ಬಂಗಾಳ ಚುನಾವಣೆ | ಶೂನ್ಯದಲ್ಲಿರುವ ಎಡಪಕ್ಷಗಳು ಪುಟಿದೇಳುವವೇ?

Date:

15 ವರ್ಷಗಳ ಟಿಎಂಸಿ ಆಡಳಿತವು ಆಡಳಿತ ವಿರೋಧಿ ಅಲೆಯನ್ನೂ ಕಾಣುತ್ತಿದೆ. ಈ ಅಲೆಯ ಮುಖ್ಯ ಫಲಾನುಭವಿ ಬಿಜೆಪಿಯೇ ಆಗಿದ್ದರೂ, ಎಡಪಕ್ಷಗಳು ಮತ್ತು ಕಾಂಗ್ರೆಸ್‌ ತಮ್ಮ ಮತ ಪಾಲನ್ನು ಸ್ವಲ್ಪ ಹೆಚ್ಚಿಸಿಕೊಳ್ಳಬಹುದು. ಇದು, ಎಡಪಕ್ಷಗಳು ಪ್ರವರ್ಧಮಾನಕ್ಕೆ ಮರಳಲು ಅಡಿಗಲ್ಲಾಗಬಹುದು!

ಪಶ್ಚಿಮ ಬಂಗಾಳದಲ್ಲಿ 2026ರ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇವೆ. ಮಾರ್ಚ್-ಏಪ್ರಿಲ್‌ನಲ್ಲಿ ಸುಮಾರು 3 ಹಂತಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಒಟ್ಟು 294 ಸ್ಥಾನಗಳಿಗೆ ಚುನಾಣೆಯ ನಡೆಯಲಿದ್ದು, ಮತ್ತೆ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯಲ್ಲಿದೆ. ಹೇಗಾದರೂ, ಟಿಎಂಸಿಯಿಂದ ಅಧಿಕಾರ ಕಸಿಕೊಳ್ಳಬೇಕೆಂದು ಬಿಜೆಪಿ ಹವಣಿಸುತ್ತಿದೆ. ಇನ್ನು, ತಮ್ಮ ನೆಲೆ ಉಳಿಸಿಕೊಳ್ಳಲು ಮತ್ತು ಒಂದಷ್ಟಾದರೂ ಪ್ರಬಲ್ಯತೆ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್‌ ತಿಣಕಾಡುತ್ತಿದೆ. ಇನ್ನು ಬರೋಬ್ಬರಿ 34 ವರ್ಷಗಳ (1977-2011) ಕಾಲ ಬಂಗಾಳದಲ್ಲಿ ಆಡಳಿತ  ನಡೆಸಿದ್ದ ಎಡಪಕ್ಷಗಳು ಕಳೆದ 15 ವರ್ಷಗಳಲ್ಲಿ ಮೂಲೆಗುಂಪಾಗಿವೆ. ಮರಳಿ ಮುನ್ನೆಲೆಗೆ ಬರಲು ಯತ್ನಿಸುತ್ತಿವೆ. ಈ ಚುನಾವಣೆಯಲ್ಲಿ ಎಡರಂಗದ ಭವಿಷ್ಯವೇನು ಎಂಬ ವಿಚಾರ ಚರ್ಚೆಯಲ್ಲಿದೆ.

ಬಂಗಾಳವೂ ಸೇರಿದಂತೆ ಇಡೀ ದೇಶದಲ್ಲಿ ಮತದಾರರ ಆದ್ಯತೆಗಳು ಬದಲಾಗುತ್ತಿವೆ. ಜನರ ಆಲೋಚನೆ, ರಾಜಕೀಯವನ್ನು ನೋಡುವ ದೃಷ್ಟಿಗಳೂ ಬದಲಾಗಿವೆ. ಸಾಮಾಜಿಕ ಜಾಲತಾಣಗಳು ಜನರ ಚಿಂತನೆಗಳ ಮೇಲೆ ನೇರ ಪರಿಣಾಮ ಬೀರುತ್ತಿವೆ. ಅಭಿಪ್ರಾಯಗಳನ್ನು ರೂಪಿಸುತ್ತಿವೆ. ಈ ತಾಣಗಳನ್ನು ಕಳೆದ 11 ವರ್ಷಗಳಿಂದ ಬಿಜೆಪಿ ಸಕ್ರಿಯವಾಗಿ ಬಳಸಿಕೊಂಡಿದೆ. ಮೋದಿ, ಹಿಂದುತ್ವ ಪರವಾದ ಸುಳ್ಳು-ಪೊಳ್ಳು ವಿಚಾರಗಳನ್ನು ನಾಗರಿಕದ ತಲೆಗೆ ತುಂಬಿವೆ. ಬಂಗಾಳದಲ್ಲೂ ಇದೇ ವಾಟ್ಸ್‌ಆ್ಯಪ್ ಯೂನಿರ್ವಸಿಟಿ ಮೂಲಕವೇ ಜನರಲ್ಲಿ ಮಮತಾ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಸೃಷ್ಟಿಸಲು ಬಿಜೆಪಿ ಹವಣಿಸುತ್ತಿವೆ. ಜೊತೆಗೆ, ನುಸುಳುಕೋರರು ಎಂಬ ಕಲ್ಪನೆಯ ಗುಮ್ಮವನ್ನು ಬಂಗಾಳದಲ್ಲಿ ತಂದಿರಿಸಿದೆ. ಒಂದೆಡೆ, ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧದ ಮಮತಾ ದಿಟ್ಟ ಹೋರಾಟ. ಮತ್ತೊಂದೆಡೆ, ಬಿಜೆಪಿಯ ತಂತ್ರ-ಕುತಂತ್ರಗಳು ನಡೆಯುತ್ತಿವೆ. ಟಿಎಂಸಿ-ಬಿಜೆಪಿ ನಡುವಿನ ಹೋರಾಟದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿವೆ.

1977ರಿಂದ 2011ರವರೆಗೆ ಸಿಪಿಐ(ಎಂ) ನೇತೃತ್ವದಲ್ಲಿ ಎಡಪಕ್ಷಗಳು ಬಂಗಾಳದಲ್ಲಿ ನಿರಂತರ ಆಡಳಿತ ನಡೆಸಿದ್ದವು. 2011ರಲ್ಲಿ ಎಡ ಪಕ್ಷಗಳ ‘ಎಡರಂಗ’ವನ್ನು ಟಿಎಂಸಿ ಸೋಲಿಸಿತು. ಮಮತಾ ಅಧಿಕಾರಕ್ಕೆ ಬಂದರು. 34 ವರ್ಷ ಆಡಳಿತ ನಡೆಸಿದ್ದ ಎಡ ಪಕ್ಷಗಳ ಅವನತಿಗೆ ಮುಖ್ಯವಾಗಿ ಕಾರಣವಾದದ್ದು, ಸಿಂಗೂರು ಮತ್ತು ನಂದಿಗ್ರಾಮದಲ್ಲಿ ಭುಗಿಲೆದ್ದಿದ್ದ ಪ್ರತಿಭಟನೆಗಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2006-08ರ ಸಿಂಗೂರಿನಲ್ಲಿ ರತನ್‌ ಟಾಟಾ ಅವರ ‘ಟಾಟಾ ನ್ಯಾನೋ’ ಕಾರ್ ಫ್ಯಾಕ್ಟರಿಗಾಗಿ ರೈತರ ಭೂಮಿಯನ್ನು ಸರ್ಕಾರ ಬಲವಂತವಾಗಿ ಸ್ವಾಧೀನಪಡಿಸಲು ಪ್ರಯತ್ನಿಸಿತು. ಇದರ ವಿರುದ್ಧ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗಳು ಭುಗಿಲೆದ್ದವು. ಹೋರಟದ ಫಲ ಮತ್ತು ಮೋದಿಯ ಆಹ್ವಾನದಿಂದಾಗಿ ಟಾಟಾ ಕಂಪನಿಯು ತನ್ನ ಯೋಜನೆಯನ್ನು ಗುಜರಾತ್‌ಗೆ ಸ್ಥಳಾಂತರಿಸಿತು.

ಇದೇ ಸಂದರ್ಭದಲ್ಲಿ, 2007ರ ನಂದಿಗ್ರಾಮದಲ್ಲಿ ‘ಕೆಮಿಕಲ್ ಹಬ್’ ನಿರ್ಮಾಣಕ್ಕಾಗಿಯೂ ಭೂಸ್ವಾಧೀನಕ್ಕೆ ಎಡ ಸರ್ಕಾರ ಕೈಹಾಕಿತು. ಪ್ರತಿಭಟನೆಗಳು ಭುಗಿಲೆದ್ದಾಗ, ಹೋರಾಟಗಾರರ ಮೇಲೆ ಪೊಲೀಸರು ಗುಂಡು ಹಾರಿಸಿದರು. 14 ಮಂದಿ ರೈತರು ಪೊಲೀಸರು ಗುಂಡಿಗೆ ಬಲಿಯಾದರು. ಈ ಎರಡೂ ಘಟನಾವಳಿಗಳ ವಿರುದ್ಧ ಮತ್ತು ರೈತರೊಂದಿಗೆ ಬಲವಾಗಿ ನಿಂತ, ಮಮತಾ ಬ್ಯಾನರ್ಜಿ, ‘ಮಾ-ಮಾಟಿ-ಮಾನುಷ್’ (ಮಾತೃ ಭೂಮಿ ಮನುಷ್ಯರು) ಎಂಬ ಘೋಷಣೆಯೊಂದಿಗೆ ರಾಜ್ಯಾದ್ಯಂತ ಪ್ರತಿಭಟನೆ-ಹೋರಾಟಗಳನ್ನು ನಡೆಸಿದರು. ಪರಿಣಾಮ, ‘ಎಡಪಕ್ಷ’ಗಳ ವಿರುದ್ಧ ಆಡಳಿತ ವಿರೋಧಿ ಅಲೆ ಹೆಚ್ಚಿತು.

ಇದರ ಜೊತೆಗೆ, ದೀರ್ಘಕಾಲದ ಆಡಳಿತ ನಡೆಸಿದ್ದ ಎಡರಂಗ ಸರ್ಕಾರದ ವಿರುದ್ಧ ಸ್ಥಳೀಯವಾಗಿ ಅಸಮಾಧಾನವೂ ಇತ್ತು. ರಾಜಕೀಯ ಹಿಂಸಾಚಾರ, ಪಂಚಾಯತಿ ಮತ್ತು ಸ್ಥಳೀಯ ಮಟ್ಟದಲ್ಲಿ ಅಧಿಕಾರದ ದುರುಪಯೋಗ, ಅಭಿವೃದ್ಧಿಯ ಕೊರತೆ, ಕೈಗಾರಿಕಾ ಬೆಳವಣಿಗೆಯಲ್ಲಿ ವೈಫಲ್ಯವೂ ಜನರ ಅಸಮಾಧಾನಕ್ಕೆ ಕಾರಣವಾಗಿತ್ತು.

ಜನಾಕ್ರೋಶವು 2008ರ ಪಂಚಾಯತಿ ಚುನಾವಣೆ ಮತ್ತು 2009ರ ಲೋಕಸಭಾ ಚುನಾವಣೆಯಲ್ಲಿಯೇ ಸ್ಪಷ್ಟವಾಗಿ ಕಾಣಿಸಿತ್ತು. ಈ ಎರಡೂ ಚುನಾವಣೆಗಳೂ ಮಮತಾ ಅವರು ಟಿಎಂಸಿಗೆ ಭೂಮಿಕೆ ಸಿದ್ದಪಡಿಸಿದ್ದವು. 2011ರ ಚುನಾವಣೆಯಲ್ಲಿ ಮಮತಾ ಅವರು ‘ಬದಲಾ ನಯ್ ಬದಲ್ ಚಾಯಿ’ (ಪ್ರತೀಕಾರ ಬೇಡ, ಬದಲಾವಣೆ ಬೇಕು) ಎಂಬ ಘೋಷಣೆಯೊಂದಿಗೆ ‘ಬದಲಾವಣೆ’ ಕುರಿತು ರಾಜ್ಯಾದ್ಯಂತ ಪ್ರಚಾರ ನಡೆಸಿದರು. ಅವರ ಸರಳ ಜೀವನಶೈಲಿ, ರೈತರ ಪರ ಹೋರಾಟಗಳು ಜನರ ಮನ ಸೆಳೆದಿದ್ದವು. ಎಡಪಕ್ಷಗಳು ಆಡಳಿತ ವಿರೋಧಿ ಅಲೆಯಲ್ಲಿ ಶಮನ ಮಾಡುವಲ್ಲಿ ವಿಫಲವಾದವು.

ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಅಧಿಕಾರಕ್ಕಾಗಿ ಬಿಜೆಪಿ ತಂತ್ರ – ಮಮತಾ ಪ್ರತಿತಂತ್ರ

ಪರಿಣಾಮ, 2011ರ ಚುನಾವಣೆಯಲ್ಲಿ ಒಟ್ಟು 294 ಸ್ಥಾನಗಳ ಪೈಕಿ, ಟಿಎಂಸಿ-ಕಾಂಗ್ರೆಸ್‌ ಮೈತ್ರಿಕೂಟವು 227 ಸ್ಥಾನಗಳನ್ನು ಗೆದ್ದಿತು. ಇದರಲ್ಲಿ, ಟಿಎಂಸಿ 184 ಸ್ಥಾನಗಳನ್ನು, ಕಾಂಗ್ರೆಸ್ 42 ಸ್ಥಾನಗಳನ್ನು ಪಡೆದುಕೊಂಡಿದ್ದವು. ಆಡಳಿತದಲ್ಲಿದ್ದ ಎಡರಂಗವು ಕೇವಲ 62 ಸ್ಥಾನಗಳನ್ನು ಮಾತ್ರವೇ ಗೆದ್ದಿತ್ತು. ಈ ಪೈಕಿ, ಸಿಪಿಐ(ಎಂ) 40 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. ಅಂದಿಗೆ, ಎಡಪಕ್ಷಗಳ ಆಡಳಿತ ಕೊನೆಗೊಂಡಿತು. ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಮೊದಲ ಮಹಿಳಾ ಮುಖ್ಯಮಂತ್ರಿಯಾದರು. ಅಂದಿನಿಂದ ಈವರೆಗೆ ಮಮತಾ ಅವರೇ ಬಂಗಾಳವನ್ನು ಮುನ್ನಡೆಸುತ್ತಿದ್ದಾರೆ.

2016ರ ವಿಧಾನಸಭಾ ಚುನಾವಣೆ ವೇಳೆಗೆ ಟಿಎಂಸಿ ಮತ್ತು ಕಾಂಗ್ರೆಸ್‌ ಮೈತ್ರಿಯಿಂದ ಹೊರಗುಳಿದಿದ್ದವು. ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸಿ ಅಧಿಕಾರ ಉಳಿಸಿಕೊಂಡರೆ, ಕಾಂಗ್ರೆಸ್‌ 44 ಸ್ಥಾನಗಳನ್ನು ಗೆದ್ದುಕೊಂಡಿತು. ಸಿಪಿಐ(ಎಂ) 26 ಸ್ಥಾನಗಳಿಗೆ ಮತ್ತೆ ಕುಸಿಯಿತು. 2021ರ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಎಡರಂಗಗಳು ಮೈತ್ರಿ ಮಾಡಿಕೊಂಡವು. ಆದರೂ, ಟಿಎಂಸಿ 213 ಸ್ಥಾನಗಳೊಂದಿಗೆ ಮೂರನೇ ಬಾರಿಗೆ ಅಧಿಕಾರ ಉಳಿಸಿಕೊಂಡರೆ, 2016ರಲ್ಲಿ 3 ಸ್ಥಾನಗಳನ್ನು ಮಾತ್ರ ಗೆದ್ದಿದ್ದ ಬಿಜೆಪಿ 77 ಸ್ಥಾನಗಳಿಗೆ ಜಿಗಿಯಿತು. ಕಾಂಗ್ರೆಸ್‌-ಎಡಪಕ್ಷಗಳು ಶೂನ್ಯ ಸಾಧನೆ ಮಾಡಿದವು.

ಕೇವಲ 10 ವರ್ಷಗಳಲ್ಲಿ ಎಡರಂಗವು ಆಡಳಿತದಿಂದ ಶೂನ್ಯಕ್ಕೆ ಕುಸಿದುಬಿದ್ದಿತು. ಈಗ, 2026ರ ನಿರ್ಣಾಯಕ ಚುನಾವಣೆ ಎದುರಾಗಿದೆ. ಎಡಪಂಥೀಯ ಪಕ್ಷಗಳು ತಮ್ಮ ಸ್ಥಾನ-ನೆಲೆಯನ್ನು ಗುರುತಿಸಿಕೊಳ್ಳಲು ಮತ್ತೊಂದು ರಾಜಕೀಯ ಪರೀಕ್ಷೆ ಎದುರಾಗಿದೆ.

ಬಂಗಾಳದ ಪ್ರಸ್ತುತ ರಾಜಕೀಯ ಸನ್ನಿವೇಶವು ಸಿದ್ಧಾಂತಕ್ಕಿಂತ ಪಕ್ಷದ ಪ್ರಾಬಲ್ಯ ಮತ್ತು ರಾಜಕೀಯ ನಿರೂಪಣೆಗಳ ಮೇಲೆ ರೂಪುಗೊಂಡಿದೆ. ರಾಜ್ಯದ ಜನರು ಸಿದ್ಧಾಂತವನ್ನು ಹೆಚ್ಚಾಗಿ ನೋಡುವುದಿಲ್ಲ. ಪಕ್ಷ ಮತ್ತು ಅದರ ಕೆಲಸ-ಭರವಸೆಗಳನ್ನು ಗಮನಿಸುತ್ತಾರೆ. ಅದರ ಮೇಲೆಯೇ ಮತ ಚಲಾಯಿಸುತ್ತಾರೆ ಎನ್ನುತ್ತಾರೆ ಆಡಮಾಸ್ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಸೌಮ್ಯದೀಪ್ ಚೌಧರಿ.

“ಎಡ ಪಕ್ಷಗಳ ಸೈದ್ಧಾಂತಿಕ ಆಕರ್ಷಣೆಯು ಅದರ ಆಡಳಿತ ಸಾಧನೆಗಳೊಂದಿಗೆ ಬೆಸೆದುಕೊಂಡಿದೆ. ವಿಶೇಷವಾಗಿ ಭೂಸುಧಾರಣೆಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಎಡಪಕ್ಷಗಳ ಸರ್ಕಾರವು ಜಾರಿಗೆ ತಂದಿದ್ದ ಭೂಸುಧಾರಣೆಗಳು ಗ್ರಾಮೀಣ ಬಂಗಾಳದಲ್ಲಿ ಜನಪ್ರಿಯತೆ ಗಳಿಸಿತ್ತು. ಅದರ ಆಧಾರದಲ್ಲಿಯೇ ದೀರ್ಘಕಾಲದವರೆಗೆ ಗ್ರಾಮೀಣ ಮತಬ್ಯಾಂಕ್‌ಅನ್ನು ಹೊಂದಿತ್ತು. ಆದರೆ, ನಂದಿಗ್ರಾಮದ ಘಟನೆಯು ಗ್ರಾಮೀಣ ಭಾಗದ ಮತಗಳನ್ನು ವಿಮುಖಗೊಳಿಸಿತು. ಈಗ, ಎಡಪಕ್ಷಗಳ ಸಿದ್ಧಾಂತಗಳು ಹೆಚ್ಚಾಗಿ ಕೋಲ್ಕತ್ತಾದಂತಹ ನಗರಗಳು, ಅಲ್ಲಿನ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ಸೀಮಿತವಾಗಿದೆ” ಎಂದು ಅವರು ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಬಿಜೆಪಿ ಕಡೆಗಣಿಸಿದ್ದ ಘೋಷ್‌ಗೆ ಮತ್ತೆ ಜೋಶ್‌!

ನಾಯಕತ್ವ ಮತ್ತು ಸಾಂಸ್ಥಿಕ ಶಿಸ್ತು ಒಂದು ಕಾಲದಲ್ಲಿ ಎಡಪಕ್ಷಗಳ ಅತಿದೊಡ್ಡ ಶಕ್ತಿಗಳಾಗಿದ್ದವು. ಆದರೆ, ಈಗ ನಾಯಕತ್ವ ಮತ್ತು ಶಿಸ್ತು – ಎರಡೂ ಗಣನೀಯವಾಗಿ ದುರ್ಬಲಗೊಂಡಿವೆ. ಪಕ್ಷಗಳು ಪ್ರಬಲ ನಾಯಕನನ್ನು ಗುರುತಿಸಲು ಹೆಣಗಾಡುತ್ತಿವೆ. ಸಮರ್ಥ ಯುವ ಸಂಘಟನೆ ಕಟ್ಟುವಲ್ಲಿಯೂ ವಿಫಲವಾಗಿವೆ. ಯುವಜನರನ್ನು ಸಂಘಟಿಸದೆ, ಪಕ್ಷವು ಮತ್ತೆ ಪ್ರವರ್ಧಮಾನಕ್ಕೆ ಬರುವುದು ಅಸಾಧ್ಯ ಎಂಬ ಅಭಿಪ್ರಾಯಗಳಿವೆ.

ಇತ್ತೀಚಿನ ಚುನಾವಣೆಗಳಲ್ಲಿ, ಎಡಪಕ್ಷಗಳು ಮಿನಾಕ್ಷಿ ಮುಖರ್ಜಿ, ದೀಪ್ಸಿತಾ ಧಾರ್ ಹಾಗೂ ಶ್ರೀಜನ್ ಭಟ್ಟಾಚಾರ್ಯರಂತಹ ಕೆಲವು ಯುವ ಐಕಾನ್‌ಗಳನ್ನು ಕಣಕ್ಕಿಳಿಸಿದವು. ಅವರೆಲ್ಲರೂ ವಿದ್ಯಾರ್ಥಿ ರಾಜಕೀಯದಿಂದ ಮುನ್ನೆಲೆಗೆ ಬಂದವರು. ಆದರೂ, ಇವರೂ ಕೂಡ ಮತದಾರರ ವಿಶಾಲ ವರ್ಗದ ಮೇಲೆ ಪರಿಣಾಮ ಬೀರಲಾಗಲಿಲ್ಲ. ಎಡಪಕ್ಷಗಳ ಕಳಪೆ ಪ್ರದರ್ಶನದಿಂದಾಗಿ ಕೆಲವು ನಿರಾಶೆಗೊಂಡ ಕೇಡರ್‌ಗಳು ಟಿಎಂಸಿ ಮತ್ತು ಬಿಜೆಪಿಯತ್ತ ವಲಸೆ ಹೋಗುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸಿದೆ.

ಆದಾಗ್ಯು, ಸ್ವಾತಂತ್ರ್ಯ ನಂತರದ ಬಂಗಾಳವು ಪ್ರಮುಖ ಮೂರು ಹಂತದ ರಾಜಕೀಯ ದೃವೀಕರಣವನ್ನು ಕಂಡಿದೆ. ಆರಂಭದಲ್ಲಿ ಬಂಗಾಳದ ಜನರು ಕಾಂಗ್ರೆಸ್‌ ಜೊತೆಗಿದ್ದರು, 1977ರ ಬಳಿಕ ಎಡಪಕ್ಷಗಳೊಂದಿಗೆ ದೃವೀಕರಣಗೊಂಡರು. ಪ್ರಸ್ತುತ, 2011ರಿಂದ ಟಿಎಂಸಿ ಜೊತೆಗೆ ಬೆಸೆದುಕೊಂಡಿದ್ದಾರೆ. ಇದೇ ಸಮಯದಲ್ಲಿ, ಬಿಜೆಪಿಯೂ ತನ್ನ ನೆಲೆಯನ್ನು ಬಲಪಡಿಸಿಕೊಂಡಿದೆ. ಈಗ ಟಿಎಂಸಿ ಮತ್ತು ಬಿಜೆಪಿ ನಡುವಿನ ನೇರ ಪೈಪೋಟಿಯ ಕಣವಾಗಿ ಬಂಗಾಳ ಕಾಣುತ್ತಿದೆ.

ಸದ್ಯ, 15 ವರ್ಷಗಳ ಟಿಎಂಸಿ ಆಡಳಿತವು ಆಡಳಿತ ವಿರೋಧಿ ಅಲೆಯನ್ನೂ ಕಾಣುತ್ತಿದೆ. ಈ ಅಲೆಯ ಮುಖ್ಯ ಫಲಾನುಭವಿ ಬಿಜೆಪಿಯೇ ಆಗಿದ್ದರೂ, ಎಡಪಕ್ಷಗಳು ಮತ್ತು ಕಾಂಗ್ರೆಸ್‌ ತಮ್ಮ ಮತ ಪಾಲನ್ನು ಸ್ವಲ್ಪ ಹೆಚ್ಚಿಸಿಕೊಳ್ಳಬಹುದು. ಆದರೆ, ಅದು ಇಂತಿಷ್ಟು ಸ್ಥಾನಗಳಾಗಿ ಕೈಗೂಡದೇ ಇರಬಹುದು ಎಂದು ಸೌಮ್ಯದೀಪ್ ಚೌಧರಿ ಹೇಳುತ್ತಾರೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್-ಎಡಪಕ್ಷಗಳು ಮೈತ್ರಿಯಲ್ಲಿ ಕಣಕ್ಕಿಳಿದರೆ, ಉತ್ತರ ಬಂಗಾಳ, ಮಾಲ್ಡಾ ಹಾಗೂ ಮುರ್ಷಿದಾಬಾದ್‌ನಲ್ಲಿ ಪಕ್ಷಗಳ ಮತ ಹಂಚಿಕೆಯ ಹೆಚ್ಚುವ ಸಾಧ್ಯತೆ ಇದೆ. ಆದರೆ, ಈ ಮೈತ್ರಿ ಸಾಧ್ಯತೆಯೇ ಇನ್ನೂ ಗೊಂದಲದಲ್ಲಿದೆ.

ಇದನ್ನೂ ಓದಿ ಉತ್ತರ ಪ್ರದೇಶ SIR | ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲೇ ಅಧಿಕ ಮತದಾರರ ಹೆಸರು ಡಿಲೀಟ್!

ಪ್ರಬಲವಾಗಿ ಅಖಾಡದಲ್ಲಿ ನಿಂತರೆ, ಪುನರಾಗಮನ ಅಸಾಧ್ಯವೇನೂ ಅಲ್ಲ. ರಾಜಕೀಯದಲ್ಲಿ ಪಕ್ಷಗಳು ಹಿಂದುಳಿಯುವುದು ಮತ್ತೆ ಮುನ್ನೆಲೆಗೆ ಬರುವುದು ಸಾಮಾನ್ಯ. ಅದು ಕಳೆದ ವರ್ಷ ನಡೆದ ದೆಹಲಿ ಚುನಾವಣೆಯಲ್ಲಿ ಸ್ಪಷ್ಟವಾಗಿದೆ. 29 ವರ್ಷಗಳ ಬಳಿಕ, ಬಿಜೆಪಿ ಮತ್ತೆ ದೆಹಲಿ ಗದ್ದುಗೆ ಹಿಡಿದಿದೆ. ಅಂತೆಯೇ, ಎಡಪಕ್ಷಗಳಿಗೂ ಬಂಗಾಳದಲ್ಲಿ ಅವಕಾಶವಿದೆ. ಎಡಪಕ್ಷಗಳು 2026ರ ಚುನಾವಣೆಯಲ್ಲಿ ಪ್ರಬಲ ಸದ್ದಿನೊಂದಿಗೆ ಚುನಾವಣಾ ರಂಗಕ್ಕೆ ಇಳಿದರೆ, ಈ ಬಾರಿಯಲ್ಲದಿದ್ದರೂ, ಮುಂದಿನ ಚುನಾವಣೆಗಳಲ್ಲಾದರೂ, ಗಮನಾರ್ಹ ಸಾಧನೆ ಮಾಡಬಹುದು.

ಈ ಬಾರಿಯ ಚುನಾವಣೆಯಲ್ಲಿ ಎಡರಂಗವು ಸುಮಾರು 5-10% ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾದರೆ, ಅದು ಪುನರುಜ್ಜೀವನಕ್ಕೆ ಅಡಿಗಲ್ಲಾಗುತ್ತದೆ. ಮುಂದಿನ ದಿನಗಳಲ್ಲಿ ಪಕ್ಷಗಳು ಮತ್ತೆ ಪ್ರವರ್ಧಮಾನಕ್ಕೆ ಬರಲು ಸಾಧ್ಯವಾಗುತ್ತದೆ. ಪಕ್ಷಗಳು ಈಗಲಾದರೂ, ಪುಟಿದೇಳಲು ಉತ್ತಮ ತಂತ್ರಗಳೊಂದಿಗೆ ಕಣಕ್ಕಿಳಿಯಬೇಕಿದೆ!.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...