ಅಸ್ಸಾಂನ ಗೋಲ್ಪಾರಾ ಜಿಲ್ಲೆಯಲ್ಲಿ ಬೃಹತ್ ಪ್ರಮಾಣದಲ್ಲಿ ಅರಣ್ಯ ಭೂಮಿಯ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಪೈಕಾನ್ ಮೀಸಲು ಅರಣ್ಯದಲ್ಲಿ 140 ಹೆಕ್ಟೇರ್‌ಗಳಿಗೂ ಹೆಚ್ಚು ಒತ್ತುವರಿಯಾದ ಅರಣ್ಯ ಭೂಮಿಯನ್ನು ಸರ್ಕಾರ ಮರಳಿ ಪಡೆಯಲು ಕಾರ್ಯಾಚರಣೆ ಆರಂಭಿಸಿದೆ. ಮುಖ್ಯವಾಗಿ, ಮಾನವ-ಆನೆ ಸಂಘರ್ಷವನ್ನು ತಡೆಗಟ್ಟಲು ಮತ್ತು ಪರಿಸರ ಸಮತೋಲನವನ್ನು ಪುನಃಸ್ಥಾಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಜುಲೈ 10ರೊಳಗೆ ಒತ್ತುವರಿದಾರರು ಸ್ವಯಂಪ್ರೇರಿತವಾಗಿ ಅರಣ್ಯ ಭೂಮಿಯನ್ನು ಖಾಲಿ ಮಾಡಲು ಗಡುವು ನೀಡಲಾಗಿತ್ತು. ಗಡುವು ಮುಗಿದ ಬೆನ್ನಲ್ಲೇ, ಹೈಕೋರ್ಟ್ ಆದೇಶಕ್ಕೆ ಅನುಗುಣವಾಗಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಕೃಷ್ಣೈ ವ್ಯಾಪ್ತಿಯ ಎರಡು ಪ್ರಮುಖ ವಲಯಗಳಾದ ಬಿದ್ಯಾಪಾರಾ ಮತ್ತು ಬೆಟ್ಬರಿಯಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಅಲ್ಲಿ ಹಲವಾರು ಕುಟುಂಬಗಳು ವರ್ಷಗಳಿಂದ ಕಾನೂನುಬಾಹಿರವಾಗಿ ವಾಸಿಸುತ್ತಿದ್ದಾರೆ ಎಂದು ಸರ್ಕಾರ ಆರೋಪಿಸಿದೆ.
“ನಾವು 149 ಹೆಕ್ಟೇರ್ ಪ್ರದೇಶವನ್ನು ತೆರವುಗೊಳಿಸುತ್ತಿದ್ದೇವೆ. ಕಾರ್ಯಾಚರಣೆಗಾಗಿ ಹಲವಾರು ಜೆಸಿಬಿಗಳನ್ನು ಬಳಸುತ್ತಿದ್ದು, ಭಾನುವಾರ ಕಾರ್ಯಾಚರಣೆಯನ್ನು ಪೂರ್ಣಗೊಳಿಸುವ ಗುರಿ ಇದೆ. ತೆರವು ಪ್ರಕ್ರಿಯೆಯಲ್ಲಿ ಸುಮಾರು 2,070 ಕಾಂಕ್ರೀಟ್ ರಚನೆಗಳನ್ನು ಕಿತ್ತುಹಾಕಬೇಕಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ | ಸುಪ್ರೀಂ ಆದೇಶ: ಪರ-ವಿರೋಧಗಳ ವಾಗ್ವಾದ
“ದೇಶಾದ್ಯಂತ ನಡೆದ ಮಾನವ-ಆನೆ ಸಂಘರ್ಷ ಪ್ರಕರಣಗಳಿಗೆ ಹೋಲಿಸಿದರೆ, ಗೋಲ್ಪಾರಾ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅರಣ್ಯ ಭೂಮಿಯ ಮೇಲಿನ ಎಲ್ಲ ಅತಿಕ್ರಮಣಗಳನ್ನು ತೆಗೆದುಹಾಕುವಂತೆ ಹೈಕೋರ್ಟ್ ನಮಗೆ ನಿರ್ದೇಶನ ನೀಡಿದೆ” ಎಂದು ಗೋಲ್‌ಪಾರದ ಜಿಲ್ಲಾ ಅರಣ್ಯ ಅಧಿಕಾರಿ (ಡಿಎಫ್‌ಒ) ತೇಜಶ್ ಮರಿಸ್ವಾಮಿ ಹೇಳಿದ್ದಾರೆ.
ತೆರವು ಕಾರ್ಯಾಚರಣೆಗೆ ಮುಂಚಿತವಾಗಿ, ಅರಣ್ಯ ಇಲಾಖೆ ಮತ್ತು ಅಸ್ಸಾಂ ಪೊಲೀಸರ ಜಂಟಿ ತಂಡಗಳು ತೀವ್ರ ಗಸ್ತು ತಿರುಗುತ್ತಿವೆ. ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಭೂಮಿಯನ್ನು ತೊರೆಯುವಂತೆ ಸೂಚಿಲಾಗುತ್ತಿದೆ. ಅಲ್ಲಿನ ನಿವಾಸಿಗಳಿಗೆ ಶಾಂತಿಯುತವಾಗಿ ಹೊರಹೋಗುವಂತೆ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ.
ತೆರವು ಕಾರ್ಯಾಚರಣೆಯು ಅರಣ್ಯದ ಪರಿಸರ ಸಮಗ್ರತೆ ಮತ್ತು ವನ್ಯಜೀವಿ ಕಾರಿಡಾರ್‌ಗಳನ್ನು ರಕ್ಷಿಸುವ ಸಂರಕ್ಷಣಾ ಪ್ರಯತ್ನದ ಭಾಗವಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.




