ಬಿಹಾರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆಯುವ ಸಾಧ್ಯತೆಯಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಇದು ರಾಜ್ಯದ ಉನ್ನತ ನಾಯಕತ್ವದಲ್ಲಿ ಬದಲಾವಣೆಗೆ ನಾಂದಿ ಹಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ಮೂಲಗಳ ಪ್ರಕಾರ, ನಿತೀಶ್ ಕುಮಾರ್ ಅವರ ರಾಜ್ಯಸಭಾ ಪ್ರವೇಶಕ್ಕಾಗಿ ನಾಮಪತ್ರಗಳನ್ನು ಸಿದ್ಧಪಡಿಸಲಾಗಿದ್ದು, ಕೇವಲ ಮುಖ್ಯಮಂತ್ರಿಯವರ ಸಹಿಯಷ್ಟೇ ಬಾಕಿ ಇದೆ. ಅವರು ಮಾರ್ಚ್ 5ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಬೆಳವಣಿಗೆಯು ಜೆಡಿಯುನಲ್ಲಿ ಬಿರುಸಿನ ಚಟುವಟಿಕೆಗಳಿಗೆ ಕಾರಣವಾಗಿದೆ. ನಿತೀಶ್ ನಾಮನಿರ್ದೇಶನಕ್ಕೆ ಅಗತ್ಯವಿರುವ ಎಲ್ಲ ಔಪಚಾರಿಕತೆಗಳನ್ನು ಪಕ್ಷವು ಪೂರ್ಣಗೊಳಿಸಿದ್ದು, ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
ರಾಜ್ಯಸಭಾ ಚುನಾವಣೆಯ ವದಂತಿಗಳ ನಡುವೆಯೇ ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಝಾ ಅವರು ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿ ಸುಮಾರು ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ಸುದೀರ್ಘ ಸಭೆಯು ಬೃಹತ್ ರಾಜಕೀಯ ತಂತ್ರಗಾರಿಕೆಯೊಂದರ ಸುಳಿವು ನೀಡಿದೆ. ಇದರ ಬೆನ್ನಲ್ಲೇ ಕೇಂದ್ರ ಸಚಿವ ಲಲನ್ ಸಿಂಗ್ ಅವರು ನಾಳೆ ಬೆಳಗ್ಗೆ ದೆಹಲಿಯಿಂದ ಪಾಟ್ನಾಗೆ ಆಗಮಿಸುತ್ತಿರುವುದು, ಪಕ್ಷದೊಳಗಿನ ರಾಜಕೀಯ ಚರ್ಚೆಗಳನ್ನು ಮತ್ತಷ್ಟು ತೀವ್ರಗೊಳಿಸಿದೆ.
ಇದನ್ನು ಓದಿದ್ದೀರಾ? ಮೊದಲ ಬಾರಿಗೆ ರಣಜಿ ಟ್ರೋಫಿ ಎತ್ತಿ ಹಿಡಿದ ಜಮ್ಮು ಕಾಶ್ಮೀರ; ತವರಿನಲ್ಲಿ ಕರ್ನಾಟಕಕ್ಕೆ ನಿರಾಸೆ
ನಿತೀಶ್ ಕುಮಾರ್ ರಾಜ್ಯಸಭೆಗೆ ತೆರಳಿದರೆ, ಬಿಹಾರದಲ್ಲಿ ಹೊಸ ಮುಖ್ಯಮಂತ್ರಿಯ ನೇಮಕಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಇಂತಹ ಸನ್ನಿವೇಶ ನಿರ್ಮಾಣವಾದರೆ ಬಿಜೆಪಿ ಮುಖ್ಯಮಂತ್ರಿ ಸ್ಥಾನದ ಮೇಲೆ ಹಕ್ಕು ಸಾಧಿಸುವ ಸಾಧ್ಯತೆಯಿದೆ, ಇದು ರಾಜ್ಯದಲ್ಲಿ ಮಹತ್ವದ ರಾಜಕೀಯ ಬದಲಾವಣೆಗೆ ಕಾರಣವಾಗಲಿದೆ ಎಂದು ಮೂಲಗಳು ಸೂಚಿಸಿವೆ.
ರಾಜ್ಯಸಭೆಗೆ ರಾಮನಾಥ್ ಠಾಕೂರ್ ಅವರ ಆಯ್ಕೆ ಬಹುತೇಕ ಖಚಿತವಾಗಿದ್ದರೂ, ಜೆಡಿಯುನ ಎರಡನೇ ಅಭ್ಯರ್ಥಿಯ ಹೆಸರು ಇನ್ನೂ ಅಂತಿಮಗೊಂಡಿಲ್ಲ. ಇದರಿಂದಾಗಿ ತೀವ್ರ ಕುತೂಹಲ ಮುಂದುವರಿದಿದೆ.
ಬದಲಾಗುತ್ತಿರುವ ರಾಜಕೀಯ ಸನ್ನಿವೇಶದ ಮತ್ತೊಂದು ಸೂಚನೆಯೆಂಬಂತೆ, ಮಾರ್ಚ್ 8 ರಿಂದ ಆರಂಭವಾಗಬೇಕಿದ್ದ ನಿತೀಶ್ ಕುಮಾರ್ ಅವರ ‘ಸಮೃದ್ಧಿ ಯಾತ್ರೆ’ಯ ಮುಂದಿನ ಹಂತವನ್ನು ಮುಂದೂಡುವ ಸಾಧ್ಯತೆಯಿದೆ. ಪ್ರವಾಸದ ಸಂಭವನೀಯ ಮುಂದೂಡಿಕೆಯು, ಮುಖ್ಯಮಂತ್ರಿಗಳು ರಾಜ್ಯಸಭೆಯ ಮೂಲಕ ರಾಷ್ಟ್ರೀಯ ರಾಜಕಾರಣಕ್ಕೆ ತೆರಳಲು ಸಿದ್ಧರಾಗುತ್ತಿದ್ದಾರೆ ಎಂಬ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಈ ಕುರಿತು ಪಕ್ಷದ ನಾಯಕತ್ವದಿಂದ ಇದುವರೆಗೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಆದರೆ, ನಾಮಪತ್ರಗಳು ಬಹುತೇಕ ಸಿದ್ಧವಾಗಿರುವುದು ಹಾಗೂ ಹಿರಿಯ ನಾಯಕರು ಸತತ ಸಭೆಗಳಲ್ಲಿ ನಿರತರಾಗಿರುವುದನ್ನು ಗಮನಿಸಿದರೆ, ಬಿಹಾರದ ರಾಜಕೀಯವು ಮಹತ್ವದ ತಿರುವು ಪಡೆಯಲು ಸಜ್ಜಾಗಿರುವುದು ಸ್ಪಷ್ಟವಾಗಿದೆ.
ಹದ್ದುಗಣ್ಣಿಟ್ಟು ಸಿಎಂ ಸ್ಥಾನ ಕಸಿದುಕೊಂಡ ಬಿಜೆಪಿ
ಮೈತ್ರಿ ಸರ್ಕಾರದೊಳಗೆಯೇ ಕುಳಿತು, ಹದ್ದುಗಣ್ಣಿಟ್ಟು ಕಾಯುತ್ತಿದ್ದ ಬಿಜೆಪಿ ಇದೀಗ ಅತ್ಯಂತ ಚಾಣಾಕ್ಷತನದಿಂದ ಮುಖ್ಯಮಂತ್ರಿ ಸ್ಥಾನವನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ನಿತೀಶ್ ಕುಮಾರ್ ಅವರನ್ನು ರಾಷ್ಟ್ರಕಾರಣದ ಹೆಸರಿನಲ್ಲಿ ರಾಜ್ಯಸಭೆಗೆ ಅಟ್ಟುವ ಮೂಲಕ, ಹಿಂಬಾಗಿಲಿನಿಂದ ಅಧಿಕಾರದ ಚುಕ್ಕಾಣಿ ಹಿಡಿಯುವ ಬಿಜೆಪಿಯ ತಂತ್ರಗಾರಿಕೆ ಈಗ ಬಯಲಾಗಿದೆ. ಪ್ರಾದೇಶಿಕ ಪಕ್ಷಗಳನ್ನು ಹತ್ತಿಕ್ಕಿ, ತನ್ನ ಮಿತ್ರಪಕ್ಷಗಳನ್ನೇ ನುಂಗಿ ನೀರು ಕುಡಿಯುವ ಬಿಜೆಪಿಯ ಎಂದಿನ ರಾಜಕಾರಣಕ್ಕೆ ಇದೀಗ ಜೆಡಿಯು ಕೂಡ ಬಲಿಯಾಗುತ್ತಿದೆ. ಮಿತ್ರಪಕ್ಷವನ್ನು ದುರ್ಬಲ ಮಾಡಿ, ತನ್ನ ಅಜೆಂಡಾವನ್ನು ಹೇರುವ ಬಿಜೆಪಿಯ ಈ ಅವಕಾಶವಾದಿ ನಡೆ ಮತ್ತೊಮ್ಮೆ ಬಯಲಾಗಿದೆ.
ನಿತೀಶ್ ಕುಮಾರ್ ಅವರ ‘ಅರಳುಮರಳು’ ವರ್ತನೆ ಮತ್ತು ವಿವಾದಗಳ ಸರಮಾಲೆ
ನಿತೀಶ್ ಕುಮಾರ್ ಅವರ ಈ ದಿಢೀರ್ ನಿರ್ಗಮನಕ್ಕೆ ಕೇವಲ ರಾಜಕೀಯ ಲೆಕ್ಕಾಚಾರಗಳಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ಅವರಲ್ಲಿ ಕಾಣಿಸಿಕೊಳ್ಳುತ್ತಿರುವ ಅರಳುಮರಳು (ವಯೋಸಹಜ ಮರೆವು ಮತ್ತು ವಿಲಕ್ಷಣ ವರ್ತನೆಗಳು) ಕೂಡ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ (ಡಿಸೆಂಬರ್ 2025ರಲ್ಲಿ) ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನೇಮಕಾತಿ ಪತ್ರ ನೀಡುವಾಗ ಮುಸ್ಲಿಂ ಮಹಿಳಾ ವೈದ್ಯೆಯೊಬ್ಬರ ಹಿಜಾಬ್ ಅನ್ನು ನಿತೀಶ್ ಕುಮಾರ್ ಅವರು ವೇದಿಕೆಯ ಮೇಲೆಯೇ ಎಳೆದಿದ್ದು ರಾಷ್ಟ್ರಮಟ್ಟದಲ್ಲಿ ಭಾರೀ ಆಕ್ರೋಶಕ್ಕೆ ಹಾಗೂ ಖಂಡನೆಗೆ ಗುರಿಯಾಗಿತ್ತು.
ಇದಲ್ಲದೆ, ಬಿಹಾರ ವಿಧಾನಸಭೆಯಲ್ಲಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ಅವರು ನೀಡಿದ್ದ ಅಸಭ್ಯ ಹಾಗೂ ಮುಜುಗರ ತರಿಸುವ ಹೇಳಿಕೆಗಳು, ಮಹಿಳಾ ಶಾಸಕರ ಮೇಲಿನ ರೇಗಾಟ ಹಾಗೂ “ಹಿಂದೆಲ್ಲಾ ಹೆಣ್ಣುಮಕ್ಕಳು ಬಟ್ಟೆ ಧರಿಸುತ್ತಿರಲಿಲ್ಲ” ಎಂಬಂತಹ ಆಧಾರರಹಿತ ಹೇಳಿಕೆಗಳು ವಿರೋಧ ಪಕ್ಷಗಳು ಅವರ ಮಾನಸಿಕ ಸ್ಥಿಮಿತದ ಬಗ್ಗೆಯೇ ಪ್ರಶ್ನೆ ಎತ್ತುವಂತೆ ಮಾಡಿದ್ದವು. ಈ ಸರಣಿ ಎಡವಟ್ಟುಗಳಿಂದ ಪಕ್ಷಕ್ಕೆ ಹಾಗೂ ಮೈತ್ರಿಕೂಟಕ್ಕೆ ಆಗುತ್ತಿರುವ ಭಾರೀ ಮುಜುಗರವನ್ನು ತಪ್ಪಿಸುವ ಉದ್ದೇಶದಿಂದಲೇ ಅವರನ್ನು ರಾಜ್ಯ ರಾಜಕಾರಣದಿಂದ ಗೌರವಯುತವಾಗಿ ‘ರಾಜ್ಯಸಭೆ’ಗೆ ಸಾಗಹಾಕಲಾಗುತ್ತಿದೆ ಎಂಬ ಮಾತುಗಳು ಕೂಡ ಬಲವಾಗಿ ಕೇಳಿಬರುತ್ತಿವೆ.





