ಬಿಹಾರದಲ್ಲಿ ನ.6ರಂದು ನಡೆದ ಮೊದಲ ಹಂತದ ಮತದಾನದ ವೇಳೆ ಎನ್‌ಡಿಎ ಭಾಗವಾಗಿರುವ ಲೋಕಜನಶಕ್ತಿ ಪಕ್ಷ (ಎಲ್‌ಜೆಪಿ) ಸಂಸದೆ ಶಾಂಭವಿ ಚೌಧುರಿ ಅವರ ಎರಡೂ ಕೈಗಳಲ್ಲಿ ಮತದಾನದ ಗುರುತಿನ ಶಾಯಿ ಕಂಡುಬಂದಿದೆ. ಅವರು ‘ವೋಟ್‌ಚೋರಿ’ (ಮತಗಳ್ಳತನ) ನಡೆಸಿದ್ದಾರೆ. ಕಳ್ಳ ಮತದಾನ ಮಾಡಿದ್ದಾರೆಂದು ವಿಪಕ್ಷಗಳು ಆರೋಪಿಸಿವೆ.
ಸಾಮಾಜಿಕ ಜಾಲತಾಣದಲ್ಲಿ ಶಾಂಭವಿ ಅವರ ವಿಡಿಯೋವೊಂದು ವೈರಲ್ ಆಗಿದೆ. ಅವರು ಬಂಕಿಪುರ ವಿಧಾನಸಭಾ ಕ್ಷೇತ್ರದ ಬುದ್ಧ ಕಾಲನಿಯ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಬಳಿಕ, ಅವರು ಛಾಯಾಗ್ರಾಹಕರಿಗೆ ಮುಂದೆ ತನ್ನ ಬಲಗೈನಲ್ಲಿ ಮತದಾನದ ಶಾಯಿಗುರುತನ್ನು ಪ್ರದರ್ಶಿಸಿದ್ದಾರೆ. ಆ ನಂತರ, ಅವರು ಇನ್ನೊಂದು ಕೈಯನ್ನೂ ಮೇಲಕ್ಕಿತ್ತಿದಾಗ, ಎಡಗೈನಲ್ಲೂ ಮತದಾನದ ಶಾಯಿ ಗುರುತು ಕಂಡುಬಂದಿದೆ.
ಆ ವಿಡಿಯೋ ವೈರಲ್ ಆಗಿದ್ದು, ಶಾಂಭವಿ ವಿರುದ್ಧ ಮತಗಳ್ಳತನದ ಆರೋಪಗಳು ಭುಗಿಲೆದ್ದಿವೆ. ಅವರು ಒಂದಕ್ಕಿಂತ ಹೆಚ್ಚು ಮತದಾನ ಮಾಡಿದ್ದಾರೆಂದು ಆರೋಪಿಸಲಾಗಿದೆ. ಆದಾಗ್ಯೂ, ಪಾಟ್ನಾ ಜಿಲ್ಲಾಡಳಿತವು ಸ್ಪಷ್ಟನೆ ನೀಡಿದ್ದು, “ಮತಗಟ್ಟೆಯ ಸಿಬ್ಬಂದಿ ತಪ್ಪಾಗಿ ಶಾಂಭವಿ ಅವರ ಬಲಗೈಗೆ ಶಾಯಿ ಹಚ್ಚಿದ್ದರು. ಆನಂತರ ಅವರ ಎಡಗೈಗೆ ಶಾಯಿ ಹಚ್ಚಿ ತಪ್ಪನ್ನು ಸರಿಪಡಿಸಿದ್ದಾರೆ” ಎಂದು ಹೇಳಿದೆ.




