ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಸೋಮವಾರ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಿಇಸಿ ಒಬ್ಬ “ಅಹಂಕಾರಿ” ಮತ್ತು “ಮಹಾ ಸುಳ್ಳುಗಾರ” ಎಂದು ಜರಿದ ಮಮತಾ, ಆಯೋಗವು ಪಶ್ಚಿಮ ಬಂಗಾಳವನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರು.
ಆಯೋಗದ ಕಚೇರಿಯಿಂದ ಹೊರಬಂದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನನ್ನ ದಶಕಗಳ ರಾಜಕೀಯ ಜೀವನದಲ್ಲಿ ಇಂತಹ ಅಹಂಕಾರಿ ಆಯುಕ್ತರನ್ನು ಕಂಡಿಲ್ಲ. ಸಭೆಯಲ್ಲಿ ನಮಗೆ ಅವಮಾನ ಮಾಡಲಾಯಿತು, ನಮ್ಮ ಪ್ರಶ್ನೆಗಳಿಗೆ ಸುಳ್ಳು ಉತ್ತರಗಳನ್ನು ನೀಡಲಾಯಿತು. ಹೀಗಾಗಿ ನಾವು ಸಭೆಯನ್ನು ಬಹಿಷ್ಕರಿಸಿದೆವು,” ಎಂದು ತಿಳಿಸಿದರು.
ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿ ಎಸ್‌ಐಆರ್ ನಡೆಸದ ಆಯೋಗ, ಕೇವಲ ಬಂಗಾಳ ಮತ್ತು ತಮಿಳುನಾಡಿನಲ್ಲಿ ಈ ಪ್ರಕ್ರಿಯೆ ನಡೆಸುತ್ತಿರುವುದೇಕೆ ಎಂದು ಅವರು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ |ಮುಂಬಯಿ TISS ವಿದ್ಯಾರ್ಥಿಗಳ ‘ಕ್ಯಾಂಪಸ್ ರಾಜಕೀಯ’ ದಮನ ಸಲ್ಲದು!
ಪೋಷಕರ ಜನನ ದಾಖಲೆಗಳನ್ನು ಕೇಳುವ ಕ್ರಮವನ್ನು ‘ಅವಾಸ್ತವಿಕ’ ಮತ್ತು ‘ತಾರತಮ್ಯದ ನಡೆ’ ಎಂದು ಟೀಕಿಸಿದ ಅವರು, “ಅದಾನಿ ಜೀ ಅಥವಾ ಸ್ವತಃ ಪ್ರಧಾನಿಯವರೂ ತಮ್ಮ ಪೋಷಕರ ಜನನ ಪ್ರಮಾಣಪತ್ರ ನೀಡಲು ಸಾಧ್ಯವೇ? ಹಳೆಯ ಕಾಲದಲ್ಲಿ ಆಸ್ಪತ್ರೆಗಳಲ್ಲಿ ಹೆರಿಗೆಗಳಾಗುತ್ತಿರಲಿಲ್ಲ,” ಎಂದು ತೀಕ್ಷ್ಣವಾಗಿ ನುಡಿದರು.
ಎಸ್‌ಐಆರ್ ನೆಪದಲ್ಲಿ ಅಲ್ಪಸಂಖ್ಯಾತರು, ಬುಡಕಟ್ಟು ಜನಾಂಗ ಮತ್ತು ದಲಿತರನ್ನು ಗುರಿಯಾಗಿಸಲಾಗುತ್ತಿದೆ. ಯಾವುದೇ ಮುನ್ಸೂಚನೆ ಅಥವಾ ವಿಚಾರಣೆಯಿಲ್ಲದೆ ಸುಮಾರು 58 ಲಕ್ಷ ಜನರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಪ್ರಕ್ರಿಯೆಯ ಗೊಂದಲ ಮತ್ತು ಒತ್ತಡದಿಂದಾಗಿ ಬಿಎಲ್‌ಒಗಳು ಸೇರಿದಂತೆ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಮಮತಾ ಗಂಭೀರ ಆರೋಪ ಮಾಡಿದರು.
”ನಾವು ನ್ಯಾಯ ಕೇಳಲು ಬಂದಿದ್ದೆವು, ಆದರೆ ಆಯೋಗವು ಬಿಜೆಪಿ ನಿರ್ದೇಶನದಂತೆ ವರ್ತಿಸುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮತದಾರರ ಪಟ್ಟಿಯಿಂದ ಅನ್ಯಾಯವಾಗಿ ಹೆಸರು ಕಳೆದುಕೊಂಡ ಲಕ್ಷಾಂತರ ಜನರನ್ನು ಕರೆತಂದು, ಯಾರ ಮುಂದೆಯಾದರೂ ಅವರನ್ನು ನಾನು ಮೆರವಣಿಗೆ ಮಾಡಿಸಬಲ್ಲೆ” ಎಂದು ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದರು.





