ಬಿಹಾರ ವಿಧಾನಸಭಾ ಚುನಾವಣೆಯ ಮುಗಿದಿದೆ. ಫಲಿತಾಂಶ ಹೊರಬಿದ್ದು, ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಅಭೂತಪೂರ್ವ ಗೆಲುವು ಸಾಧಿಸಿದೆ. 243 ಕ್ಷೇತ್ರಗಳ ಪೈಕಿ 202 ಸ್ಥಾನಗಳನ್ನು ಎನ್‌ಡಿಎ ಗೆದ್ದಿದೆ. ಇದರಲ್ಲಿ, 89 ಸ್ಥಾನಗಳನ್ನು ಗೆದ್ದ ಬಿಜೆಪಿ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿಯ ಶಾಸಕರಲ್ಲಿ ಬರೋಬ್ಬರಿ 43 ಮಂದಿ ಕ್ರಿಮಿನಲ್ ಪ್ರಕರಣಗಲ್ಲಿ ಆರೋಪಿಗಳೂ ಆಗಿದ್ದಾರೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಶಾಸಕರ ಅಫಿಡವಿಟ್‌ಗಳನ್ನು ವಿಶ್ಲೇಷಿಸಿದೆ. ಶಾಸಕರ ವಿರುದ್ಧದ ಪ್ರಕರಣಗಳ ವಿಶ್ಲೇಷಣೆಯನ್ನು ನಡೆಸಿದೆ. ಬಿಹಾರದ ಒಟ್ಟು ಶಾಸಕರಲ್ಲಿ ಅರ್ಧಕ್ಕಿಂತ ಹೆಚ್ಚು ಶಾಸಕರು ಅಂದರೆ, ಒಟ್ಟು 243 ಶಾಸಕರಲ್ಲಿ 130 ಮಂದಿ ಕ್ರಿಮಿನಲ್ ಆರೋಪಿಗಳಾಗಿದ್ದಾರೆ. 6 ಶಾಸಕರು ಕೊಲೆ ಪ್ರಕರಣ ಮತ್ತು 19 ಶಾಸಕರು ಕೊಲೆ ಯತ್ನ ಪ್ರಕರಣಗಳಲ್ಲಿ ಆರೋಪಿಗಳಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 9 ಮಂದಿ ಆರೋಪಿಗಳಾಗಿದ್ದಾರೆ.
ಇದರಲ್ಲಿ ಬಿಜೆಪಿಯದ್ದೇ ಸಿಂಹಪಾಲು. ಬಿಜೆಪಿಯ 43, ಜೆಡಿಯುನ 85 ಶಾಸಕರಲ್ಲಿ 23, ಆರ್‌ಜೆಡಿಯ 25 ಎಂಎಲ್‌ಎಗಳಲ್ಲಿ 14, ಎಲ್‌ಜೆಪಿಯ 19 ಶಾಸಕರಲ್ಲಿ 10, ಕಾಂಗ್ರೆಸ್‌ನ 6 ಮಂದಿಯಲ್ಲಿ 3, ಎಐಎಂಐಎಂನ 5 ಶಾಸಕರಲ್ಲಿ ನಾಲ್ವರು, ಆರ್‌ಎಲ್‌ಎಂನ 4 ಮಂದಿಯಲ್ಲಿ 1, ಸಿಪಿಐ(ಎಂಎಲ್)ಲಿಬರೇಶನ್‌ನ 2ರಲ್ಲಿ 1, ಸಿಪಿಎಂ, ಐಐಪಿ ಹಾಗೂ ಬಿಎಸ್‌ಪಿಯ ತಲಾ ಒಬ್ಬರು ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.
2020ರಲ್ಲಿ 123 ಮಂದಿ, ಅಂದರೆ, 51% ಮಂದಿ ಕ್ರಿಮಿನಲ್ ಆರೋಪಿಗಳಿದ್ದರು. ಈ ಬಾರಿ 130 ಮಂದಿ ಆರೋಪಿಗಳಿಗೆ ಏರಿಕೆಯಾಗಿದೆ.
ಈ ಲೇಖನ ಓದಿದ್ದೀರಾ?: ʼವಂದೇ ಮಾತರಂ’ವಿವಾದ; ಪರಿವಾರ- ಪ್ರಧಾನಿ ಪೋಣಿಸಿದ ಸುಳ್ಳುಗಳ ಬೊಂತೆ
ಇನ್ನು, ಒಟ್ಟು ಶಾಸಕರಲ್ಲಿ ಬರೋಬ್ಬರಿ 90% ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ. ಈ 90% ಕೋಟ್ಯಾಧಿಪತಿಗಳು ಸರಾಸರಿ 9.02 ಕೋಟಿ ರೂ. ಆಸ್ತಿ ಹೊಂದಿದ್ದಾರೆ.
ಶಿಕ್ಷಣದ ವಿಚಾರವಾಗಿ ನೋಡಿದರೆ, ಒಟ್ಟು ಶಾಸಕರಲ್ಲಿ 35% ಶಾಸಕರು ಐದನೇ ಮತ್ತು ಹನ್ನೆರಡನೇ ತರಗತಿಯ ನಡುವೆ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿದ್ದಾಗಿ ಘೋಷಿಸಿಕೊಂಡಿದ್ದಾರೆ. 60% ಶಾಸಕರು ಪದವೀಧರರು ಅಥವಾ ಅದಕ್ಕಿಂತ ಉನ್ನತ ಶಿಕ್ಷಣ ಪಡೆದಿದ್ದಾರೆ. ಐದು ಮಂದಿ ಡಿಪ್ಲೊಮಾ ಪಡೆದಿದ್ದರೆ, ಏಳು ಮಂದಿ ತಾವು ಸಾಕ್ಷರರು ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ, ಕೇವಲ 12% ಮಾತ್ರವೇ ಮಹಿಳಾ ಶಾಸಕರಿದ್ದಾರೆ.




