ಬೂಕರ್ ಪ್ರಶಸ್ತಿ ವಿಜೇತೆ ಹಾಗೂ ಬರಹಗಾರ್ತಿ ಅರುಂಧತಿ ರಾಯ್ ಅವರು 2024ನೇ ಸಾಲಿನ “ದೃಢ ಹಾಗೂ ಅಚಲ ಬರಹಗಳಿಗೆ” ನೀಡಲಾಗುವ ಪೆನ್ ಪಿಂಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಕಾಶ್ಮೀರದಲ್ಲಿ 2010ರಲ್ಲಿ ಮಾಡಿದ್ದ ಯುಎಪಿಎ ಭಾಷಣಕ್ಕೆ ಸಂಬಂಧಿಸಿದಂತೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅರುಂಧತಿ ರಾಯ್ ವಿರುದ್ಧ ವಾರಂಟ್ ಹೊರಡಿಸಿದ್ದರು.
ಪ್ರಶಸ್ತಿ ಬಗ್ಗೆ ಮಾತನಾಡಿರುವ 62 ವರ್ಷದ ಅರುಂಧತಿ ರಾಯ್ “ನಾನು ಪ್ರಶಸ್ತಿಯನ್ನು ಸ್ವೀಕರಿಸಲು ಸಂತೋಷಪಡುತ್ತೇನೆ. ಜಗತ್ತು ಪಡೆದುಕೊಳ್ಳುತ್ತಿರುವ ಅತ್ಯಂತ ಗ್ರಹಿಸಲಾಗದ ತಿರುವಿನ ಬಗ್ಗೆ ಬರೆಯಲು ಹರೋಲ್ಡ್ ಪಿಂಟರ್ ಅವರು ನಮ್ಮೊಂದಿಗಿದ್ದರೆಂದು ನಾನು ಬಯಸುತ್ತೇನೆ. ಇಂದು ಅವರು ನಮ್ಮೊಂದಿಗಿಲ್ಲದಿದ್ದರೂ ಅವರ ನಾಟಕಗಳನ್ನು ನಮ್ಮಂತಹ ಕೆಲವರು ಪರಿಪೂರ್ಣಗೊಳಿಸಲು ಪ್ರಯತ್ನಿಸಬೇಕು” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಮುದಾಯವಾರು ಡಿಸಿಎಂ ಬೇಡಿಕೆಯೂ, ಮುಖ್ಯಮಂತ್ರಿಗಳ ಮೌನವೂ
ಇಂಗ್ಲೆಂಡ್‌ನ ನಾಟಕಕಾರ ಹಾಗೂ ನೊಬೆಲ್ ಪ್ರಶಸ್ತಿ ವಿಜೇತರಾದ ಹೆರೋಲ್ಡ್ ಪಿಂಟರ್ ಅವರು ನಿಧನರಾದ ನಂತರ 2009ರಲ್ಲಿ ಅವರ ಸ್ಮರಣಾರ್ಥವಾಗಿ ‘ಅಭಿವ್ಯಕ್ತಿ ಸ್ವಾತಂತ್ರದ ಸಮರ್ಥನೆ ಹಾಗೂ ದೃಢ ಹಾಗೂ ಅಚಲ ಬರಹಗಳಿಗೆ” ಪ್ರತಿ ವರ್ಷ ವಿಶ್ವದ ಅತ್ಯುತ್ತಮ ಲೇಖಕರಿಗೆ ಪ್ರಶಸ್ತಿ ನೀಡಲಾಗುತ್ತದೆ.
ಅಕ್ಟೋಬರ್ 10ರಂದು ಬ್ರಿಟೀಷ್ ಲೈಬ್ರರಿಯಲ್ಲಿ ನಡೆಯುವ ಸಮಾರಂಭದಲ್ಲಿ ಅರುಂಧತಿ ರಾಯ್ ಪ್ರಶಸ್ತಿ ಸ್ವೀಕರಿಸಲಿದ್ದು, ಅಂದು ಭಾಷಣ ಕೂಡ ಮಾಡಲಿದ್ದಾರೆ.
ಇದಕ್ಕೂ ಮೊದಲು ಪೆನ್ ಪಿಂಟರ್ ಪ್ರಶಸ್ತಿಯನ್ನು ಸಲ್ಮಾನ್ ರಷ್ದಿ, ಮಾರ್ಗರೇಟ್ ಅಟ್‌ವುಡ್, ಟಾಮ್ ಸ್ಟೋಪಾರ್ಡ್ ಹಾಗೂ ಕರೋಲ್ ಅನ್ ಡುಫೆ ಸ್ವೀಕರಿಸಿದ್ದಾರೆ.





