ಉತ್ತರ ಪ್ರದೇಶದಲ್ಲಿ ಚುನಾವಣಾ ಆಯೋಗವು ನಡೆಸಿದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಬಳಿಕ ಕರಡು ಮತದಾರರ ಪಟ್ಟಿಯಿಂದ ಬರೋಬ್ಬರಿ 2.89 ಕೋಟಿ ಮತದಾರರ ಹೆಸರನ್ನು ಕೈಬಿಡಲಾಗಿದೆ. ಆಯೋಗದ ಈ ನಡೆಗೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ‘ದೊಡ್ಡ ಪಿತೂರಿ’ ಎಂದು ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದಿವೆ.
ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರಾಯ್, “ಸುಮಾರು 3 ಕೋಟಿ ಮತದಾರರ ಹೆಸರನ್ನು ತೆಗೆದುಹಾಕಿರುವುದು ದೊಡ್ಡ ಪಿತೂರಿಯಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು” ಎಂದು ಆಗ್ರಹಿಸಿದ್ದಾರೆ.
ಇತ್ತ ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ, ಈ ಕ್ರಮವನ್ನು ‘ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಜರೆದಿದ್ದಾರೆ. ಸಮಾಜವಾದಿ ಪಕ್ಷವು ಆಯೋಗದ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸಿದ್ದು, ಪಿಡಿಎ (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ವರ್ಗದ ಮತದಾರರನ್ನು ಗುರಿಯಾಗಿಸಿ ಪಟ್ಟಿಯಿಂದ ಹೊರಗಿಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ದೇವರಾಜ ಅರಸು ದಾಖಲೆ ದಾಟಿದರೇ ಸಿದ್ದರಾಮಯ್ಯ?
ಈ ಕುರಿತು ಸ್ಪಷ್ಟನೆ ನೀಡಿರುವ ಉತ್ತರ ಪ್ರದೇಶ ಮುಖ್ಯ ಚುನಾವಣಾ ಅಧಿಕಾರಿ ನವದೀಪ್ ರಿನ್ವಾ, “ಸ್ವೀಕೃತವಾದ ಒಟ್ಟು ಫಾರ್ಮ್‌ಗಳ ಪರಿಶೀಲನೆ ನಂತರ, ಮೃತಪಟ್ಟವರು (46.2 ಲಕ್ಷ), ಶಾಶ್ವತವಾಗಿ ಸ್ಥಳಾಂತರಗೊಂಡವರು ಅಥವಾ ವಿಳಾಸದಲ್ಲಿ ಪತ್ತೆಯಾಗದವರು (2.17 ಕೋಟಿ) ಹಾಗೂ ಒಂದೇ ವ್ಯಕ್ತಿಯ ಹೆಸರು ಹಲವೆಡೆ ನೊಂದಣಿಯಾಗಿರುವ (25.5 ಲಕ್ಷ) ಕಾರಣಗಳಿಂದಾಗಿ ಒಟ್ಟು 2.89 ಕೋಟಿ ಹೆಸರುಗಳನ್ನು ಕರಡು ಪಟ್ಟಿಯಿಂದ ನಿಯಮಾನುಸಾರ ತೆಗೆದುಹಾಕಲಾಗಿದೆ,” ಎಂದು ತಿಳಿಸಿದ್ದಾರೆ.
ಕರಡು ಪಟ್ಟಿಯ ಕುರಿತು ಆಕ್ಷೇಪಣೆ ಸಲ್ಲಿಸಲು 2026ರ ಫೆಬ್ರವರಿ 6ರವರೆಗೆ ಕಾಲಾವಕಾಶ ನೀಡಲಾಗಿದೆ.





