ದನ ಕಳ್ಳತನದ ಆರೋಪದ ಮೇಲೆ ಯುವಕನನ್ನು ಗುಂಪೊಂದು ಭೀಕರವಾಗಿ ಥಳಿಸಿ ಕೊಂದಿರುವ ಘಟನೆ ಅಸ್ಸಾಂನ ಕೊಕ್ರಜಾರ್‌ನಲ್ಲಿ ನಡೆದಿದೆ. ಘಟನೆಯಲ್ಲಿ ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹತ್ಯೆ ಬಳಿಕ, ಕೊಕ್ರಜಾರ್ ಪ್ರದೇಶದಲ್ಲಿ ಉದ್ವಗ್ನತೆ ಭುಗಿಲೆದ್ದಿದೆ.
ಮೃತನನ್ನು ಸಿಖ್ನಾ ಜ್ವಾಹ್ಲವ್ ಎಂದು ಗುರುತಿಸಲಾಗಿದೆ. ಸಿಖ್ನಾ ಮತ್ತು ಆತನ ನಾಲ್ವರು ಸಹಚರರು ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಕೆಲಸ ಮುಗಿಸಿ ತಮ್ಮೂರಿಗೆ ವಾಹನದಲ್ಲಿ ಹಿಂದಿರುಗುತ್ತಿದ್ದಾಗ, ಅವರನ್ನು ದನ ಕಳವು ಮಾಡುವವರೆಂದು ಶಂಕಿಸಿದ ಸ್ಥಳೀಯ ಗ್ರಾಮಸ್ಥರ ಗುಂಪೊಂದು ಅವರನ್ನು ಬೆನ್ನಟ್ಟಿದೆ ಎಂದು ವರದಿಯಾಗಿದೆ.
ಈ ವೇಳೆ, ಸಂತ್ರಸ್ತರಿದ್ದ ವಾಹನವು ಅಪಘಾತಕ್ಕೀಡಾಗಿದೆ. ಹಿಂದಿನಿಂದಲೇ ಬಂದ ಗುಂಪು ವಾಹನದಲ್ಲಿದ್ದವರ ಮೇಲೆ ಏಕಾಏಕಿ ದಾಳಿ ಮಾಡಿದೆ. ವಾಹನಕ್ಕೂ ಬೆಂಕಿ ಹಚ್ಚಿದೆ ಎಂದು ಹೇಳಲಾಗಿದೆ.
ಸ್ಥಳದಲ್ಲಿದ್ದ ಕೆಲವು ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು, ಅಗ್ನಿಶಾಮಕ ಹಾಗೂ ತುರ್ತು ಸೇವಾ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಸಂತ್ರಸ್ತರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆದಾಗ್ಯೂ, ಭೀಕರ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸಿಖ್ನಾ ಅವರು ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.
ಇತರ ನಾಲ್ವರು ಸಂತ್ರಸ್ತರಾದ ಪ್ರಭಾತ್ ಬ್ರಹ್ಮ, ಜುಬಿರಾಜ್ ಬ್ರಹ್ಮ, ಸುನಿಲ್ ಮುರ್ಮು ಹಾಗೂ ಮಹೇಶ್ ಮುರ್ಮು ಅವರ ಪರಿಸ್ಥಿತಿ ಗಂಭೀರವಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಿಂದಾಗಿ ಕೊಕ್ರಜಾರ್ ಮತ್ತು ಸಂತ್ರಸ್ತರ ಊರುಗಳಲ್ಲಿ ಉದ್ವಿಗ್ನತೆ ಉಂಟಾಗಿದೆ. ಹಲವು ಭಾಗಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯಂತೆ ಎಚ್ಚರವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದಾಳಿ ನಡೆಸಿದ ಗುಂಪಿಗಾಗಿ ಶೋಧ ನಡೆಸುತ್ತಿದ್ದಾರೆ.




