ಮಹಾರಾಷ್ಟ್ರ ಬದ್ಲಾಪುರ ನಗರ ಪಾಲಿಕೆಗೆ ಅಪ್ರಾಪ್ತ ಬಾಲಕಿ ಮೆಲಿನ ಅತ್ಯಾಚಾರ ಪ್ರಕರಣದ ಸಹ-ಆರೋಪಿಯನ್ನು ಬಿಜೆಪಿ ನಾಮನಿರ್ದೇಶನ ಮಾಡಿದೆ. ಬಿಜೆಪಿ ಧೋರಣೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಬಳಿಕ, ತನ್ನ ನಿರ್ಧಾರವನ್ನು ಬಿಜೆಪಿ ಹಿಂಪಡೆದಿದೆ.
ಮಹಾರಾಷ್ಟ್ರದ ಪಾಲಿಕೆಗಳಲ್ಲಿ ಚುನಾಯಿತ ಸದಸ್ಯರು ತಮ್ಮ ಪಾಲಿಕೆಗಳಿಗೆ ಇಬ್ಬರು ನಾಮನಿರ್ದೇಶಿತ (ಕೋ-ಅಪ್ಟೆಡ್) ಕಾರ್ಪೋರೇಟರ್‌ಗಳನ್ನು ಆಯ್ಕೆ ಮಾಡುತ್ತಾರೆ. ಅದರಂತೆ, ಬದ್ಲಾಪುರ ಪಾಲಿಕೆಯಲ್ಲಿ ಕೋ-ಅಪ್ಟೆಡ್ ಕಾರ್ಪೋರೇಟರ್‌ಆಗಿ ಅತ್ಯಾಚಾರ ಪ್ರಕರಣದ ಸಹ ಆರೋಪಿ ತುಷಾರ್ ಅಪಾಟೆ ಅವರನ್ನು ಬಿಜೆಪಿ ನಾಮನಿರ್ದೇಶನ ಮಾಡಿತ್ತು.
2024ರಲ್ಲಿ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಅಕ್ಷಯ್ ಶಿಂಧೆ ಎಂಬಾತ ಪ್ರಮುಖ ಆರೋಪಿಯಾಗಿದ್ದ. ಆತನ ಕೃತ್ಯಕ್ಕೆ ಸಹಕಾರ ನೀಡಿದ ಆರೋಪದ ಮೇಲೆ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯೂ ಆಗಿದ್ದ ಅಪಾಟೆ ಅವರನ್ನು ಸಹ ಆರೋಪಿಯನ್ನಾಗಿ ಐಪಿಸಿ ಸೆಕ್ಷನ್ 21(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಪ್ರಮುಖ ಆರೋಪಿ ಶಿಂಧೆಯನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದರು.
ಇದೀಗ, ಅಪಾಟೆಯನ್ನು ಪಾಲಿಕೆಗೆ ಕೋ-ಅಪ್ಟೆಡ್ ಕಾರ್ಪೋರೇಟರ್‌ಆಗಿ ಬಿಜೆಪಿ ನಾಮನಿರ್ದೇಶನ ಮಾಡಿತ್ತು. ಆದರೆ, ವ್ಯಾಪಕ ಸಾರ್ವಜನಿಕ ವಿರೋಧ ವ್ಯಕ್ತವಾಯಿತು. ಮಾತ್ರವಲ್ಲದೆ, ಪಕ್ಷವು ತನ್ನ ನಿರ್ಧಾರವನ್ನು ಬದಲಿಸದಿದ್ದರೆ, ಬೃಹತ್ ಪ್ರತಿಭಟನೆ ನಡೆಸುವುದಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಸ್) ಎಚ್ಚರಿಕೆ ನೀಡಿತ್ತು. ಈ ಬೆನ್ನಲ್ಲೇ, ಪಕ್ಷವು ತನ್ನ ನಿರ್ಧಾರವನ್ನು ಹಿಂಪಡೆದಿದೆ.
ಈ ಲೇಖನ ಓದಿದ್ದೀರಾ?: ತಮಿಳುನಾಡು ಚುನಾವಣೆ | ದಳಪತಿ ವಿಜಯ್ ಸೆಳೆಯಲು ಖೆಡ್ಡಾ ತೋಡಿತೇ ಬಿಜೆಪಿ?
ಆದಾಗ್ಯೂ, ಆತನನ್ನು ನಾಮನಿರ್ದೇಶನ ಮಾಡಿದ್ದ ಬಿಜೆಪಿಯ ನಿರ್ಧಾರವನ್ನು ಸ್ಥಳೀಯ ಬಿಜೆಪಿ ಸಮರ್ಥಿಸಿಕೊಂಡಿದೆ. “ಅಪಾಟೆ ಕೇವಲ ಸಹ-ಆರೋಪಿಯಷ್ಟೇ.ಅವರ ವಿರುದ್ಧದ ಆರೋಪಗಳು ಇನ್ನೂ ದೃಢಪಟ್ಟಿಲ್ಲ. ಅವರು ಪ್ರಸಿದ್ಧ ಶಿಕ್ಷಣ ಸಂಸ್ಥೆಯ ಟ್ರಸ್ಟಿಯಾಗಿದ್ದಾರೆ. ಅಲ್ಲದೆ, ಇತ್ತೀಚಿನ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗಾಗಿ ಶ್ರಮಿಸಿದ್ದಾರೆ. ಆದ್ದರಿಂದ, ಅವರನ್ನು ಕೋ-ಆಪ್ಟೆಡ್ ಕಾರ್ಪೊರೇಟರ್ ಆಗಿ ನೇಮಿಸುವ ಮೂಲಕ, ಅವರಿಗೆ ಪ್ರತಿಫಲ ನೀಡಲಾಗಿದೆ” ಎಂದು ಹೇಳಿದೆ.
“ಬದ್ಲಾಪುರ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಸಹ-ಆರೋಪಿ ತುಷಾರ್ ಅಪಾಟೆ ಅವರನ್ನು ಕಾರ್ಪೊರೇಟರ್ ಆಗಿ ನೇಮಿಸುವ ನಿರ್ಧಾರವು ಬಿಜೆಪಿಯ ನಿಜವಾದ ಮುಖವನ್ನು ಬಹಿರಂಗಗೊಳಿಸಿದೆ. 2017ರಲ್ಲಿ, ಬಿಜೆಪಿ ಉನ್ನಾವ್ ಅತ್ಯಾಚಾರ ಪ್ರಕರಣದ ಆರೋಪಿ ಕುಲದೀಪ್ ಸಿಂಗ್ ಸೆಂಘರ್ ಅವರನ್ನು ಶಾಸಕರನ್ನಾಗಿ ಮಾಡಿತ್ತು. ಅಂಕಿತಾ ಭಂಡಾರಿ ಅತ್ಯಾಚಾರ ಪ್ರಕರಣದಲ್ಲೂ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಆರೋಪಿಗಳನ್ನು ಬಿಜೆಪಿ ರಕ್ಷಿಸಿತ್ತು. ‘ಬೇಟಿ ಪಡಾವೋ, ಬೇಟಿ ಬಚಾವೋ’ ಎಂಬ ದೊಡ್ಡ ಭರವಸೆ ನೀಡುವ ಬಿಜೆಪಿ, ಪ್ರತಿ ಬಾರಿಯೂ ತನ್ನ ಘೋಷಣೆಗೆ ವಿರುದ್ಧವಾಗಿಯೇ ನಡೆದುಕೊಂಡಿದೆ. ಬಿಜೆಪಿಯ ನಿರ್ಧಾರವನ್ನು ನಾವು ಖಂಡಿಸುತ್ತೇವೆ. ಮಹಾರಾಷ್ಟ್ರ ಮತ್ತು ಭಾರತದಾದ್ಯಂತ ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ” ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಹೇಳಿದ್ದಾರೆ.




