ಅರಾವಳಿ ಅರಣ್ಯ ಪ್ರದೇಶವನ್ನು ಮುಟ್ಟಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅರಾವಳಿ ಶ್ರೇಣಿಯ ಅರಣ್ಯದಲ್ಲಿ ಸಫಾರಿ ಯೋಜನೆ ರೂಪಿಸಲು ಅನುಮತಿ ಕೋರಿ ಹರಿಯಾಣ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಂಚೋಲಿ ಅವರ ಪೀಠವು ಅರಾವಳಿ ಶ್ರೇಣಿಯ ಸೂಕ್ಷ್ಮತೆಯನ್ನು ಪರಿಗಣಿಸಿದರೆ, ಅರಣ್ಯ ಸಫಾರಿಯು ಪ್ರಮುಖ ಸಮಸ್ಯೆಯಾಗಿದೆ ಎಂದು ಗಮನಿಸಿದೆ.
ಸರ್ಕಾರದ ಪರ ವಾದ ಮಂಡಿಸಿದ ವಕೀಲರು “ಸಫಾರಿ ಯೋಜನೆಯ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) 10,000 ಎಕರೆಗಳಿಂದ 3,300 ಎಕರೆಗಳಿಗೆ ಪರಿಷ್ಕರಿಸಲಾಗಿದೆ. ಯೋಜನೆಯ ಸಾಧಕ-ಬಾಧಕಗಳ ಪರಿಶೀಲನೆಗಾಗಿ ಡಿಪಿಆರ್‌ಅನ್ನು ಸಲ್ಲಿಸಲು ಕೇಂದ್ರ ಅಧಿಕಾರ ಸಮಿತಿಗೆ (ಸಿಇಸಿ) ಅವಕಾಶ ನೀಡಬೇಕೆಂಬುದನ್ನು ಮಾತ್ರವೇ ಸರ್ಕಾರವು ಬಯಸುತ್ತಿದೆ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಮೋದಿ-ಟ್ರಂಪ್ ವ್ಯಾಪಾರ ಒಪ್ಪಂದ: ರೈತರ ಬದುಕಿಗೆ ಕೊಡಲಿಯಾಗುವುದೇ?
ಅವರ ವಾದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಕಾಂತ್, “ನಾವು ತಜ್ಞರಲ್ಲ. ಅರಾವಳಿಯ ವ್ಯಾಖ್ಯಾನವನ್ನು ತಜ್ಞರು ನಿರ್ಧರಿಸುತ್ತಾರೆ. ಅರಾವಳಿ ಶ್ರೇಣಿಯ ವ್ಯಾಖ್ಯಾನವನ್ನು ಅಂತಿಮಗೊಳಿಸುವವರೆಗೆ, ನಾವು ಯಾರಿಗೂ ಅರಾವಳಿ ಪ್ರದೇಶವನ್ನು ಮುಟ್ಟಲು ಬಿಡುವುದಿಲ್ಲ. ಅರಾವಳಿ ಹರಿಯಾಣ ಅಥವಾ ರಾಜಸ್ಥಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಅನೇಕ ರಾಜ್ಯಗಳನ್ನು ಹಾದುಹೋಗುವ ಶ್ರೇಣಿಯಾಗಿದೆ” ಎಂದು ಹೇಳಿದ್ದಾರೆ.
ಹರಿಯಾಣ ಸರ್ಕಾರವು ವಿಶ್ವದ ಅತಿದೊಡ್ಡ ಸಫಾರಿ ಎಂದು ಹೇಳಲಾದ ಪ್ರಸ್ತಾವಿತ ಮೆಗಾ ‘ಅರಾವಳಿ ಮೃಗಾಲಯ ಸಫಾರಿ ಯೋಜನೆ’ಯನ್ನು ಸಿದ್ದಪಡಿಸಿತ್ತು. ಈ ಯೋಜನೆಯು ಗುರ್ಗಾಂವ್ ಮತ್ತು ನುಹ್ ಜಿಲ್ಲೆಗಳ ಪರಿಸರ-ದುರ್ಬಲ ಅರಾವಳಿ ಶ್ರೇಣಿಯ 10,000 ಎಕರೆ ಪ್ರದೇಶದಲ್ಲಿ ಸಫಾರಿ ನಡೆಸಲು ಉದ್ದೇಶಿಸಿತ್ತು. ಆದರೆ, ಈ ಯೋಜನೆಯನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.





