ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳು ಉಳಿದಿವೆ. ಚುನಾವಣಾ ಹೊಸ್ತಿಲಿನಲ್ಲಿ ಅಲ್ಲಿನ ಬಿಜೆಪಿ ಸರ್ಕಾರವು ‘ಅರುಣೋದಯ ಯೋಜನೆ’ಯನ್ನು ಮರುಜಾರಿಗೊಳಿಸಿದೆ. 40 ಲಕ್ಷ ಮಹಿಳೆಯರ ಖಾತೆಗಳಿಗೆ ತಲಾ 9,000 ರೂ.ಗಳನ್ನು ವರ್ಗಾಯಿಸಿದೆ. ಈ ಪ್ರಕ್ರಿಯೆಯಲ್ಲಿ ಸುಮಾರು 3,600 ಕೋಟಿ ರೂ.ಗಳನ್ನು ಒಂದೇ ದಿನ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಮೊತ್ತವು ನಾಲ್ಕು ತಿಂಗಳ ಆರ್ಥಿಕ ನೆರವು ಮತ್ತು ವಿಶೇಷ ‘ಬಿಹು’ ಬೋನಸ್ ಅನ್ನು ಒಳಗೊಂಡಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, “ಈ ಯೋಜನೆಯು ಕಳೆದ ಹಲವಾರು ವರ್ಷಗಳಿಂದ ಚಾಲನೆಯಲ್ಲಿದೆ. ಇದಕ್ಕೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ವಿಧವೆಯರು, ವಿಚ್ಛೇದಿತ ಮಹಿಳೆಯರು, ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿರುವ ಕುಟುಂಬಗಳು ಹಾಗೂ ಇತರ ನಿರ್ಗತಿಕ ಕುಟುಂಬಗಳ ಮಹಿಳೆಯರಿಗೆ ನೆರವು ನೀಡುವುದು ಯೋಜನೆ ಉದ್ದೇಶವಾಗಿದೆ” ಎಂದು ಹೇಳಿದ್ದಾರೆ.
“ಮಹಿಳಾ ಫಲಾನುಭವಿಗಳಿಗೆ ವ್ಯವಸ್ಥಿತ ಮತ್ತು ನಿಯಂತ್ರಿತ ರೀತಿಯಲ್ಲಿ ನೇರವಾಗಿ ಆರ್ಥಿಕ ನೆರವು ವರ್ಗಾಯಿಸಿದ ಮೊದಲ ರಾಜ್ಯಗಳಲ್ಲಿ ಅಸ್ಸಾಂ ಕೂಡ ಒಂದು” ಎಂದು ಅವರು ಹೇಳಿಕೊಂಡಿದ್ದಾರೆ.
ಈ ಲೇಖನ ಓದಿದ್ದೀರಾ?: ಇರಾನ್ ಯುದ್ಧ | ಭಾರತದ ಕೃಷಿ ಉತ್ಪನ್ನ ವ್ಯಾಪಾರಕ್ಕೆ ಸವಾಲು; ದೇಶೀಯ ರೈತರಿಗೆ ಮತ್ತಷ್ಟು ಸಂಕಷ್ಟ
ಅಸ್ಸಾಂ ಹಣಕಾಸು ಸಚಿವೆ ಅಜಂತಾ ನಿಯೋಗ್, “ಸುಮಾರು 40 ಲಕ್ಷ ಕುಟುಂಬಗಳನ್ನು, ಮುಖ್ಯವಾಗಿ ಮಹಿಳೆಯರನ್ನು ಈ ಯೋಜನೆಯಡಿ ಒಳಗೊಳ್ಳಲಾಗಿದೆ. ಕಳೆದ ಐದು ವರ್ಷಗಳಲ್ಲಿ ಬಡ ಕುಟುಂಬಗಳ ಮತ್ತು ಮಹಿಳೆಯರ ಏಳಿಗೆಗಾಗಿ ಬಾಲ್ಯದಿಂದ ವೃದ್ಧಾಪ್ಯದವರೆಗೆ ಅನೇಕ ಪ್ರಮುಖ ಕಲ್ಯಾಣ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ. ಅರುಣೋದಯದಂತಹ ಯೋಜನೆಗಳು ಮಹಿಳೆಯರಿಗೆ ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯ ಮತ್ತು ಸಮಾಜದಲ್ಲಿ ಗೌರವವನ್ನು ತಂದುಕೊಡಲು ಸಹಾಯ ಮಾಡಿವೆ” ಎಂದು ಹೇಳಿದ್ದಾರೆ.




