ವಿಶ್ವದ ಅತಿ ಹೆಚ್ಚು ಜನನಿಬಿಡ ಹತ್ತು ನಗರಗಳಲ್ಲಿ ಬೆಂಗಳೂರು ಕೂಡ ಒಂದು ಎಂದು ವಿಶ್ವಸಂಸ್ಥೆಯ ಹೊಸ ವರದಿ ಹೇಳುತ್ತದೆ. ಈ ವರದಿ ಪ್ರಕಾರ ವಿಶ್ವದ 33 ಮೆಗಾಸಿಟಿಗಳಲ್ಲಿ ಭಾರತದ ಐದು ನಗರಗಳಿವೆ, ಚೀನಾದ ನಾಲ್ಕು ನಗರಗಳಿವೆ. ಹಾಗೆಯೇ ವಿಶ್ವದ 50 ಅತಿ ಹೆಚ್ಚು ಜನನಿಬಿಡ ನಗರಗಳಲ್ಲಿ, 12 ಭಾರತದ ನಗರಗಳಾಗಿವೆ.
ಬ್ರೆಜಿಲ್‌ನಲ್ಲಿ ಯುಎನ್ ಹವಾಮಾನ ಶೃಂಗಸಭೆ ನಡೆಯುತ್ತಿದ್ದು ವಿಶ್ವದಲ್ಲಿ ಜನಸಂಖ್ಯೆ ಹೆಚ್ಚಳ ಮತ್ತು ಇಂಗಾಲದ ಹೊರಸೂಸುವಿಕೆ ಹೆಚ್ಚಳದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲೆ ಈ ವರದಿ ಬಹಿರಂಗವಾಗಿದೆ.
ಇದನ್ನು ಓದಿದ್ದೀರಾ? ಬಿಬಿಎಂಪಿ ಯುಗಾಂತ್ಯ: ಏನಿದು ಗ್ರೇಟರ್ ಬೆಂಗಳೂರು?
ಮುಂಬೈ ಪ್ರತಿ ಚದರ ಕಿ.ಮೀ.ಗೆ ಸುಮಾರು 30,000 ಜನಸಂಖ್ಯಾ ಸಾಂದ್ರತೆ ಹೊಂದಿದ್ದು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹಾಗೆಯೇ ಸೂರತ್, ಅಹಮದಾಬಾದ್ ಮತ್ತು ಬೆಂಗಳೂರು ಪ್ರತಿ ಚದರ ಕಿ.ಮೀ.ಗೆ 20,000ಕ್ಕಿಂತ ಹೆಚ್ಚು ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದ್ದು ಟಾಪ್ 10 ನಗರಗಳ ಪಟ್ಟಿಯಲ್ಲಿ ಸೇರಿವೆ. ಒಂದು ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ 33 ಮೆಗಾಸಿಟಿಗಳಲ್ಲಿ ಭಾರತದ ಐದು ನಗರಗಳಾದ ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಇದೆ.
ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಜಗತ್ತು ಹೆಚ್ಚು ನಗರೀಕರಣಗೊಳ್ಳುತ್ತಿದೆ. ಹಾಗೆಯೇ ಈ ನಗರಗಳು 8.2 ಬಿಲಿಯನ್ ಅಂದರೆ 820 ಕೋಟಿ ಜಾಗತಿಕ ಜನಸಂಖ್ಯೆಯಲ್ಲಿ ಶೇಕಡ 45ರಷ್ಟು ಜನರ ನೆಲೆಯಾಗಿವೆ. 2050ರವರೆಗೆ ಜಾಗತಿಕ ಜನಸಂಖ್ಯಾ ಬೆಳವಣಿಗೆಯ ಮೂರನೇ ಎರಡರಷ್ಟು ಭಾಗ ನಗರಗಳಲ್ಲಿ ಸಂಭವಿಸುವ ನಿರೀಕ್ಷೆಯಿದೆ. ಉಳಿದ ಮೂರನೇ ಒಂದು ಭಾಗದಷ್ಟು ಪಟ್ಟಣಗಳಲ್ಲಿ ಸಂಭವಿಸುವ ನಿರೀಕ್ಷೆಯಿದೆ.
ಸುಮಾರು 4.2 ಕೋಟಿ ಜನಸಂಖ್ಯೆ ಹೊಂದಿರುವ ಜಕಾರ್ತಾ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ. ಇದರ ನಂತರದ ಸ್ಥಾನದಲ್ಲಿ 3.7 ಕೋಟಿ ಜನಸಂಖ್ಯೆ ಹೊಂದಿರುವ ಢಾಕಾ ಮತ್ತು 3.3 ಕೋಟಿ ಜನ ಸಂಖ್ಯೆ ಹೊಂದಿರುವ ಟೋಕಿಯೊ ಇವೆ. ಮೊದಲ ಹತ್ತು ಸ್ಥಾನಗಳಲ್ಲಿ ಭಾರತ ನವದೆಹಲಿ ಮತ್ತು ಕೋಲ್ಕತ್ತಾ ಇದೆ.
ಭಾರತ, ನೈಜೀರಿಯಾ, ಪಾಕಿಸ್ತಾನ, ಕಾಂಗೋ, ಈಜಿಪ್ಟ್, ಬಾಂಗ್ಲಾದೇಶ ಮತ್ತು ಇಥಿಯೋಪಿಯಾಗಳು 2025 ಮತ್ತು 2050ರ ನಡುವೆ 50 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆ ಹೊಂದುವ ನಿರೀಕ್ಷೆಯಿದೆ. ಈ ಅವಧಿಯಲ್ಲೆ ಜಾಗತಿಕವಾಗಿ ನಗರವಾಸಿಗಳ ಸಂಖ್ಯೆಯಲ್ಲಿ ಅಂದಾಜು 98.6 ಕೋಟಿ ಹೆಚ್ಚಳವಾಗುವ ಸಾಧ್ಯತೆಯಿದೆ.
ಆದರೆ ಎಲ್ಲಾ ನಗರಗಳಲ್ಲಿ ಜನಸಂಖ್ಯಾ ಬೆಳವಣಿಗೆ ಏಕರೂಪವಾಗಿ ನಡೆಯುತ್ತಿಲ್ಲ ಎಂಬುದನ್ನೂ ವರದಿ ಹೇಳುತ್ತದೆ. 2015 ಮತ್ತು 2025ರ ನಡುವೆ ಭಾರತದ ನಗರಗಳಲ್ಲಿ ಕಾಲು ಭಾಗಕ್ಕಿಂತ ಹೆಚ್ಚು ನಗರಗಳಲ್ಲಿ ಜನಸಂಖ್ಯೆ ಕಡಿಮೆಯಾಗಿದೆ. ಆದರೂ ದೇಶದ ಒಟ್ಟು ಜನಸಂಖ್ಯೆಯು ವರ್ಷಕ್ಕೆ ಸರಾಸರಿ ಶೇ.1ರಷ್ಟು ಹೆಚ್ಚಾಗಿದೆ. ನೈಸರ್ಗಿಕವಾಗಿ ಜನನ ಪ್ರಮಾಣ ಕುಸಿತ ಮತ್ತು ದೊಡ್ಡ ಆರ್ಥಿಕ ಕೇಂದ್ರಗಳ ಕಡೆಗೆ ವಲಸೆ ಹೋಗುವುದರಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ನಗರಗಳಲ್ಲಿ ಜನಸಂಖ್ಯೆ ಕುಸಿತವಾಗಿದೆ.





