ಕೆಲವೇ ವಾರಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಧಿಕಾರ ಉಳಿಸಿಕೊಳ್ಳಲು ಆಡಳಿತಾರೂಢ ಟಿಎಂಸಿ, ಅಧಿಕಾರ ಕಸಿದುಕೊಳ್ಳಲು ಬಿಜೆಪಿ ಹಾಗೂ ತಮ್ಮ ನೆಲೆಯನ್ನು ಹುಡುಕಿಕೊಳ್ಳಲು ಕಾಂಗ್ರೆಸ್ ಮತ್ತು ಎಡಪಕ್ಷಗಳು ಕಸರತ್ತು ನಡೆಸುತ್ತಿವೆ. ಚುನಾವಣಾ ಸಿದ್ದತೆಯಲ್ಲಿ ತೊಡಗಿವೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಳಿಯ, ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ನೇತೃತ್ವದಲ್ಲಿ ಪಕ್ಷವು ‘ಬಂಗಾಳ ಮತ್ತೆ ಗೆಲ್ಲುತ್ತದೆ’ (ಆಬಾರ್ ಜಿತ್ಬೇ ಬಂಗ್ಲಾ) ಅಭಿಯಾನ ನಡೆಸುತ್ತಿದೆ. ಇದೀಗ, ಬಿಜೆಪಿ ಕೂಡ ‘ಜನತಾ ಪ್ರಣಾಳಿಕೆ’ ಅಭಿಯಾನ ಆರಂಭಿಸಿದೆ.
ಬಿಜೆಪಿ ಮೂಲಗಳ ಪ್ರಕಾರ, ಬಂಗಾಳದ ಎಲ್ಲ ಜಿಲ್ಲೆಗಳಲ್ಲಿಯೂ ಪಕ್ಷದ ಮುಖಂಡರು ಮತದಾರರಿಂದಿಗೆ ಚರ್ಚಿಸಲಿದ್ದಾರೆ. ಬಿಜೆಪಿ ಮುಖಂಡರು ಪ್ರತಿ ಗ್ರಾಮ, ಪಟ್ಟಣ ಹಾಗೂ ನಗರಗಳಲ್ಲಿ ಜನರಿಂದ ಸಲಹೆಗಳನ್ನು ಪಡೆಯಲಿದ್ದಾರೆ. ಮತದಾರರಿಂದ ನೇರವಾಗಿ ಪಡೆದ ಪ್ರತಿಕ್ರಿಯೆಗಳ ಆಧಾರದ ಮೇಲೆ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗುತ್ತಿದೆ. ಪ್ರಣಾಳಿಕೆಯು ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
“ಈಗಾಗಲೇ ಕೆಲವು ಭಾಗಗಳಿಂದ ಪ್ರತಿಕ್ರಿಯೆಗಳು ಬಂದಿವೆ. ಅವುಗಳು ಪ್ರಮಾಣಿಕವಾಗಿವೆ. ಜನರು ರಾಜಕೀಯ ಘೋಷಣೆಗಳನ್ನು ನೀಡುತ್ತಿಲ್ಲ. ಬದಲಾಗಿ ತಮ್ಮ ದೈನಂದಿನ ಹೋರಾಟಗಳು ಮತ್ತು ಜೀವನದ ಅನುಭವಗಳ ಬಗ್ಗೆ ಹೇಳುತ್ತಿದ್ದಾರೆ” ಎಂದು ಬಿಜೆಪಿ ಹೇಳಿಕೊಂಡಿದೆ.
ಜನರೇ ನೆರವಾಗಿ ಸಲಹೆಗಳನ್ನು ನೀಡಲು ಬಿಜೆಪಿ ಜಿಲ್ಲಾ ಕಚೇರಿಗಳಲ್ಲಿ ಸಲಹಾ ಪಟ್ಟಿಗೆಗಳನ್ನು ತೆರೆಯಲಾಗಿದೆ. ಇಮೇಲ್ ಮೂಲಕವೂ ಸಲಹೆಗಳನ್ನು ಕಳಿಸಲು ಅವಕಾಶವಿದೆ. ವಿದ್ಯಾರ್ಥಿಗಳು, ಗೃಹಿಣಿಯರು ಹಾಗೂ ದಿನಗೂಲಿ ಕಾರ್ಮಿಕರು ಈ ಅಭಿಯಾನದಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ.
ಈ ಲೇಖನ ಓದಿದ್ದೀರಾ?: ಬಹುತ್ವದ ಬುಡಕ್ಕೇ ಕೊಡಲಿಪೆಟ್ಟು: ಸಮಾಜವನ್ನು ಆವರಿಸುತ್ತಿರುವ ಅಸಹಿಷ್ಣುತೆಯ ಕಾರ್ಮೋಡ
ಈವರೆಗೆ ಬಂದಿರುವ ಸಲಹೆಗಳಲ್ಲಿ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಲಾಗಿದೆ ಎಂದಿರುವ ಬಿಜೆಪಿ, ಕೆಲವು ಅಂಶಗಳನ್ನು ಬಿಡುಗಡೆ ಮಾಡಿದೆ.
* ಭ್ರಷ್ಟಾಚಾರದ ಆರೋಪಗಳು.
* ಭಯಮುಕ್ತ ಸಮಾಜ ಮತ್ತು ಕಟ್ಟುನಿಟ್ಟಾದ ಕಾನೂನು ಸುವ್ಯವಸ್ಥೆಗಾಗಿ ಬೇಡಿಕೆ.
* ಬಂಗಾಳದೊಳಗೆ ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕಾ ಅಭಿವೃದ್ಧಿ.
* ಸಿಂಡಿಕೇಟ್ ನಿಯಂತ್ರಣ ಮತ್ತು ಸ್ಥಳೀಯ ಬೆದರಿಕೆಗಳ ಆರೋಪ.
* ರಾಜಕೀಯ ಮಧ್ಯವರ್ತಿಗಳಿಲ್ಲದೆ ಕಲ್ಯಾಣ ಯೋಜನೆಗಳ ನೇರ ಜಾರಿ.
* ಯುವಜನರು ಬೇರೆ ರಾಜ್ಯಗಳಿಗೆ ವಲಸೆ ಹೋಗುವುದನ್ನು ತಡೆಯಲು ಅವಕಾಶಗಳ ಸೃಷ್ಟಿ.
* ಸಮಾಜದ ಎಲ್ಲ ವರ್ಗಗಳಿಗೆ ಘನತೆ, ಭದ್ರತೆ ಮತ್ತು ಗೌರವ.
“ಅನೇಕ ಕಡೆಗಳಲ್ಲಿ ಈ ಅಭಿಯಾನವು ರಾಜಕೀಯ ಚಟುವಟಿಕೆಗಿಂತ ಸಾರ್ವಜನಿಕ ಅಹವಾಲು ಆಲಿಕೆಯಂತೆ ಭಾಸವಾಯಿತು. ಜನರು ಮಾತನಾಡಿದರು, ನಾವು ಆಲಿಸಿದೆವು. ಅವುಗಳಲ್ಲಿ, ಮಹಿಳಾ ಸುರಕ್ಷತೆ ಮತ್ತು ಸ್ಥಳೀಯ ಉದ್ಯೋಗಾವಕಾಶ ಕುರಿತು ಹೆಚ್ಚು ಬೇಡಿಕೆಗಳಿವೆ” ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.




