ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿಯ ರೋಸ್ ಅವಿನ್ಯೂ ಕೋರ್ಟ್ 15 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ. ಇ.ಡಿ ಕಸ್ಟಡಿ ಅವಧಿ ಇಂದು ಅಂತ್ಯವಾದ ಕಾರಣ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೋರ್ಟ್‌ಗೆ ಹಾಜರುಪಡಿಸುದಕ್ಕೂ ಮುನ್ನ ಮಾತನಾಡಿದ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ಮಾಡುತ್ತಿರುವುದು ದೇಶಕ್ಕೆ ಒಳ್ಳೆಯದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೇಜ್ರಿವಾಲ್ ಅವರನ್ನು ವಿಚಾರಣೆ ಪ್ರಯುಕ್ತ ಹೆಚ್ಚುವರಿ 7 ದಿನ ಕೋರಿತ್ತು.
ಆದರೆ ಮ್ಯಾಜಿಸ್ಟ್ರೇಟಲ್ ಕೋರ್ಟ್ ಕೇಜ್ರಿವಾಲ್ ಅವರ ಇ.ಡಿ ಕಸ್ಟಡಿ ಅವಧಿಯನ್ನು ಏಪ್ರಿಲ್ 1ರವರೆಗೆ ಕೇವಲ 4 ದಿನ ಮಾತ್ರ ಅನುಮತಿ ನೀಡಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣಾ ಕಾಲದಲ್ಲಿ ಮೋದಿಯ ಬಾಂಡ್ ಭಯೋತ್ಪಾದನೆ
ಎಎಪಿಯನ್ನು ಹತ್ತಿಕ್ಕುವುದು ಇ.ಡಿಯ ಪ್ರಮುಖ ಉದ್ದೇಶವಾಗಿದ್ದು ಈ ಕಾರಣದಿಂದಲೇ ಅಬಕಾರಿ ನೀತಿ ಹಗರಣದಲ್ಲಿ ತಮ್ಮನ್ನು ಸಿಲುಕಿಸಲಾಗಿದೆ ಎಂದು ಮ್ಯಾಜಿಸ್ಟ್ರೇಟಲ್ ಕೋರ್ಟ್‌ನಲ್ಲಿ ದೆಹಲಿ ಮುಖ್ಯಮಂತ್ರಿ ಹೇಳಿದ್ದರು.
“ನಾನು ಇ.ಡಿಯ ರಿಮ್ಯಾಂಡ್ ಅರ್ಜಿಯನ್ನು ವಿರೋಧಿಸುತ್ತಿಲ್ಲ. ಜಾರಿ ನಿರ್ದೇಶನಾಲಯ ತನ್ನನ್ನು ಎಷ್ಟು ದಿನ ಬೇಕೋ ಅಷ್ಟು ದಿನ ತನ್ ಕಸ್ಟಡಿಯಲ್ಲಿ ಇಟ್ಟುಕೊಳ್ಳಲಿ. ಆದರೆ ಇದು ಒಂದು ಹಗರಣವಾಗಿದೆ. ಇ.ಡಿಗೆ ಎರಡು ಉದ್ದೇಶಗಳಿವೆ. ಒಂದು ಎಎಪಿಯನ್ನು ಹತ್ತಿಕ್ಕುವುದು. ಮತ್ತೊಂದು ಅಕ್ರಮ ಹಣ ವರ್ಗಾವಣೆಯಲ್ಲಿ ಹಣ ತೆಗೆದುಕೊಂಡಿದ್ದೇನೆಂದು ಅಪರಾಧಿಯನ್ನಾಗಿ ಬಿಂಬಿಸುವುದು” ಎಂದು ಕೇಜ್ರಿವಾಲ್ ತಿಳಿಸಿದ್ದರು.
ಇದೇ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ದೆಹಲಿ ಮುಖ್ಯಮಂತ್ರಿಗಳು ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ಆರೋಪಿಸಿದೆ.
ಕೇಜ್ರಿವಾಲ್ ಕೂಡ ತಮ್ಮನ್ನು ಬಂಧಿಸಿರುವುದರ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಆದರೆ ಮಧ್ಯಂತರ ರಕ್ಷಣೆ ನೀಡಲು ಕೋರ್ಟ್ ನಿರಾಕರಿಸಿದ್ದು, ವಿಚಾರಣೆಯಲ್ಲಿ ಇ.ಡಿ ವಾದ ಮುಗಿಯದೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿತ್ತು.
ತನಿಖಾ ಸಂಸ್ಥೆಯು ಏ.2ರೊಳಗೆ ಪ್ರತಿಕ್ರಿಯೆ ನೀಡಿ ವಿಚಾರಣೆ ದಿನಾಂಕವನ್ನು ಏ.3ಕ್ಕೆ ಕೋರ್ಟ್ ನಿಗದಿಪಡಿಸಿತ್ತು.
ಅರವಿಂದ್ ಕೇಜ್ರಿವಾಲ್ ಬಂಧನ ವಿರೋಧಿಸಿ ನಿನ್ನೆ(ಮಾ.31) ಇಂಡಿಯಾ ಒಕ್ಕೂಟ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಂಡಿತ್ತು. ಕಾಂಗ್ರೆಸ್ ಒಳಗೊಂಡು ದೇಶದ ವಿವಿಧ ಭಾಗದ ವಿರೋಧ ಪಕ್ಷದ ನಾಯಕರು ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.





