ವೇಶ್ಯಾವಾಟಿಕೆ ಜಾಲದಿಂದ ತಪ್ಪಿಸಿಕೊಂಡು ಬಂದು ರಕ್ಷಣೆ ಕೋರಿದ ಬಾಂಗ್ಲಾದೇಶದ ಯುವತಿಯನ್ನು ಮಹಿಳಾ ಕಾನ್‌ಸ್ಟೆಬಲ್ ಮತ್ತೆ ಅದೇ ಜಾಲಕ್ಕೆ ತಳ್ಳಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಬಲವಂತವಾಗಿ ವೇಶ್ಯಾವಾಟಿಕೆ ಮಾಡಿಸಲಾಗುತ್ತಿದೆ, ನನ್ನನ್ನು ಈ ಜಾಲದಿಂದ ರಕ್ಷಿಸಿ ಎಂದು ಕೋರಿ ರಸ್ಖಾನಾ ಪೊಲೀಸ್ ಠಾಣೆಗೆ ಬಾಂಗ್ಲಾದೇಶಿ ಯುವತಿ ಬಂದರೆ, ಮಹಿಳಾ ಕಾನ್‌ಸ್ಟೆಬಲ್ ಅದೇ ವೇಶ್ಯಾಗೃಹಕ್ಕೆ ವಾಪಸ್ ಕಳುಹಿಸಿದ್ದಾರೆ.
ಇದನ್ನು ಓದಿದ್ದೀರಾ? ವೇಶ್ಯಾವಾಟಿಕೆ ದಂಧೆ | ಪುನೀತ್ ಕೆರೆಹಳ್ಳಿ ಜೊತೆ ವೇಶ್ಯಾವಾಟಿಕೆ ಅಡ್ಡೆಯಲ್ಲಿ ಸಿಕ್ಕ ಯುವತಿ ಹೇಳಿದ್ದೇನು ?
ಬುಧ್ವಾರ್ ಪೇಠ್ ರೆಡ್-ಲೈಟ್ ಪ್ರದೇಶದಲ್ಲಿ ಬಲವಂತವಾಗಿ ವೇಶ್ಯಾವಾಟಿಕೆ ಮಾಡಿಸಲಾಗುತ್ತಿದೆ ಎಂದು ಆರೋಪಿಸಿ ಮಹಿಳೆ ಪೊಲೀಸ್ ಠಾಣೆಗೆ ತೆರಳಿದ್ದರು. ತನ್ನನ್ನು ಕಳ್ಳಸಾಗಣೆ ಮಾಡಿ, ತನ್ನ ಇಚ್ಛೆಗೆ ವಿರುದ್ಧವಾಗಿ ಶೋಷಿಸಲಾಗುತ್ತಿದೆ ಎಂದು ತಿಳಿಸಿದ್ದರು.
ಆದರೆ ಕಳ್ಳಸಾಗಣೆ ಮತ್ತು ಶೋಷಣೆಯ ಸಂತ್ರಸ್ತೆಯನ್ನು ಮಹಿಳಾ ಕಾನ್‌ಸ್ಟೆಬಲ್‌ನಿಂದ ಹತ್ತಿರದ ಪೊಲೀಸ್ ಹೊರಠಾಣೆಗೆ ಕರೆದೊಯ್ಯಲಾಗಿದೆ. ಬಳಿಕ ವೇಶ್ಯಾಗೃಹದ ನಿರ್ವಾಹಕರೊಂದಿಗೆ ಚರ್ಚೆ ನಡೆಸಿ ಮತ್ತೆ ಅವರೊಂದಿಗೆ ಯುವತಿಯನ್ನು ಕಳಿಸಿದ್ದಾರೆ.
ಸ್ಥಳೀಯ ಹೋರಾಟ ಕಾರ್ಯಕರ್ತರು ಈ ಬಗ್ಗೆ ಪ್ರಶ್ನೆ ಎತ್ತಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಇದಾದ ಬಳಿಕ ಪುಣೆ ಪೊಲೀಸರು ಆಂತರಿಕ ತನಿಖೆಯನ್ನು ಪ್ರಾರಂಭಿಸಿದ್ದು, ತ್ವರಿತ ಕ್ರಮ ಕೈಗೊಂಡ ಉಪ ಪೊಲೀಸ್ ಆಯುಕ್ತ ಹೃಷಿಕೇಶ್ ರಾವಾಲೆ ಅವರು ಮನೀಷಾ ಪುಕಲೆ ಎಂದು ಗುರುತಿಸಲಾದ ಆರೋಪಿ ಮಹಿಳಾ ಕಾನ್‌ಸ್ಟೆಬಲ್ ಅನ್ನು ಅಮಾನತುಗೊಳಿಸಿದ್ದಾರೆ.
ಇದನ್ನು ಓದಿದ್ದೀರಾ? ಪೋಷಕರಿಂದಲೇ ಪೈಶಾಚಿಕ ಕೃತ್ಯ: ಮಗಳನ್ನು ವೇಶ್ಯಾವಾಟಿಕೆಗೆ ದೂಡಿ ದೌರ್ಜನ್ಯ
ಸದ್ಯ ಮಹಿಳಾ ಕಾನ್‌ಸ್ಟೆಬಲ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. “ಬರೀ ಅಮಾನತುಗೊಳಿಸುವುದಲ್ಲ, ಜೈಲು ಶಿಕ್ಷೆಯಾಗಬೇಕು” ಎಂದು ಕೆಲ ನೆಟ್ಟಿಗರು ಒತ್ತಾಯಿಸಿದ್ದಾರೆ. “ಸಾಮಾನ್ಯ ಜನರಾದರೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತಿದೆ. ಆದರೆ ಪೊಲೀಸರಿಗೆ ಬರೀ ಅಮಾನತು” ಎಂದೂ ಕೆಲವು ನೆಟ್ಟಿಗರು ಹೇಳಿದ್ದಾರೆ.
ಇನ್ನು ಕೆಲವರು, “ಮಹಿಳಾ ಕಾನ್‌ಸ್ಟೆಬಲ್ ಮೇಲಧಿಕಾರಿಗಳ ಆದೇಶವನ್ನು ಪಾಲಿಸುತ್ತಿದ್ದಾರೆ ಎಂದು ಕಾಣಿಸುತ್ತದೆ. ಯಾವುದೇ ವಿಷಯ ಕೈಮೀರಿ ಹೋದಾಗ ಮಹಿಳೆಯರನ್ನೇ ತಪ್ಪಿತಸ್ಥರನ್ನಾಗಿಸಲಾಗುತ್ತದೆ. ರಾಜಕೀಯವಾಗಿರಲಿ, ಸರ್ಕಾರಿ ಕಚೇರಿಗಳಾಗಿರಲಿ ಅಥವಾ ಬಹುರಾಷ್ಟ್ರೀಯ ಕಂಪನಿಯಾಗಲಿ, ಎಲ್ಲಾ ಕಡೆಗಳಲ್ಲಿ ನಡೆಯುವುದು ಇದುವೇ” ಎಂದು ಜೋಶ್ ಟಿಕೆ ಎಂಬ ನೆಟ್ಟಿಗರು ಅಭಿಪ್ರಾಯಿಸಿದ್ದಾರೆ.





