ಬಿಹಾರ ವಿಧಾನಸಭಾ ಚುನಾವಣೆಗೆ ಮೂರು ವಾರಗಳು ಮಾತ್ರವೇ ಬಾಕಿ ಇವೆ. ರಾಜ್ಯದ 121 ಕ್ಷೇತ್ರಗಳಿಗೆ ನವೆಂಬರ್ 6ರಂದು ಮೊದಲ ಹಂತದ ಮತದಾನ ನಡೆಯಲಿದೆ. ಆದರೆ, ಎನ್‌ಡಿಎ ಮತ್ತು ಮಹಾಘಟಬಂಧನ್ ಮೈತ್ರಿಕೂಟದಲ್ಲಿ ಸೀಟು ಹಂಚಿಕೆಯ ಬಿಕ್ಕಟ್ಟು ಕಗ್ಗಂಟಾಗಿ ಉಳಿದಿದೆ. ಏತನ್ಮಧ್ಯೆ, ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಶುಕ್ರವಾರ (ಅ.17) ಕಡೆಯ ದಿನಾಂಕವಾದ್ದರಿಂದ ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. ಮಹಾಘಟಬಂಧನ್‌ನಲ್ಲಿ ಕಾಂಗ್ರೆಸ್-ಆರ್‌ಜೆಡಿ ನಡುವಿನ ತಿಕ್ಕಾಟದ ನಡುವೆ ಗುರುವಾರ ರಾತ್ರಿ ಕಾಂಗ್ರೆಸ್ ತನ್ನ 48 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ, ಈ ಪಟ್ಟಿ ಬಿಡುಗಡೆಗೂ ಮುನ್ನ ತನ್ನ ಮಿತ್ರ ಆರ್‌ಜೆಡಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಆರೋಪಗಳೂ ಕೇಳಿಬಂದಿವೆ.
ಕಳೆದ ಎರಡು-ಮೂರು ವಾರಗಳಿಂದ ಕಾಂಗ್ರೆಸ್-ಆರ್‌ಜೆಡಿ ಮತ್ತು ಇತರ ಮಿತ್ರಪಕ್ಷಗಳ ನಡುವೆ ಭಾರೀ ತಿಕ್ಕಾಟ ನಡೆಯುತ್ತಿತ್ತು. ಸೀಟು ಹಂಚಿಕೆಯಲ್ಲಿ ಮೈತ್ರಿ ಪಕ್ಷಗಳು ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ, ನಾಮಪತ್ರ ಸಲ್ಲಿಕೆಗೆ ಕಡೆಯ ದಿನದವರೆಗೂ ಬಿಕ್ಕಟ್ಟು ಮುಂದುವರೆದಿದೆ.
ಆರಂಭದಲ್ಲಿ ಸೀಟು ಹಂಚಿಕೆಯ ಕಸರತ್ತನ್ನು ಕಾಂಗ್ರೆಸ್ ಹೈಕಮಾಂಡ್ ಪಕ್ಷದ ರಾಜ್ಯ ನಾಯಕರಿಗೆ ಬಿಟ್ಟಿತ್ತು. ಆದರೆ, ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿ (ಬಿಪಿಸಿಸಿ) ಪದಾಧಿಕಾರಿಗಳು ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸುವಲ್ಲಿ ವಿಫಲವಾಗಿದ್ದರು. ಆನಂತರ, ಕಾಂಗ್ರೆಸ್ ಹೈಕಮಾಂಡ್ ನೇರವಾಗಿ ಚುನಾವಣಾ ಅಖಾಡಕ್ಕೆ ಇಳಿಯಿತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಆರ್‌ಜೆಡಿ ಸಂಸ್ಥಾಪಕ ಲಾಲು ಪ್ರಸಾದ್ ಯಾದವ್ ಮತ್ತು ಇತರ ಮಿತ್ರರೊಂದಿಗೆ ಹಲವು ಸುತ್ತುಗಳ ಮಾತುಕತೆ ನಡೆಸಿ, ಸೀಟು ಹಂಚಿಕೆಯ ತಿಕ್ಕಾಟಕ್ಕೆ ತಿಲಾಂಜಲಿ ಹಾಡಿದರು.
ಸೀಟು ಹಂಚಿಕೆಯ ಅಂತಿಮ ನಿರ್ಧಾರದಂತೆ ಬಿಹಾರದ ಒಟ್ಟು 243 ಕ್ಷೇತ್ರಗಳ ಪೈಕಿ, ಆರ್‌ಜೆಡಿಗೆ 120, ಕಾಂಗ್ರೆಸ್‌ಗೆ 48, ಸಿಪಿಐ(ಎಂಎಲ್)ಗೆ 20, ವಿಐಪಿಗೆ 15, ಸಿಪಿಐಗೆ 15, ಸಿಪಿಐಎಂಗೆ 10, ಜೆಎಂಎಂಗೆ 5 ಹಾಗೂ ಇತರ ಸಣ್ಣ ಪಕ್ಷಗಳಿಗೆ 10 ಸ್ಥಾನಗಳನ್ನು ಹಂಚಿಕೆ ಮಾಡಿಕೊಂಡಿವೆ. ಕಾಂಗ್ರೆಸ್ ತನ್ನ ಪಾಲಿನ ಎಲ್ಲ 48 ಕ್ಷೇತ್ರಗಳಿಗೂ ಗುರುವಾರ ರಾತ್ರಿ ಅಭ್ಯರ್ಥಿಗಳನ್ನು ಘೋಷಿಸಿದೆ.
ಮಹಾಘಟಬಂಧನ್ ಮೈತ್ರಿಕೂಟದೊಳಗೆ ಕ್ಷೇತ್ರ ಹಂಚಿಕೆಯ ಕಸರತ್ತು ಅಂತ್ಯಗೊಂಡಿದ್ದರೂ, ಬಿಕ್ಕಟ್ಟು ಮುಂದುವರೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ವಿಕಾಸ್‌ಹೀಲ್ ಇನ್‌ಸಾನ್ ಪಾರ್ಟಿ(ವಿಐಪಿ) ಸೇರಿದಂತೆ ಕೆಲವು ಸಣ್ಣ ಪಕ್ಷಗಳು ಹೆಚ್ಚಿನ ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದವು. ಆದರೆ, ತಮ್ಮ ಬೇಡಿಕೆಯಷ್ಟು ಸ್ಥಾನಗಳು ದೊರೆಯದ ಕಾರಣ ಆ ಪಕ್ಷಗಳು ಸಿಟ್ಟಾಗಿವೆ. ಮಾತ್ರವಲ್ಲದೆ, ಕಾಂಗ್ರೆಸ್ ಹೈಕಮಾಂಡ್ ಕ್ಷೇತ್ರ ಹಂಚಿಕೆಯನ್ನು ಅಂತಿಮಗೊಳಿಸಿ, ಒಪ್ಪಿಕೊಂಡಿದ್ದರೂ, ಕೇವಲ 48 ಸ್ಥಾನಗಳಿಗೆ ಒಪ್ಪಿಕೊಂಡಿರುವುದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಒಪ್ಪಿಗೆಯಾಗಿಲ್ಲ. ಹೀಗಾಗಿ, ಮೈತ್ರಿಯೊಳಗೆ ಅಸಹನೆ, ಅಸಹಕಾರ ಎದುರಾಗುವ ಸಾಧ್ಯತೆಗಳೂ ಇವೆ.
ವಿಪಕ್ಷಗಳ ಮೈತ್ರಿಯೊಳಗಿನ ಬಿಕ್ಕಟ್ಟು ಮುಸ್ಲಿಮರು ಮತ್ತು ಯಾದವ್ ಸಮುದಾಯಗಳ ಮತಗಳ ಮೇಲೆ ಪರಿಣಾಮ ಬೀರಬಹುದು. ಬಿಹಾರದಲ್ಲಿ ಮುಸ್ಲಿಮರು ಮತ್ತು ಯಾದವರು ಆರ್‌ಜೆಡಿ-ಕಾಂಗ್ರೆಸ್ ಪರವಾಗಿದ್ದಾರೆ. ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಪುತ್ರ, ಮಹಾಘಟಬಂಧನ್‌ನ ಮುಖ್ಯಮಂತ್ರಿ ಮುಖ ತೇಜಸ್ವಿ ಯಾದವ್ ಅವರು ಯಾದವ್ ಸಮುದಾಯಕ್ಕೆ ಸೇರಿದವರು. ಈ ಸಮುದಾಯದಲ್ಲಿ ಆರ್‌ಜೆಡಿ ಉತ್ತಮ ಮತಬ್ಯಾಂಕ್ ಹೊಂದಿದೆ. ಅಂತೆಯೇ ಮುಸ್ಲಿ ಮತಗಳಲ್ಲಿ ಹೆಚ್ಚು ಮತದಾರರು ಕಾಂಗ್ರೆಸ್ ಮತ್ತು ಆರ್‌ಜೆಡಿ ಮೇಲೆ ಒಲವು ಹೊಂದಿದ್ದಾರೆ.
2023ರ ಬಿಹಾರ ಜಾತಿ ಜನಗಣತಿಯ ಪ್ರಕಾರ, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಯಾದವರು 14.26% ಮತ್ತು ಮುಸ್ಲಿಮರು 17.70% ಇದ್ದಾರೆ. ಯಾದವರು ಬಿಹಾರದಲ್ಲಿರುವ ಒಟ್ಟು 43% ಒಬಿಸಿಗಳಲ್ಲಿ ಪ್ರಮುಖ ಪಾಲು ಹೊಂದಿದ್ದಾರೆ. ಇವರಲ್ಲದೆ, ಪರಿಶಿಷ್ಟ ಜಾತಿಗಳು 20%, ಆರ್ಥಿಕವಾಗಿ ದುರ್ಬಲ ವರ್ಗಗಳು (ಇಬಿಸಿ) 10%, ಪರಿಶಿಷ್ಟ ಪಂಗಡಗಳು 2%, ಮತ್ತು ಸಾಮಾನ್ಯ ವರ್ಗವು 9.5% ಇದ್ದಾರೆ.
ಈ ಲೇಖನ ಓದಿದ್ದೀರಾ?: ನಿತೀಶ್ ಅಲ್ಲ, ತೇಜಸ್ವಿ ಅಲ್ಲ, ಮೋದಿಯೂ ಅಲ್ಲ- ಬಿಹಾರದ ಭವಿಷ್ಯ ನಿರ್ಧರಿಸಲಿವೆ 11 ಶಕ್ತಿಗಳು
ಯಾದವರು ಮತ್ತು ಮುಸ್ಲಿಮರು ಸೇರಿ ಒಟ್ಟು 27.96% ಜನಸಂಖ್ಯೆಯನ್ನು ಹೊಂದಿದ್ದು, ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಈ ಸಮುದಾಯಗಳ ಮತಗಳು ಚದುರಿಹೋಗದಂತೆ ನೋಡಿಕೊಳ್ಳುವುದು ಮತ್ತು ಎಸ್‌ಸಿ, ಇಬಿಸಿ ಹಾಗೂ ಎಸ್‌ಟಿ ಸಮುದಾಯಗಳ ಮತಗಳಲ್ಲಿ ಬಹುಪಾಲು ಮತಗಳನ್ನು ಪಡೆಯಲು ಸಾಧ್ಯವಾದರೆ ಮಾತ್ರವೇ ಬಿಹಾರದಲ್ಲಿ ಮಹಾಘಟನಬಂಧನ್ ಸರ್ಕಾರ ರಚಿಸಲು ಸಾಧ್ಯವಾಗುತ್ತದೆ.
ಆದರೆ, ಇದು ಮೈತ್ರಿಯೊಳಗೆ ಸವಾಲಾಗಿ ಕಾಣುತ್ತಿದೆ. ಸ್ವಪ್ರತಿಷ್ಠೆ, ಸ್ಥಾನ ಹಂಚಿಕೆಯ ಅಸಮಾಧಾನ, ಸ್ಥಳೀಯ ಜಿದ್ದು ಇವೆಲ್ಲವೂ ಮೈತ್ರಿಯೊಳಗಿನವರೇ ಮತಗಳ ಮೇಲೆ ಪರಿಣಾಮ ಬೀರಬಹುದಾದ ಸಂಗತಿಗಳಾಗಿವೆ. ಜೊತೆಗೆ, ಓವೈಸಿ ಅವರ ಎಐಎಂಐಎಂ ಮತ್ತು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜೆಎಸ್‌ಪಿ ಕೂಡ ಸ್ವತಂತ್ರವಾಗಿ ಸ್ಪರ್ಧೆಗಿಳಿದಿವೆ. ಈ ಎರಡೂ ಪಕ್ಷಗಳು ಪ್ರಧಾನವಾಗಿ ಮುಸ್ಲಿಮರು, ಒಬಿಸಿ ಮತಗಳನ್ನು ಚದುರಿಸುವ ಸಾಧ್ಯತೆಗಳಿವೆ. ಜೊತೆಗೆ, ಜೆಎಸ್‌ಪಿ ಎಲ್ಲ ವರ್ಗಗಳ ಯುವಜನರ ಮತಗಳ ಮೇಲೆ ಹೆಚ್ಚು ಪ್ರಭಾವ ಬೀರಬಹುದು. ಇದು ಎನ್‌ಡಿಎ ಮತ್ತು ಮಹಾಘಟಬಂಧನ್ ಎರಡೂ ಮೈತ್ರಿಗಳ ಮೇಲೆ ಪ್ರಭಾವ ಬೀರಬಹುದು.
ಜೊತೆಗೆ, ಇತ್ತೀಚೆಗೆ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರವು ಮಹಿಳಾ ಮತದಾರರನ್ನು ತನ್ನತ್ತ ಸೆಳೆಯಲು ಭಾರೀ ತಂತ್ರವನ್ನು ಜಾರಿಗೊಳಿಸಿದೆ. ಚುನಾವಣೆಯ ಹೊಸ್ತಿಲಿನಲ್ಲಿ ಬಿಹಾರ ಸರ್ಕಾರವು ಮಹಿಳಾ ರೋಜ್‌ಗಾರ್ ಯೋಜನೆಯಡಿ ರಾಜ್ಯದ 3.5 ಕೋಟಿ ಮಹಿಳೆಯರಿಗೆ ತಲಾ 10,000 ರೂ.ಗಳನ್ನು ನೇರವಾಗಿ ವರ್ಗಾವಣೆ ಮಾಡಿದೆ. ಇದು, ಮಹಿಳಾ ಮತದಾರರನ್ನು ಪ್ರಭಾವಿಸಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ.
ಮುಸ್ಲಿಮರು, ಒಸಿಬಿಗಳು, ಯುವಜನರು ಹಾಗೂ ಮಹಿಳಾ ಮತದಾರರನ್ನು ಮೈತ್ರಿಯೇತರ ಪಕ್ಷಗಳು ಮತ್ತು ಎನ್‌ಡಿಎ ಮೈತ್ರಿಕೂಟವು ಪ್ರಭಾವಿಸುತ್ತಿರುವ ಸಮಯದಲ್ಲಿ, ಮಹಾಘಟಬಂಧನ್ ಹೆಚ್ಚು ಒಗ್ಗಟ್ಟಿನಿಂದ ಪರಿಣಾಮಕಾರಿಯಾಗಿ ಚುನಾವಣೆಯನ್ನು ಎದುರಿಸಬೇಕಿದೆ. ಒಗ್ಗಟ್ಟಿನಲ್ಲಿ ಕೂದಲೆಳೆಯಷ್ಟು ಬಿರುಕು ಬಿಟ್ಟರೂ, ಅದರ ಲಾಭ ಎದುರಾಳಿಗಳ ಪಾಲಾಗಲಿದೆ.




