರ್‌ಗಳು (S200), ಒಂದು ದ್ರವ ಕೋರ್ ಹಂತ (L110) ಮತ್ತು ಕ್ರಯೋಜೆನಿಕ್ ಮೇಲಿನ ಹಂತ (C25) ವನ್ನು ಒಳಗೊಂಡಿದೆ. ಇದು 640 ಟನ್‌ಗಳ ಲಿಫ್ಟ್-ಆಫ್ ದ್ರವ್ಯರಾಶಿ, 43.5 ಮೀ ಎತ್ತರ ಮತ್ತು ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್ (GTO) ಗೆ ಸುಮಾರು 4,200 ಕೆಜಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ.
ತನ್ನ ಹಿಂದಿನ ಕಾರ್ಯಾಚರಣೆಗಳಲ್ಲಿ, LVM3 ಚಂದ್ರಯಾನ-2, ಚಂದ್ರಯಾನ-3 ಮತ್ತು 72 ಉಪಗ್ರಹಗಳನ್ನು ಹೊತ್ತ ಎರಡು ಒನ್‌ವೆಬ್ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು. LVM3 ನ ಹಿಂದಿನ ಉಡಾವಣೆ LVM3-M5/CMS-03 ಮಿಷನ್ ಆಗಿದ್ದು, ಇದನ್ನು ನ. 2 ರಂದು ಯಶಸ್ವಿಯಾಗಿ ಉಡಾಯಿಸಲಾಗಿತ್ತು ಎಂದು ಇಸ್ರೋ ತಿಳಿಸಿದೆ.





