ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದಾಗ್ಯೂ, ಚುನಾವಣಾ ಆಯೋಗವು ನ್ಯಾಯಾಂಗ ಅಧಿಕಾರಿಗಳಿಗೆ ತರಬೇತಿ ಮಾಡ್ಯೂಲ್ಅನ್ನು ಅನುಸರಿಸುವಂತೆ ಹೇಳಿದೆ. ಇದು ಪ್ರಕ್ರಿಯೆಯಲ್ಲಿ ಆಯೋಗದ ಧೋರಣೆಯನ್ನು ಹೇರುವ ಹುನ್ನಾರವಾಗಿದೆ ಎಂದು ಮಮತಾ ಬ್ಯಾನರ್ಜಿ ಅವರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ತಿಳಿಸಿದೆ.
ಕಳೆದ ವಾರ (ಫೆ.20), ಎಸ್‌ಐಆರ್ ಪ್ರಕ್ರಿಯೆ ವಿಚಾರದಲ್ಲಿ ಚುನಾವಣಾ ಆಯೋಗ ಮತ್ತು ಬಂಗಾಳ ಸರ್ಕಾರದ ನಡುವಿನ ಘರ್ಷಣೆಯನ್ನು ಗಮನಿಸಿದ ಸುಪ್ರೀಂ ಕೋರ್ಟ್, ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೆರವು ನೀಡಲು ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸುವಂತೆ ಕೋಲ್ಕತ್ತಾ ಹೈಕೋರ್ಟ್‌ಗೆ ಸೂಚಿಸಿತ್ತು. ನ್ಯಾಯಾಂಗ ಅಧಿಕಾರಿಗಳು ಮತದಾರರು ಸಲ್ಲಿಸಿದ ಕ್ಲೈಮ್‌ಗಳು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಬಹುದು ಎಂದೂ ಹೇಳಿತ್ತು. ಆದಾಗ್ಯೂ, ಆಯೋಗ ಮತ್ತು ಸರ್ಕಾರದ ನಡುವಿನ ಘರ್ಷಣೆ ಮುಂದುವರೆದಿದೆ.
ಬಂಗಾಳ ಎಸ್‌ಐಆರ್ ಪ್ರಕ್ರಿಯೆ ವಿಚಾರವಾಗಿ ಶುಕ್ರವಾರ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ವಿಚಾರಣೆ ನಡೆಸಿದೆ. ಈ ವೇಳೆ, ಬಂಗಾಳ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, “ಚುನಾವಣಾ ಆಯೋಗವು ನ್ಯಾಯಾಂಗ ಅಧಿಕಾರಿಗಳಿಗೆ ನಿರ್ದಿಷ್ಟ ತರಬೇತಿ ಮಾಡ್ಯೂಲ್ಅನ್ನು ಅನುಸರಿಸಲು ನಿರ್ದೇಶನಗಳನ್ನು ನೀಡಿದೆ” ಎಂದು ಆರೋಪಿಸಿದ್ದಾರೆ.
“ಎಸ್‌ಐಆರ್ ಪ್ರಕ್ರಿಯೆಯಲ್ಲಿ ವಿಚಿತ್ರವಾದದ್ದು ನಡೆದಿದೆ. ಎಲ್ಲ ವಿಧಾನಗಳನ್ನು ಮುಖ್ಯ ನ್ಯಾಯಮೂರ್ತಿ (ಕಲ್ಕತ್ತಾ ಹೈಕೋರ್ಟ್) ಮತ್ತು ಸಮಿತಿಯು ಇತ್ಯರ್ಥಪಡಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದರೂ, ಆಯೋಗವು ನ್ಯಾಯಾಂಗದ ಅಧಿಕಾರಿಗಳಿಗೆ ನಿರ್ದಿಷ್ಟ ಮಾಡ್ಯೂಲ್‌ಅನ್ನು ಪಾಲಿಸುವಂತೆ ನಿರ್ದೇಶನ ನೀಡಿದೆ. ಅವರು ಇದನ್ನು ಸ್ವೀಕರಿಸಬೇಕು” ಎಂದು ಸಿಬಲ್ ವಾದಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, “ನಾವು ನಮ್ಮ ನ್ಯಾಯಾಂಗ ಅಧಿಕಾರಿಗಳ ಬಗ್ಗೆ ಚೆನ್ನಾಗಿ ಅರಿತಿದ್ದೇವೆ. ಅವರು ಯಾವುದರಿಂದಲೂ ಪ್ರಭಾವಿತರಾಗುವುದಿಲ್ಲ” ಎಂದಿದೆ.
“ಈಗ ನ್ಯಾಯಾಂಗ ಅಧಿಕಾರಿಗಳನ್ನು ಅನುಮಾನಿಸಬೇಡಿ, ಅವರು ನಿರ್ಧರಿಸುತ್ತಾರೆ. ಇದಕ್ಕೆ ಅಂತ್ಯ ಹಾಡಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಕಾಂತ್ ಹೇಳಿದ್ದಾರೆ. ನ್ಯಾಯಮೂರ್ತಿ ಬಾಗ್ಚಿ ಅವರು, “ಚುನಾವಣಾ ಆಯೋಗವಲ್ಲದೆ, ಬೇರೆ ಯಾರು ತರಬೇತಿ ನೀಡುತ್ತಾರೆ? ಯಾವ ದಾಖಲೆಗಳನ್ನು ನೋಡಬೇಕೆಂದು ನಾವು ಸ್ಪಷ್ಟಪಡಿಸಿದ್ದೇವೆ. ನಮ್ಮ ನಿರ್ದೇಶನಗಳು ಸ್ಪಷ್ಟವಾಗಿವೆ; ಅವುಗಳನ್ನು ಅತಿಕ್ರಮಿಸಲು ಸಾಧ್ಯವಿಲ್ಲ” ಎಂದಿದ್ದಾರೆ.
ನಂತರ ಸಿಬಲ್ ಅವರು, “ಎಸ್‌ಐಆರ್ ಪರಿಶೀಲನೆಗಾಗಿ ನಿವಾಸ ಪ್ರಮಾಣೀಕರಣವನ್ನು ಸ್ವೀಕರಿಸಬಾರದೆಂದು ಚುನಾವಣಾ ಆಯೋಗವು ನ್ಯಾಯಾಂಗ ಅಧಿಕಾರಿಗಳಿಗೆ ಸೂಚಿಸಿದೆ” ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, “ನಮ್ಮ ಆದೇಶಗಳು ಅಂತಹ ದಾಖಲೆಯನ್ನು ಒಳಗೊಂಡಿದ್ದರೆ, ಅದನ್ನು ಪರಿಶೀಲಿಸಲಾಗುತ್ತದೆ” ಎಂದು ಹೇಳಿದೆ.




