ಪುಟ್ಟ ಮಕ್ಕಳು ತನಗಿಂತ ಸುಂದರವಾಗಿ ಕಾಣುತ್ತಿದ್ದಾರೆಂಬ ಕಾರಣಕ್ಕೆ ತಮ್ಮದೇ ಕುಟುಂಬದ ಮೂವರು ಹೆಣ್ಣು ಮಕ್ಕಳು ಮತ್ತು ತನ್ನದೇ ಮಗಳನ್ನೂ ಮಹಿಳೆಯೊಬ್ಬರು ಹತ್ಯೆಗೈದಿರುವ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಮಹಿಳೆಯು ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ವರು ಮಕ್ಕಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿ ಮಹಿಳೆಯನ್ನು ಹರಿಯಾಣದ ಪೂನಂ ಎಂದು ಹೆಸರಿಸಲಾಗಿದೆ. ಆಕೆ, 2021ರಲ್ಲಿ ತನ್ನ ಸೋದರ ಸಂಬಂಧಿಯ ಮಗಳು ವಿಧಿಯನ್ನು ಕೊಲೆ ಮಾಡಲು ಯತ್ನಿಸಿದ್ದರು. ಆಗ, ಆ ಮಗುವಿಗೆ ಕೇವಲ 2 ವರ್ಷವಷ್ಟೇ. ಆರೋಪಿ ಪೂನಂ ಆ ಮಗುವಿನ ಮೇಲೆ ದೊಡ್ಡ ಪಾತ್ರೆಯನ್ನು ತಯಾರಿಸಿದ್ದ ಕುದಿಯುವ ಚಹಾವನ್ನು ಸುರಿದು, ಆಕಸ್ಮಿಕ ಘಟನೆಯೆಂದು ಬಿಂಬಿಸಿದ್ದರು. ಮಗು ವಿಧಿ ಅಪಾಯದಿಂದ ಪಾರಾಗಿ ಬದುಕುಳಿದಿತ್ತು.
ಇದೀಗ, ಸೋಮವಾರ (ಡಿ.1) ತನ್ನ ಕುಟುಂಬಕ್ಕೇ ಸೇರಿದ 6 ವರ್ಷದ ಬಾಲಕಿಯನ್ನು ಕುಟುಂಬದ ಕಾರ್ಯಕ್ರಮವೊಂದಕ್ಕೆ ಕರೆದೊಯ್ಯುವ ನೆಪವೊಡ್ಡಿ, ಆಕೆಯನ್ನು ಸ್ನಾನಕ್ಕೆ ಕರೆದೊಯ್ದು, ನೀರಿನ ಡಬ್‌ನಲ್ಲಿ ಮುಳುಗಿಸಿ ಕೊಂದಿದ್ದಾರೆ.
2021ರಿಂದ ಈ ವರ್ಷದ ಡಿಸೆಂಬರ್ 1ರವರೆಗೆ ಪೂನಂ ನಾಲ್ಕು ಮಕ್ಕಳನ್ನು ಕೊಂದಿದ್ದಾರೆ. ಹತ್ಯೆಗೀಡಾದ ಮಕ್ಕಳಲ್ಲಿ ಆಕೆಯ ಸ್ವಂತ 4 ವರ್ಷದ ಮಗಳೂ ಒಬ್ಬಳು. ಮೂವರು ಹೆಣ್ಣು ಮಕ್ಕಳು ತನಗಿಂತ ಸುಂದರವಾಗಿ ಕಾಣುತ್ತಿದ್ದರು ಎಂಬ ಕಾರಣಕ್ಕೆ ಪೂನಂ ಕೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದಾಗ್ಯೂ, ಆಕೆ ತನ್ನದೇ ಮಗಳನ್ನು ಯಾಕೆ ಕೊಂದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಆರೋಪಿ ಪೂನಂ ಮೊದಲು ಕೊಲೆ ಮಾಡಿ, ಯಶಸ್ವಿಯಾದದ್ದು 2023ರಲ್ಲಿ. ಆ ವರ್ಷದ ಆರಂಭದಲ್ಲಿ ತನ್ನ ಅತ್ತಿಗೆಯ 9 ವರ್ಷದ ಮಗಳು ಇಶಿಕಾಳನ್ನು ಕೊಂದಿದ್ದರು. ಬಳಿಕ, ತನ್ನದೇ ಮಗಳು ಶುಭಂನನ್ನು ಕೊಲೆ ಮಾಡಿದ್ದಾರೆ. 2024ರಲ್ಲಿ 8 ವರ್ಷದ ಮಗು ಜಿಯಾಳನ್ನು ಕೊಲೆ ಮಾಡಿದ್ದಾರೆ.
ಇಶಿಕಾಳನ್ನು ಕೊಂದ ಬಳಿಕ, ತನ್ನ ಮೇಲೆ ಅನುಮಾನ ಬರಬಾರದು ಎಂಬ ಕಾರಣಕ್ಕಾಗಿ ತನ್ನ ಮಗಳನ್ನೂ ಕೊಂದಿದ್ದಾರೆ ಎಂದು ಶಂಕಿಸಲಾಗಿದೆ.
ಪೂನಂ ಅವರ ಕೃತ್ಯದಿಂದ 2021ರಲ್ಲಿ ಬದುಕುಳಿದಿದ್ದ ಮಗು ವಿಧಿ ಇದೇ ಸೋಮವಾರ, ಪೂನಂ ಅವರ ಕ್ರೌರ್ಯಕ್ಕೆ ಬಲಿಯಾಗಿದೆ. ವಿಧಿಯನ್ನು ಡಿ.1ರಂದು ಬರ್ಬರವಾಗಿ ಪೂನಂ ಕೊಲೆ ಮಾಡಿದ್ದಾರೆ. ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ನಾಲ್ವರೂ ಮಕ್ಕಳನ್ನು ತಾನೇ ಕೊಂದಿದ್ದೇನೆಂದು ಪೂನಂ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
2023 ಮತ್ತು 2024ರಲ್ಲಿ ನಡೆದ ಕೊಲೆ ಪ್ರಕರಣಗಳ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಬಿಡುಗಡೆ ಮಾಡಿಲ್ಲ. ಆದರೆ, ಸೋಮವಾರ ನಡೆದ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾಗ, ಮಗು ವಿಧಿಗೆ ಸ್ನಾನ ಮಾಡಿಸುವ ನೆಪದಲ್ಲಿ ಸ್ನಾನದ ಕೊಣೆಗೆ ಪೂನಂ ಕರೆದೊಯ್ದಿದ್ದಾರೆ. ಅಲ್ಲಿ, ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಾರೆ. ಕೃತ್ಯವನ್ನು ಪೂನಂ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪೂನಂ ಎಸಗಿದ ಕೃತ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಮಗು ವಿಧಿಯ ತಂದೆ ಸಂದೀಪ್, “ಆಕೆ ಎಸಗಿರುವ ಅಪರಾಧಗಳಿಗೆ ಆಕೆಯನ್ನು ಮರಣದಂಡನೆಗೆ ಗುರಿಪಡಿಸಬೇಕು. ಆಕೆಯ ಬಗ್ಗೆ ನನಗೆ ಮೊದಲಿನಿಂದಲೂ ಅನುಮಾನವಿತ್ತು… ಆದರೆ ನನ್ನ ಕುಟುಂಬ ಆಕೆಯನ್ನು ನಂಬಿತ್ತು, ನನ್ನ ಅನುಮಾನಗಳನ್ನು ವಿರೋಧಿಸುತ್ತಿತ್ತು” ಎಂದು ಹೇಳಿದ್ದಾರೆ.
“ಆಕೆಗೆ ಸೌಂದರ್ಯ ಭ್ರಾಂತಿ ಇತ್ತು. ಅದೇ ಅಸೂಯೆಯಿಂದ ಆಕೆ ನನ್ನ ಮಗಳನ್ನು ಕೊಂದದ್ದಾಳೆ. ಅವಳಿಗೆ ಮರಣದಂಡನೆ ವಿಧಿಸಬೇಕು. ಅವಳು ಸಿಕ್ಕಿಹಾಕಿಕೊಳ್ಳದಿದ್ದರೆ ಇನ್ನೂ ಎಷ್ಟು ಮಕ್ಕಳು ಸಾಯುತ್ತಿದ್ದರೋ” ಎಂದು ಹೇಳಿದ್ದಾರೆ.




