ಕೇರಳದಲ್ಲಿ ಕ್ರಿಸ್‍ಮಸ್ ಕರೋಲ್ ಹಾಡುತ್ತಿದ್ದ ಮಕ್ಕಳ ಗುಂಪಿನ ಮೇಲೆ ದಾಳಿ ನಡೆದಿದೆ. ದಾಳಿಯನ್ನು ಬಿಜೆಪಿ ಮುಖಂಡ ಸಿ.ಕೃಷ್ಣಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಅತನ ವಿರುದ್ಧ ಸಂತ್ರಸ್ತ ಮಕ್ಕಳ ಪೋಷಕರು ಪ್ರತಿಭಟನೆ ನಡಸಿದ್ದಾರೆ. ಬಿಜೆಪಿ ಮುಖಂಡನ ಧೋರಣೆಯನ್ನು ಸಾರ್ವಜನಿಕರೂ ಖಂಡಿಸಿದ್ದಾರೆ.
ಪಾಲಕ್ಕಾಡ್‌ನಲ್ಲಿ ಸಿಪಿಎಂ ಕ್ಷೇತ್ರ ಸಮಿತಿ ಕಚೇರಿಯಿಂದ ಕರೋಲ್ ಆರಂಭಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಲಾಗುತ್ತಿತ್ತು. ಈ ವೇಳೆ, ಗುಂಪೊಂದು ಅವರ ಮೇಲೆ ದಾಳಿ ಮಾಡಿದೆ. ಆ ದಾಳಿಯನ್ನು ಸಮರ್ಥಿಸಿಕೊಂಡಿರುವ ಕೃಷ್ಣಕುಮಾರ್, “ಕರೋಲ್ ತಂಡ ಅಪರಾಧಿಗಳ ಗುಂಪಾಗಿದ್ದು, ಅವರು ಪಾನಮತ್ತರಾಗಿದ್ದರು” ಎಂದು ಹೇಳಿಕೆ ನೀಡಿದ್ದರು.
ಅವರ ಹೇಳಿಕೆಯು ಆಕ್ರೋಶಕ್ಕೆ ಗುರಿಯಾಗಿದೆ. ಮಕ್ಕಳ ಪೋಷಕರು ಮತ್ತು ಸಾರ್ವಜನಿಕರು ಕೃಷ್ಣಕುಮಾರ್ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. “ಮಕ್ಕಳು ಪ್ರತಿ ವರ್ಷದಂತೆ ಈ ವರ್ಷವೂ ಕರೋಲ್ ನಡೆಸುತ್ತಿದ್ದರು. ತಂಡದಲ್ಲಿ 10-15 ವರ್ಷ ವಯಸ್ಸಿನ ಮಕ್ಕಳು ಮಾತ್ರವೇ ಇದ್ದರು. ಅವರ ಮೇಲೆ ದಾಳಿ ನಡೆಸಲಾಗಿದೆ. ಅಲ್ಲದೆ, ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ” ಎಂದು ಕಿಡಿಕಾರಿದ್ದಾರೆ.
ಈ ಘಟನೆ ವಿರುದ್ಧ ಜಿಲ್ಲೆಯ ಎಲ್ಲ 2500 ಘಟಕಗಳಲ್ಲಿ ಕೂಡ ಕರೋಲ್ ನಡೆಸಲಾಗುವುದು ಎಂದು ಡಿವೈಎಫ್‍ಐ ಘೋಷಿಸಿದೆ.
ಕ್ರಿಶ್ಚಿಯನ್ ಸಮುದಾಯದ ಬೆಂಬಲ ಪಡೆಯುವಲ್ಲಿ ವಿಫಲವಾಗಿರುವ ಬಿಜೆಪಿ, ಇಂತಹ ಪ್ರತೀಕಾರದ ದಾಳಿಗೆ ಇಳಿದಿದೆ. ರಾಜ್ಯದಲ್ಲಿ ಕೋಮು ಸಾಮರಸ್ಯ ಕದಡಲು ಯತ್ನಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಘಟನೆಯ ಸಂಬಂಧ ಆರ್‌ಎಸ್‌ಎಸ್ ಕಾರ್ಯಕರ್ತ ಅಶ್ವಿನ್ ರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.




