ಇಲ್ಲಿನ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ವೈದ್ಯ ವಿದ್ಯಾರ್ಥಿನಿಯ ಗುರುತನ್ನು ಬಹಿರಂಗಪಡಿಸಿದ ಆರೋಪದ ಮೇಲೆ ಕೋಲ್ಕತ್ತ ಪೊಲೀಸರು ಬಿಜೆಪಿಯ ಮಾಜಿ ಸಂಸದೆ ಲಾಕೆಟ್ ಚಟರ್ಜಿ ಮತ್ತು ಇಬ್ಬರು ವೈದ್ಯರಿಗೆ ಸಮನ್ಸ್ ಜಾರಿ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಬಿಜೆಪಿ ಮಾಜಿ ಸಂಸದೆ ಲಾಕೆಟ್ ಚಟರ್ಜಿ, ಖ್ಯಾತ ಹೃದ್ರೋಗ ತಜ್ಞ ಡಾ.ಕುನಾಲ್ ಸರ್ಕಾ ರ್ ಮತ್ತು ಡಾ. ಸುವರ್ಣ ಗೋಸ್ವಾಮಿ ಅವರಿಗೆ ಸಮನ್ಸ್ ನೀಡಲಾಗಿದೆ. ಈ ಮೂವರಲ್ಲದೇ ಘಟನೆಯ ಬಗ್ಗೆ ತಪ್ಪು ಮಾಹಿತಿ ಹರಡಿದ 57 ಮಂದಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಭಾನುವಾರ ಮಧ್ಯಾಹ್ನ 3 ಗಂಟೆಗೆ ಲಾಲ್ ಬಜಾರ್‌ನಲ್ಲಿರುವ ಕೋಲ್ಕತ್ತ ಪೊಲೀಸ್ ಪ್ರಧಾನ ಕಚೇರಿಯ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಡಾ.ಕುನಾಲ್ ಸರ್ಕಾರ್ ಮತ್ತು ಡಾ.ಸುವರ್ಣ ಗೋಸ್ವಾಮಿ ಅವರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯಪಾಲರ ಕಚೇರಿಯು ಕರ್ನಾಟಕಕ್ಕೆ ಮಾಡುತ್ತಿರುವ ಅವಮಾನವನ್ನು ಈ ರಾಜ್ಯ ಸಹಿಸಲ್ಲ
‘ಲಾಲ್ ಬಜಾರ್‌ನಲ್ಲಿರುವ ಪ್ರಧಾನ ಕಚೇರಿಯ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಪೊಲೀಸರಿಂದ ಸಮನ್ಸ್ ನೀಡಿದ್ದಾರೆ’ ಎಂದು ಡಾ. ಸರ್ಕಾರ್ ತಿಳಿಸಿದ್ದಾರೆ.
ಪಿಟಿಐ ಜೊತೆ ಮಾತನಾಡಿದ ಡಾ. ಗೋಸ್ವಾಮಿ, ‘ನನಗೆ ಯಾವುದೇ ಸಮನ್ಸ್ ಬಂದಿಲ್ಲ. ಪ್ರಕರಣದ ತನಿಖೆ ನಡೆಯುತ್ತಿರುವಾಗ ಕೋಲ್ಕತ್ತ ಪೊಲೀಸರು ನನಗೆ ಏಕೆ ಸಮನ್ಸ್ ನೀಡುತ್ತಾರೆ ಎಂಬುದು ತಿಳಿದಿಲ್ಲ. ನಾನು ತನಿಖೆಗೆ ಸಹಕರಿಸುತ್ತೇನೆ. ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿಲ್ಲ. ಯಾವುದೇ ವದಂತಿಯನ್ನು ನಾನು ಹಬ್ಬಿಸಿಲ್ಲ’ ಎಂದು ತಿಳಿಸಿದ್ದಾರೆ.
ಮಾಜಿ ಸಂಸದೆ ಚಟರ್ಜಿ ಕೂಡ, ನನಗೆ ಯಾವುದೇ ಸಮನ್ಸ್ ಬಂದಿಲ್ಲ ಎಂದು ಹೇಳಿದ್ದಾರೆ.





